ಕಾರ್ಕಳದ ರಂಗ ಸಂಸ್ಕೃತಿ ಸಂಸ್ಥೆಯ ದಶಮಾನೋತ್ಸವದ ನಾಟಕ ಹಬ್ಬ
ಸಹಜ ಪ್ರತಿಭೆಯಿಂದ ಗೆದ್ದ ಆಳ್ವಾಸ್ ರಂಗ ಶಿಕ್ಷಣದ ವಿದ್ಯಾರ್ಥಿಗಳು
ಕನ್ನಡದ ಖ್ಯಾತ ಲೇಖಕಿಯಾದ ವೈದೇಹಿ ಅವರು ಬರೆದ ‘ನಾಯಿ ಮರಿ ‘ ನಾಟಕವು ಮಾರ್ಚ್ 21ರಂದು ಕಾರ್ಕಳದ ರಂಗ ಸಂಸ್ಕೃತಿ ಸಂಸ್ಥೆಯ ದಶಮಾನೋತ್ಸವದ ಅಂಗವಾಗಿ ನಡೆದ 4 ದಿನಗಳ ನಾಟಕೋತ್ಸವದ ಮೊದಲ ದಿನ ವೇದಿಕೆ ಏರಿತು. ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಪದವಿ ಪೂರ್ವ ತರಗತಿಯ ವಿದ್ಯಾರ್ಥಿಗಳು ಖ್ಯಾತ ರಂಗ ನಿರ್ದೇಶಕ ಜೀವನ್ ರಾಮ್ ಸುಳ್ಯ ಅವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಪ್ರಸ್ತುತ ಪಡಿಸಿದ ನಾಟಕ ಇದು. ಇಲ್ಲಿ ಯಾವುದೇ ವೃತ್ತಿಪರ ಕಲಾವಿದರು ಇರಲಿಲ್ಲ. ಕೇವಲ ಹದಿಹರೆಯದ ವಿದ್ಯಾರ್ಥಿಗಳನ್ನು ತರಬೇತಿ ನೀಡಿ ಅವರನ್ನು ಒಂದು ಒಳ್ಳೆಯ ರಂಗಭಾಷೆಗೆ ಸಿದ್ದಮಾಡಿದ ಕೀರ್ತಿ, ಅದು ರಂಗ ದಶಾವತಾರಿ ಜೀವನ್ ರಾಮ್ ಸುಳ್ಯ ಅವರಿಗೆ ಸಲ್ಲಬೇಕು.

ನಾಟಕದ ಥೀಮ್ ಹೇಗಿದೆ?
ಒಂದು ಊರಲ್ಲಿ ಅಜ್ಜ, ಅಜ್ಜಿಯರನ್ನು ಒಳಗೊಂಡ ಒಂದು ಸಣ್ಣ ಕುಟುಂಬ. ಸಣ್ಣಮ್ಮ ಆ ಮನೆಯ ಅಂದವನ್ನು ಹೆಚ್ಚಿಸಿದ ಒಬ್ಬಳು ಮೊಮ್ಮಗಳು. ಹಾಗೆಯೇ ಯಾವಾಗಲೂ ಅವಳ ಮುಗ್ಧತೆಗೆ ಬೇಲಿಯಾಗಿರುವ ಒಂದು ಚಿಂವ್ ಚೆಂವ್ ಎನ್ನುವ ಗಿಳಿ.
ಅಜ್ಜ ಅಜ್ಜಿ ಕಷ್ಟಪಟ್ಟು ಮಾಡಿರುವ ಒಂದು ತೋಟ. ಅದನ್ನು ಕಾಯಲು ಅಜ್ಜ ಮತ್ತು ಮನೆಯವರು ಒಂದು ನಾಯಿಮರಿಯನ್ನು ತಂದು ಸಾಕುತ್ತಾರೆ. ಆ ನಾಯಿಮರಿಯನ್ನು ತುಂಬಾ ಹಚ್ಚಿಕೊಂಡು ಪ್ರೀತಿ ಮಾಡುವ ಸಣ್ಣಮ್ಮ ಎಂಬ ಮುಗ್ಧ ಮೊಮ್ಮಗಳು.

ಇಬ್ಬರು ಕಳ್ಳರು ಮತ್ತು ಒಂದು ಕೋತಿ ಆ ತೋಟದ ಹಣ್ಣನ್ನು ಕದ್ದು ತಿನ್ನಲು ಬರುವಾಗ ಆ ನಾಯಿ ಅವರನ್ನು ತಡೆಯುತ್ತದೆ. ಇದರಿಂದ ಸಿಟ್ಟಾದ ಆ ಕಳ್ಳರು ತೋಟವನ್ನು ನಾಶಮಾಡಿ ಆ ನಾಯಿಯ ಗೂಡನ್ನು ಒಡೆದುಹಾಕಿ ಆ ನಾಯಿಯನ್ನು ಕದ್ದುಕೊಂಡು ಹೋಗುತ್ತಾರೆ. ಆ ನಾಯಿಯನ್ನು ಹೊಡೆದು ಸಾಯಿಸಲು ಪ್ರಯತ್ನ ಮಾಡುತ್ತಾರೆ. ತುಂಬಾ ಗಾಯಗೊಂಡ ನಾಯಿಮರಿಯನ್ನು ಮತ್ತೆ ಮನೆಗೆ ಕರೆದುಕೊಂಡು ಬಂದು ಅದನ್ನು ಬದುಕಿಸಲು ಸಣ್ಣಮ್ಮ ಎಂಬ ಪುಟ್ಟ ಹುಡುಗಿಯು ತೆಗೆದುಕೊಳ್ಳುವ ಶ್ರಮದ ಕತೆಯೇ ಈ ನಾಟಕದ ಉತ್ತರಾರ್ಧ.
ಕೊನೆಯಲ್ಲಿ ನಾಯಿಮರಿ ಹೇಗೆ ಬದುಕಿತು? ಕಳ್ಳರು ಏನಾದರು? ಎನ್ನುವ ಪ್ರಶ್ನೆಗಳಿಗೆ ನಾಟಕದ ಕ್ಲೈಮಾಕ್ಸನಲ್ಲಿ ಉತ್ತರ ದೊರೆಯುತ್ತದೆ. ಎಲ್ಲಿಯೂ ಕ್ಲೀಷೆ, ಕೃತಕತೆ, ಮೆಲೋಡ್ರಾಮಾ ಯಾವುದಕ್ಕೂ ಅವಕಾಶ ಕೊಡದೆ ಎಲ್ಲವೂ ಸಹಜವಾಗಿ ಸಾಗುತ್ತ ನಾಟಕವು ನಿಮ್ಮನ್ನು ಒಂದು ಮಕ್ಕಳ ಫ್ಯಾಂಟಸಿಯ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಅದು ಈ ನಾಟಕದ ಶಕ್ತಿ.

ಲೇಖಕಿ ವೈದೇಹಿಯವರು ಮಕ್ಕಳ ಮಟ್ಟಕ್ಕೆ ಇಳಿದು ಈ ನಾಟಕವನ್ನು ಬರೆದ ಕಾರಣ ಇಡೀ ನಾಟಕವು ಮಕ್ಕಳ ಭಾವನೆಗಳಿಗೆ ಕನೆಕ್ಟ್ ಆಗುತ್ತದೆ. ಅಜ್ಜ ಹೇಳಿದ ಕನಸಿನ ಕತೆಯನ್ನು ಕೂಡ ಸಹಜವಾಗಿ ಹೇಳಲಾಗಿದೆ. ಅಲ್ಲಿ ಬರುವ ಮೈನಾ ಹಕ್ಕಿ, ಮೂರು ಪುಟ್ಟ ಹಕ್ಕಿಯ ಮರಿಗಳು, ಬ್ರಹ್ಮರಾಕ್ಷಸ, ಯಕ್ಷಿಣಿ ಎಲ್ಲವೂ ಸಹಜ ಸುಂದರವಾಗಿ ಮಕ್ಕಳ ಕನಸಿನ ಲೋಕಕ್ಕೆ ಲಗ್ಗೆ ಇಡುತ್ತವೆ.
ಸುಮಾರು ಎರಡು ಘಂಟೆಯ ಅವಧಿಯ ಈ ನಾಟಕದ ಉದ್ದಕ್ಕೂ ವಿದ್ಯಾರ್ಥಿಗಳ ಸಹಜ ಅಭಿನಯ, ಸುಂದರವಾದ ಹಾಡುಗಳು, ಹಿನ್ನೆಲೆ ಸಂಗೀತ, ರಂಗ ಸಜ್ಜಿಕೆಗಳು, ವಸ್ತ್ರವಿನ್ಯಾಸಗಳು ಗಮನ ಸೆಳೆಯುತ್ತವೆ.
ಮಾನವೀಯತೆಯ ಒರತೆಗಳಾದ ಪಾತ್ರಗಳು
ಅಜ್ಜ, ಅಜ್ಜಿ, ಸಣ್ಣಮ್ಮ, ಪಂಚರಂಗಿ ಎಂಬ ಗಿಣಿ, ಸಂತೆಯಲ್ಲಿ ಬಟ್ಟೆ ಹೊಲಿದು ಕೊಡುವ ಮುಸ್ತಾಫಾ ದರ್ಜಿ, ರಿಬ್ಬನ್ ಅಕ್ಕಾ, ಪಾತ್ರೆ ಮಾರುವ ಆಂಟಿ ಎಲ್ಲವೂ ಕತೆಯ ಅಂತರ್ ದೃವ್ಯವಾಗಿರುವ ಮಾನವೀಯತೆಯ ಒರತೆಗಳಾಗಿ ನಮಗೆ ಕಾಣುತ್ತಾರೆ. ಸಣ್ಣಮ್ಮ ಎಂಬ ಪುಟ್ಟ ಹುಡುಗಿಯು ನಾಯಿಮರಿಯ ಬಗ್ಗೆ ತೋರುವ ಪ್ರೀತಿ ಮತ್ತು ಕಾಳಜಿಗಳು ಪ್ರೇಕ್ಷಕರ ಹೃದಯವನ್ನು ತಟ್ಟುತ್ತವೆ. ಆ ಹುಡುಗಿಯ ಅಭಿನಯವೂ ಫುಲ್ ಮಾರ್ಕ್ ಪಡೆಯುತ್ತದೆ. ನಾಯಿಮರಿಯು ನೋವಿನಲ್ಲಿ ತೋರಿದ ಆರ್ದ್ರತೆ, ಕೀರಲು ಧ್ವನಿ ಮತ್ತು ದೇಹ ಭಾಷೆಗಳು ಕೂಡ ನಾಟಕವನ್ನು ಗೆಲ್ಲಿಸುತ್ತವೆ. ಅಜ್ಜ ಹೇಳುವ ಜೋಗುಳದ ಹಾಡನ್ನು ಕೇಳುತ್ತ ಮೊಮ್ಮಗಳು ಮೈಮರೆಯುವ ದೃಶ್ಯ, ನಾಯಿ ಮತ್ತು ಪಂಚರಂಗಿ ಗಿಣಿಗಳು ಅವುಗಳದ್ದೇ ಭಾಷೆಯಲ್ಲಿ ಸಂವಹನ ಮಾಡುವುದು, ಕಳ್ಳರು ಹೊಡೆದಾಗ ನಾಯಿ ಮಾಡುವ ಆಕ್ರಂದನ…..ಈ ದೃಶ್ಯಗಳು ನಾಯಿಮರಿ ನಾಟಕದ ಹೈಲೈಟ್ ದೃಶ್ಯಗಳು. ಅವು ನಮ್ಮನ್ನು ಗಾಢವಾಗಿ ತಲುಪುತ್ತದೆ.

ಹದಿಹರೆಯದ ಕಾರಣಕ್ಕೆ ಒಂದೆರಡು ಹುಡುಗರ ಒಡೆದು ಹೋದ ಧ್ವನಿಗಳು ಸ್ವರಭಾರಕ್ಕೆ ತುಸು ತೊಂದರೆ ಕೊಟ್ಟದ್ದನ್ನು ಬಿಟ್ಟರೆ ಪ್ರತಿಯೊಬ್ಬರ ಅಭಿನಯವೂ ಈ ನಾಟಕದ ಯಶಸ್ಸಿಗೆ ಕಾಣಿಕೆ ಕೊಡುತ್ತವೆ. ನಾಟಕದ ಪ್ರತೀಯೊಂದು ಪಾತ್ರಕ್ಕೂ ಬೇರೆ ಬೇರೆ ದೇಹಭಾಷೆ, ಮ್ಯಾನರಿಸಂ ರೂಪಿಸುವ ನಿರ್ದೇಶಕ ಜೀವನರಾಮ್ ಅವರು ತಾನು ಎಂತಹ ಶ್ರೇಷ್ಠ ನಿರ್ದೇಶಕ ಎಂಬುದನ್ನು ಈ ನಾಟಕದಲ್ಲಿ ಮತ್ತೆ ನಿರೂಪಿಸಿದ್ದಾರೆ. ಅವರು ತಾನು ಕಲಿತ ಮ್ಯಾಜಿಕ್ ಕಲೆಯನ್ನು ಈ ನಾಟಕಕ್ಕೆ ಪೂರಕವಾಗಿ ಉಪಯೋಗ ಮಾಡಿದ್ದಾರೆ. ಧ್ವನಿ ಮತ್ತು ಬೆಳಕಿನ ವಿನ್ಯಾಸಗಳೂ ಅದ್ಭುತವಾಗಿಯೇ ಇದೆ.
ಹಿನ್ನೆಲೆ ಸಂಗೀತದಲ್ಲಿ (ಮನುಜ ನೇಹಿಗ, ಗೀತಮ್ ಸುರೇಶ್, ಜೀವನರಾಮ್ ಸುಳ್ಯ) ಅದ್ಭುತ ಚುಂಬಕ ಶಕ್ತಿ ಇದೆ. ಇಡೀ ನಾಟಕದ ವೇದಿಕೆಯನ್ನು ಆವರಿಸುವ ಕಲಾವಿದರ ಚುರುಕಿನ ನಡೆಗಳು ನಾಟಕದ ವೇಗವನ್ನು ಹೆಚ್ಚಿಸುತ್ತವೆ.

ಭರತ ವಾಕ್ಯ
ಒಟ್ಟಿನಲ್ಲಿ ಈ ‘ನಾಯಿಮರಿ’ ಎಂಬ ನಾಟಕದ ಮೂಲಕ ಲೇಖಕರು ಮತ್ತು ನಿರ್ದೇಶಕರು ಮಾನವೀಯತೆಯ ಮೌಲ್ಯಗಳನ್ನು ಇಡೀ ನಾಟಕದಲ್ಲಿ ಬಿತ್ತುತ್ತಾ ಹೋಗಿದ್ದಾರೆ. ಅದ್ಭುತವಾದ ಸಂದೇಶ ಇರುವ ಸರಳ ನಾಟಕ ಇದು. ಪ್ರಾಣಿಗಳನ್ನು ಪ್ರೀತಿಸುವ ಪ್ರತಿಯೊಬ್ಬನೂ ನೋಡಬೇಕಾದ ನಾಟಕ ಇದು. ಇದರ ಸಾಕ್ಷಾತ್ಕಾರಕ್ಕೆ ಕಾರಣರಾದ ರಂಗ ಸಂಸ್ಕೃತಿಯ ಅಧ್ಯಕ್ಷ ಎಸ್. ನಿತ್ಯಾನಂದ ಪೈ, ಸಂಚಾಲರಾದ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ, ಸಂಪೂರ್ಣ ಕಾರ್ಯಕಾರಿ ಸಮಿತಿ, ಆಯೋಜಕರ ನೆರವಿಗೆ ನಿಂತ ಕಾರ್ಕಳದ ಮಂಜುನಾಥ್ ಪೈ ಸಾಂಸ್ಕೃತಿಕ ಪ್ರತಿಷ್ಠಾನ( ರಿ), ನಾಟಕ ಆರಂಭ ಆಗುವ ಮೊದಲೇ ಹೌಸ್ ಫುಲ್ ಆಗಿ ತುಂಬಿದ ಕಾರ್ಕಳದ ಸಹೃದಯ ನಾಟಕದ ಅಭಿಮಾನಿಗಳು ಎಲ್ಲರೂ ಈ ನಾಟಕದ ಯಶಸ್ಸಿನ ನಿಜವಾದ ರೂವಾರಿಗಳು.
ಫೋಟೋ ಕೃಪೆ : ಶೃಂಗಾರ್ ಬೈಂದೂರು


















































