ಬೆಂಗಳೂರು ಸ್ಫೋಟ ಪ್ರಕರಣ ತನಿಖೆ ಎನ್‌ಐಎಗೆ

ಬೆಂಗಳೂರು: ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್‌ ಸ್ಫೋಟ ಪ್ರಕರಣದ ತನಿಖೆ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವರ್ಗಾವಣೆಯಾಗಿದೆ.
ಭಾನುವಾರ ಎನ್‌ಐಎ ಅಧಿಕಾರಿಗಳು ಎಫ್‌ಐಆರ್‌ ದಾಖಲಿಸಿದ್ದಾರೆ. ಕೇಂದ್ರ ಗೃಹ ಇಲಾಖೆಗೆ ಮಾಹಿತಿ ನೀಡಿ ಎಫ್ಐಆರ್‌ ದಾಖಲಿಸಿದ ಎನ್‌ಐಎ ಇಂದಿನಿಂದ ಸ್ಫೋಟದ ಸಂಪೂರ್ಣ ತನಿಖೆ ಆರಂಭಿಸಲಿದ್ದಾರೆ. ನಿನ್ನೆ ಬೆಳಗ್ಗೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅಗತ್ಯವಿದ್ದರೆ ತನಿಖೆಯನ್ನು ಎನ್‌ಐಎಗೆ ವಹಿಸಲಾಗುವುದು ಎಂದಿದ್ದರು.
ಸ್ಫೋಟ ಸಂಭವಿಸಿ ಮೂರು ದಿನಗಳಾದರೂ ಆರೋಪಿ ಬಗ್ಗೆ ಚಿಕ್ಕ ಸುಳಿವು ಕೂಡ ಪತ್ತೆಯಾಗದ ಹಿನ್ನೆಲೆಯಲ್ಲಿ ಎನ್‌ಐಎ ತನಿಖೆ ವಹಿಸಿಕೊಂಡಿದೆ. ಎನ್‌ಐಎ ಉಗ್ರ ಕೃತ್ಯಗಳ ತನಿಖೆಗೆಂದೇ ಸ್ಥಾಪಿಸಲ್ಪಟ್ಟ ವಿಶೇಷ ತನಿಖಾ ಘಟಕವಾಗಿದ್ದು, ದೇಶದ ಒಳಗಡೆ ಸಂಭವಿಸುವ ಯಾವುದೇ ಉಗ್ರ ಚಟುವಟಿಕೆ, ಬಾಂಬ್‌ ಸ್ಫೋಟದ ತನಿಖೆಯನ್ನು ಎನ್‌ಐಎ ವಹಿಸಿಕೊಳ್ಳುತ್ತದೆ.
ಬೆಂಗಳುರು ಸ್ಫೋಟಕ್ಕೂ ಈ ಹಿಂದೆ ಬೇರೆ ರಾಜ್ಯಗಳಲ್ಲಿ ಸಂಭವಿಸಿರುವ ಸ್ಫೋಟ ಘಟನೆಗಳಿಗೂ ಸಾಮ್ಯತೆ ಇರುವುದರಿಂದ ಮೇಲ್ನೋಟಕ್ಕೆ ಇದು ಉದ್ರ ಕೃತ್ಯದಂತೆ ಗೋಚರಿಸುತ್ತಿದೆ.

ಶುಕ್ರವಾರ ಮಧ್ಯಾಹ್ನ ಕುಂದಲಹಳ್ಳಿ‌ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿದೆ. ಕೃತ್ಯ ನಡೆದು ಮೂರು ದಿನ ಕಳೆದರೂ ಆರೋಪಿಯ ಒಂದೇ ಒಂದು ಸುಳಿವು ಪೊಲೀಸರಿಗೆ ಸಿಕ್ಕಿಲ್ಲ. ಆರಂಭಿಕ ತನಿಖೆಯನ್ನು ಸಿಸಿಬಿ ಹಾಗೂ ಇಂಟೆಲಿಜೆನ್ಸ್ ಅಧಿಕಾರಿಗಳ ತಂಡ ನಡೆಸಿದೆ. ತನಿಖೆಗೆ 8 ತಂಡಗಳನ್ನು ರಚಿಸಲಾಗಿತ್ತು. ಅಷ್ಟಾದ್ರೂ ಆರೋಪಿಯ ಬಗ್ಗೆ ಚಿಕ್ಕ ಸುಳಿವು ಕೂಡ ಸಿಕ್ಕಿಲ್ಲ.
ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕೀಯ ಕೆಸರೆರಚಾಟ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಎನ್‌ಐಎ ತನಿಖೆಗೆ ಒಪ್ಪಿಸಲಾಗಿದೆ ಎನ್ನಲಾಗುತ್ತಿದೆ. ಲೋಕಸಭೆ ಚುನಾವಣೆಯೂ ಸನ್ನಿಹಿತವಾಗುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಈ ಪ್ರಕರಣವನ್ನು ತ್ವರಿತವಾಗಿ ಬಗೆಹರಿಸಲು ಮಂದಾಗಿದೆ.



















































































error: Content is protected !!
Scroll to Top