ಸಂಪಾದಕೀಯ- ಅಧಿಕಾರದ ಅಮಲಿನಲ್ಲಿ ಕೊಚ್ಚಿಹೋದ ರಾಜಕೀಯ ನೈತಿಕತೆ

ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿ ರಾಜಕೀಯ ನಾಯಕರ ಬಂಧನವಾಗುವುದರಲ್ಲಿ ಅಚ್ಚರಿಯೇನೂ ಇಲ್ಲ. ಸ್ವಾತಂತ್ರ್ಯ ಲಭಿಸಿ ನಮ್ಮನ್ನು ನಾವೇ ಆಳಲು ತೊಡಗಿದ ಬಳಿಕ ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರವೆಂಬುದು ಜತೆಜತೆಗೆ ಬೆಳೆದು ಬಂದಿದೆ. ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ಭ್ರಷ್ಟಾಚಾರ ಪರಾಕಾಷ್ಠೆಯನ್ನು ತಲುಪಿತ್ತು. ಈ ಸಂದರ್ಭದಲ್ಲೇ ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ, ಬಾಬಾ ರಾಮ್‌ದೇವ್‌ ಮುಂತಾದವರು ಚಳವಳಿ ಮಾಡಿದ್ದು. ಇದರಲ್ಲಿ ಇಡೀ ದೇಶದ ಗಮನ ಸೆಳೆದದ್ದು ಮತ್ತು ದೇಶದ ರಾಜಕೀಯದ ದಿಕ್ಕು ಬದಲಿಸಿದ್ದು ಅಣ್ಣಾ ಹಜಾರೆ ಮಾಡಿದ ಚಳವಳಿ.

ಈ ದೇಶ ಭ್ರಷ್ಟಾಚಾರದಿಂದಾಗಿ ಎಂದಿಗೂ ಉದ್ಧಾರವಾಗುವುದು ಸಾಧ್ಯವಿಲ್ಲ, ರಾಜಕಾರಣಿಗಳಲ್ಲಿ ಪ್ರಾಮಾಣಿಕತೆ ಸತ್ತುಹೋಗಿದೆ ಎಂಬ ಘೋರ ನಿರಾಶಭಾವವೊಂದು ದೇಶದಲ್ಲಿ ಆವರಿಸಿದ್ದ ಸಮಯದಲ್ಲಿ ಹಜಾರೆ ಭ್ರಷ್ಟಾಚಾರದ ವಿರುದ್ಧ ಮಾಡಿದ ಚಳವಳಿ ಜನರಲ್ಲಿ ಹೊಸ ನಿರೀಕ್ಷೆಯೊಂದನ್ನು ಹುಟ್ಟುಹಾಕಿತ್ತು. ಈ ಚಳವಳಿಯ ಮೂಲಕ ಹೊರಹೊಮ್ಮಿದವರೇ ಅರವಿಂದ ಕೇಜ್ರಿವಾಲ್‌, ಯೋಗೇಂದ್ರ ಯಾದವ್‌, ಮನೀಷ್‌ ಸಿಸೊಡಿಯ ಮುಂತಾದ ನವನಾಯಕರು.

ಹಜಾರೆ ಚಳವಳಿ ಬಳಿಕ ದೇಶದ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಗಳು ಆಗಿ ಹೋದವು. ಹಜಾರೆಯವರ ತೀವ್ರ ವಿರೋಧ ಇರುವ ಹೊರತಾಗಿಯೂ ಅವರ ಪಟ್ಟಶಿಷ್ಯ ಎಂದು ಗುರುತಿಸಿಕೊಂಡಿದ್ದ ಕೇಜ್ರಿವಾಲ್‌ ಆಮ್‌ ಆದ್ಮಿ ಪಾರ್ಟಿ ಸ್ಥಾಪಿಸಿ ರಾಜಕೀಯಕ್ಕೆ ಧುಮುಕಿದ್ದು, ದಿಲ್ಲಿಯಲ್ಲಿ ಎರಡೆರಡು ಅವಧಿಗೆ ಎಲ್ಲ ಸ್ಥಾನಗಳನ್ನು ಗೆದ್ದು ಮುಖ್ಯಮಂತ್ರಿಯಾದದ್ದು, ಆಮ್‌ ಆದ್ಮಿ ಪಾರ್ಟಿ ಇಡೀ ದೇಶಕ್ಕೆ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡದ್ದೆಲ್ಲ ಭಾರತದ ರಾಜಕೀಯ ವ್ಯವಸ್ಥೆಯ ರೋಚಕ ಅಧ್ಯಾಯ ಎನ್ನಬಹುದು.

ಭ್ರಷ್ಟಾಚಾರದ ಕೊಳಕು ಮೆತ್ತಿಕೊಂಡು ಜಡ್ಡುಗಟ್ಟಿ ಹೋಗಿದ್ದ ಭಾರತದ ರಾಜಕಾರಣ ವ್ಯವಸ್ಥೆಗೆ ಕೇಂಜ್ರಿವಾಲ್‌ ಪ್ರವೇಶ ಹೊಸ ಹುರುಪು ನೀಡಿತ್ತು. ಭಾರತದ ಸಾಂಪ್ರದಾಯಕ ರಾಜಕೀಯ ಪಕ್ಷಗಳಿಗಿಂತ ಭಿನ್ನವಾಗಿ ತನ್ನನ್ನು ಗುರುತಿಸಿಕೊಂಡಿದ್ದ ಆಮ್‌ ಆದ್ಮಿ ಪಾರ್ಟಿ ಮತ್ತು ಕೇಜ್ರಿವಾಲ್‌ ಹೊಸ ರೀತಿಯ ನಾಯಕತ್ವದ ಭರವಸೆ ಮೂಡಿಸಿದ್ದರು. ಆದರೆ ಬರಬರುತ್ತಾ ರಾಯರ ಕುದುರೆ ಕತ್ತೆಯಾಯಿತು ಎಂಬ ಮಾತಿನಂತೆ ವರ್ಷಗಳು ಕಳೆದಂತೆ ಕೇಜ್ರಿವಾಲ್‌ ಪಕ್ಷವೂ ಉಳಿದ ಪಕ್ಷಗಳ ಜಾಡಿನಲ್ಲಿ ಸಾಗಿದ್ದು ಮಾತ್ರ ಈ ದೇಶದ ರಾಜಕೀಯದ ದುರಂತವೆಂದೇ ಹೇಳಬಹುದು. ಭ್ರಷ್ಟಾಚಾರದ ವಿರುದ್ಧ ಬಹಿರಂಗ ಸಮರ ಸಾರಿ, ಅದನ್ನೇ ಬಂಡವಾಳ ಮಾಡಿಕೊಂಡು ಮುಖ್ಯಮಂತ್ರಿಯಾದ ಜನ ಸಾಮಾನ್ಯ ವ್ಯಕ್ತಿಯೊಬ್ಬ ಕೊನೆಗೆ ಅದೇ ಭ್ರಷ್ಟಾಚಾರದ ಮಡುವಿನಲ್ಲಿ ಬಿದ್ದು ಮೈತುಂಬ ಕಳಂಕ ಮೆತ್ತಿಕೊಂಡು ಜೈಲುಪಾಲಾದದ್ದು ವಿಪರ್ಯಾಸವೇ ಸರಿ.
ಮದ್ಯನೀತಿ ಹಗರಣದಲ್ಲಿ ಸೆರೆಯಾಗಿರುವ ಕೇಜ್ರಿವಾಲ್‌ ನೈತಿಕ ನೆಲೆಯಲ್ಲಿ ವೈಯಕ್ತಿಕವಾಗಿ ಮಾತ್ರ ಕುಸಿದದ್ದಲ್ಲ ಈ ದೇಶದ ಕೋಟಿಗಟ್ಟಲೆ ಜನರ ನಿರೀಕ್ಷೆಯೂ ಕುಸಿಯುವಂತೆ ಮಾಡಿದರು.

ಅಧಿಕಾರದಲ್ಲಿ ದುರಾಶೆ ನಮ್ಮನ್ನು ಮೀರಿಸುತ್ತದೆ ಎಂಬುದನ್ನು ಕೇಜ್ರಿವಾಲ್‌ ರಾಜಕೀಯ ಜೀವನ ಸ್ಪಷ್ಟವಾಗಿ ತೋರಿಸುತ್ತದೆ. ಕೇಜ್ರಿವಾಲ್ ವಿಚಾರದಲ್ಲಿ ನನಗೆ ಸಂಪೂರ್ಣ ನಿರಾಶೆಯಾಗಿದೆ. ಎಎಪಿ ಅಧಿಕಾರಕ್ಕೆ ಬಂದ ನಂತರ ಆಡಳಿತಾತ್ಮಕವಾಗಿ ನ್ಯಾಯವನ್ನು ಎತ್ತಿಹಿಡಿಯುತ್ತದೆ ಎಂದು ನಾನು ಭಾವಿಸಿದ್ದೆ. ಆದರೆ ಅದು ರಾಜಕೀಯ ಇನ್ನಷ್ಟು ಭ್ರಷ್ಟಗೊಳ್ಳುವಂತೆ ಮಾಡಿತು ಎಂದು ವಿಶ್ರಾಂತ ನ್ಯಾಯಾಧೀಶ ಸಂತೋಷ್‌ ಹೆಗ್ಡೆಯವರು ತೀರಾ ನಿರಾಶೆಯ ಧ್ವನಿಯಲ್ಲಿ ಹೇಳಿರುವುದು ಸರಿಯಾಗಿಯೇ ಇದೆ. ಅಧಿಕಾರದ ಅಮಲು ಎಂತಹ ಪ್ರಾಮಾಣಿಕ ವ್ಯಕ್ತಿಯನ್ನೂ ಕೆಡಿಸಿ ಬಿಡುತ್ತದೆ ಎನ್ನುವುದಕ್ಕೆ ಕೇಜ್ರಿವಾಲ್‌ ನಮ್ಮ ನಡುವೆ ಇರುವ ಇನ್ನೊಂದು ಉದಾಹರಣೆ. ಕೇಜ್ರಿವಾಲ್‌ ಈ ದೇಶದ ಕೋಟಿಗಟ್ಟಲೆ ಯುವ ಜನತೆಯ ಕನಸುಗಳಿಗೆ ಕೊಳ್ಳಿ ಇಟ್ಟರು.









































































































error: Content is protected !!
Scroll to Top