ಕಾರ್ಕಳ : ಪ್ರತಿಯೊಬ್ಬರ ಮನದಲ್ಲಿ ಅಚ್ಚಳಿಯದೆ ಉಳಿಯುವ ವ್ಯಕ್ತಿತ್ವ ಎಂದರೆ ಮನೋಹರ ಪ್ರಸಾದ್ ಅವರದ್ದು. ಸ್ನೇಹಮಯಿ ಮನೋಹರ್ ಪ್ರಸಾದ್ ಅವರ ಬಗ್ಗೆ ಮಾತನಾಡಲು ಅಕ್ಷರಗಳು ಸಾಲದು ಎಂದು ಜೇಸಿಐ ರಾಷ್ಟ್ರೀಯ ತರಬೇತಿದಾರ, ಇನ್ನಾ ಶಾಲಾ ಮುಖ್ಯ ಶಿಕ್ಷಕ ರಾಜೇಂದ್ರ ಭಟ್ ಹೇಳಿದರು.
ಅವರು ಮಾ. 6ರಂದು ಹೊಟೇಲ್ ಪ್ರಕಾಶ್ನ ಸಂಭ್ರಮ ಸಭಾಂಗಣದಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಂಘ ಮತ್ತು ಕಾರ್ಯನಿರತ ಪತ್ರಕರ್ತರ ಸಂಘವು ಆಯೋಜಿಸಿದ್ದ ಮನೋಹರ್ ಪ್ರಸಾದ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾನವೀಯ ಗುಣಗಳನ್ನು, ಪ್ರತಿಯೊಂದು ಕಾರ್ಯಕ್ರಮವನ್ನು ಅತ್ಯಂತ ಸುಲಭದಲ್ಲಿ ಮಾಡುವ ಕಲೆ, ಮಧುರ ಕಂಠದ ಮಾತುಗಳು, ಕಲಾ ನೈಪುಣ್ಯತೆ, ಎಲ್ಲರನ್ನು ಬೆಳಸುವ ಗುಣ ಪತ್ರಕರ್ತ ಮನೋಹರ್ ಪ್ರಸಾದ್ ಅವರದು. ಪ್ರಧಾನ ಮಂತ್ರಿಯಿಂದ ಹಿಡಿದು ಚಿತ್ರತಾರೆಯರ ಕಾರ್ಯಕ್ರಮವನ್ನು ನಿರೂಪಿಸಿ ಎಲ್ಲರ ಮನಗೆದ್ದವರು ಮನೋಹರ ಪ್ರಸಾದ್ ಅವರು ಎಂದರು.

ಹಿರಿಯ ಸಾಹಿತಿ ಜ್ಯೋತಿ ಗುರು ಪ್ರಸಾದ್ ಮಾತನಾಡಿ, ಪತ್ರಕರ್ತ ಮನೋಹರ್ ಪ್ರಸಾದ್ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಹೆಸರಿಗೆ ತಕ್ಕಂತೆ ಅವರ ಮಾತು ಮನೋಹರ ಎಂದರು. ತನ್ನ ಜೀವನದ ಪ್ರತಿಯೊಂದು ಕ್ಷಣಗಳನ್ನು ಸುಂದರವಾಗಿ ಕಳೆದವರು. ಪತ್ರಕರ್ತರಾಗಿ, ಕಲಾವಿದರಾಗಿ, ಯಕ್ಷಗಾನ, ಸಾಹಿತ್ಯ ಕ್ಷೇತ್ರ ಹೀಗೆ ಹಲವಾರು ವೈವಿಧ್ಯಮೀಯ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ ಎಂದರು.


ಕ್ರಿಯೇಟಿವ್ ಸಂಸ್ಥೆಯ ಸಂಸ್ಥಾಪಕರಾದ ಅಶ್ವತ್ಥ್ ಎಸ್.ಎಲ್. ಮಾತನಾಡಿ, ಮನೋಹರ ಪ್ರಸಾದ್ ಅವರು ಪತ್ರಿಕಾ ಹಾಗೂ ಸಾಹಿತ್ಯ ಲೋಕಕ್ಕೆ ದೇವರೆ ಕಳಿಸಿರುವಂತಹ ಮನೋಹರವಾದ ಪ್ರಸಾದ. ಪತ್ರಿಕಾ ಧರ್ಮ ಮೀರದೇ ಬಾಳಿದ ಮನೋಹರ್ ಅವರ ಬದುಕು ಮಾದರಿಯಾದುದು ಎಂದರು. ಆದರ್ಶಪ್ರಾಯರಾಗಿ ಬದುಕಿ, ಎಲ್ಲಿಯೂ ಯಾವುದೇ ರೀತಿಯ ಆಕ್ಷೇಪಣೆಗಳಿಗೆ ಒಳಗಾಗದೇ ಬಹಳ ವಿಶಿಷ್ಟವಾದಂತಹ ಮಾನವೀಯ ಸ್ಪಂದನೆ, ವಿಶ್ವಪ್ರಜ್ಞೆಯ ಪತ್ರಕರ್ತರಾಗಿ ಕೊಡುಗೆಗಳನ್ನು ಕೊಟ್ಟಿರುವಂತಹ ವ್ಯಕ್ತಿ ಮನೋಹರ ಪ್ರಸಾದ್ ಎಂದರು.
ಕಸಾಪ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಮಾತನಾಡಿ, ಪ್ರತಿ ವ್ಯಕ್ತಿ ದೂರ ಹೋಗಿ ಏನೇ ಸಾಧನೆ ಮಾಡಿದರು ಆತನ ಆತ್ಮ ತಾನು ಹುಟ್ಟಿ ಬೆಳೆದ ನೆಲೆಯನ್ನು ನೆನೆಯುತ್ತಿರುತ್ತದೆಯಂತೆ ಅಂತಹ ಸಾತ್ವಿಕತೆ ಮನೋಹರ ಪ್ರಸಾದರದ್ದು, ಅವರು ಕಡಲ ನಗರಿ ಮಂಗಳೂರಿನಲ್ಲಿ ತನ್ನ ಬದುಕನ್ನು ಕಟ್ಟಿಕೊಂಡವರು. ಆದರೆ ಕಾರ್ಕಳದ ಮಣ್ಣನ್ನು, ಕರ್ವಾಲನ್ನು ಮರೆಯಲೇ ಇಲ್ಲ. ಬೈಲೂರಿನ 17ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮಾತನಾಡಿದ ಅವರ ಮಾತನ್ನು ಆಲಿಸಿದಾಗ ಕಾರ್ಕಳದ ಬಗ್ಗೆ ಇರುವ ಅಭಿಮಾನವನ್ನು ತೋರಿಸಿಕೊಟ್ಟಿತ್ತು. ಮನೋಹರ ಪ್ರಸಾದರಿಗೆ ಅವರೇ ಸಾಟಿ. ಮಗದೊಮ್ಮೆ ಈ ಪುಣ್ಯ ನೆಲದಲ್ಲಿ ಅವರು ಹುಟ್ಟಿ ಬರಲಿ ಎಂದರು.
ಮಾಧವ ಸುವರ್ಣ ಅವರು ಮನೋಹರ್ ಪ್ರಸಾದ್ ಅವರೊಂದಿಗಿನ 45 ವರ್ಷಗಳ ಗೆಳೆತನವನ್ನು ಬಿಚ್ಚಿಟ್ಟರು. ಮನೋಹರ್ ಪ್ರಸಾದ್ ಅವರ ಅಳಿಯ ಲಕ್ಷ್ಮೀಕಾಂತ, ನಿವೃತ್ತ ಪ್ರಾಂಶುಪಾಲೆ ಮಿತ್ರಪ್ರಭಾ ಹೆಗ್ಡೆ, ಶೈಲಜಾ ಹೆಗ್ಡೆ, ಕರ್ವಾಲಿನ ಹರೀಶ್ಚಂದ್ರ ರಾವ್, ಮುಖ್ಯ ಶಿಕ್ಷಕ ಸಂಜೀವ ಪೂಜಾರಿ ಮನೋಹರ್ ಪ್ರಸಾದ್ ಅವರ ಗುಣಗಾನ ಮಾಡಿದರು.
ಧಾರಿಣಿ ಉಪಾಧ್ಯ ಪ್ರಾರ್ಥಿಸಿದರು. ಶಿಕ್ಷಕ ಗಣೇಶ್ ಜಾಲ್ಸೂರು ಕಾರ್ಯಕ್ರಮ ನಿರೂಪಿಸಿ, ಪತ್ರಕರ್ತರ ಸಂಘದ ಅಧ್ಯಕ್ಷ ಶರೀಫ್ ವಂದಿಸಿದರು.







































