ಯಾವುದೇ ವ್ಯಕ್ತಿಯು ಉದ್ದೇಶಪೂರ್ವಕವಾಗಿ ಯಾವುದೇ ಸ್ವಂತ ಮತ್ತು ಸರಿಯಾದ ಆದಾಯ ಹೊಂದಿರದ ಆತನ ಪತ್ನಿ, ವಿಧಿ ಸಮ್ಮತವಾದ (ಲೀಗಲ್) ಅಥವಾ ವಿಧಿ ಸಮ್ಮತವಲ್ಲದ ತನ್ನ ಅಪ್ರಾಪ್ತ ವಯಸ್ಸಿನ ಮಕ್ಕಳ, ದೈಹಿಕ ಅಥವಾ ಮಾನಸಿಕ ವಿಕಲತೆಯ ಮಕ್ಕಳ, ತನ್ನ ತಂದೆ -ತಾಯಿಯನ್ನು ನಿರ್ಲಕ್ಷ ಮಾಡಿದರೆ ಅಥವಾ ಅವರ ಪಾಲನೆ ಪೋಷಣೆಯ ಜವಾಬ್ದಾರಿಯನ್ನು ನಿರ್ವಹಿಸದೆ ಅವರನ್ನು ತಿರಸ್ಕರಿಸಿದಲ್ಲಿ ನೊಂದ ಪತ್ನಿ, ಮಕ್ಕಳು, ಪೋಷಕರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ನ್ಯಾಯಾಲಯದ ಆದೇಶದ ಮುಖಾಂತರ ತಮ್ಮ ಜೀವನ ನಿರ್ವಹಣೆಗಾಗಿ ಜೀವನಾಂಶವನ್ನು ಪಡೆಯಬಹುದಾಗಿರುತ್ತದೆ.
ಇಂತಹ ಸಂದರ್ಭದಲ್ಲಿ ನ್ಯಾಯಾಲಯವು ಸೂಕ್ತ ವಿಚಾರಣೆ ನಡೆಸಿ ಸಂಬಂಧಪಟ್ಟ ವ್ಯಕ್ತಿಯ ವಿರುದ್ಧ ನಿರ್ಲಕ್ಷಕ್ಕೊಳಗಾದ ಪತ್ನಿ, ಮಕ್ಕಳು ಅಥವಾ ಪೋಷಕರಿಗೆ ಜೀವನಾಂಶದ ಬಾಬ್ತು ಸೂಕ್ತ ಪ್ರಮಾಣದ ಹಣವನ್ನು ಪಾವತಿಸುವಂತೆ ಆದೇಶ ಮಾಡಬಹುದಾಗಿದೆ. ಸಾಮಾನ್ಯವಾಗಿ ಜೀವನಾಂಶವನ್ನು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ದಿನಾಂಕದಿಂದ ಪಾವತಿ ಮಾಡುವಂತೆ ಆದೇಶಿಸುತ್ತಾರೆ. ಈ ರೀತಿಯಾಗಿ ಜೀವನಾಂಶವನ್ನು ತನ್ನ ಪತ್ನಿ, ಮಕ್ಕಳು ಅಥವಾ ಪೋಷಕರಿಗೆ ನೀಡಬೇಕೆಂದು ನ್ಯಾಯಾಲಯದಿಂದ ನಿರ್ದೇಶಿಸಲ್ಪಟ್ಟ ವ್ಯಕ್ತಿಯು ಯಾವುದೇ ಸಕಾರಣವಿಲ್ಲದೆ ನ್ಯಾಯಾಲಯದ ಆದೇಶದ ಪ್ರಕಾರ ಜೀವನಾಂಶ ಮೊತ್ತವನ್ನು ಪಾವತಿ ಮಾಡಲು ವಿಫಲನಾದಲ್ಲಿ ನ್ಯಾಯಾಲಯವು ಆತನಿಗೆ ಸಂಬಂಧಪಟ್ಟ ಆಸ್ತಿಯನ್ನು ಮುಟ್ಟುಗೋಲು ಹಾಕುವ ಬಗ್ಗೆ, ಆತನನ್ನು ಬಂಧಿಸುವ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಂಡು ಜೀವನಾಂಶದ ಮೊತ್ತವನ್ನು ಆತನಿಂದ ವಸೂಲು ಮಾಡಬಹುದಾಗಿದೆ.
ಈ ರೀತಿಯಾಗಿ ಆದೇಶಿಸಲ್ಪಟ್ಟ ಜೀವನಾಂಶದ ಮೊತ್ತವನ್ನು ಆದೇಶದ ನಂತರ ಅಂದರೆ ಬಾಕಿಯಾದ ಅವಧಿಯ ಒಂದು ವರ್ಷದ ಒಳಗಾಗಿ ಪ್ರತ್ಯೇಕ ಅರ್ಜಿ ಸಲ್ಲಿಸುವ ಮುಖಾಂತರ ವಸೂಲು ಮಾಡಬೇಕಾಗಿರುತ್ತದೆ. ಒಂದು ವರ್ಷಕ್ಕಿಂತ ಜಾಸ್ತಿ ಅವಧಿಯಿಂದ ಬಾಕಿ ಇರುವ ಜೀವನಾಂಶದ ಮೊತ್ತವನ್ನು ವಸೂಲು ಮಾಡುವ ಬಗ್ಗೆ ನ್ಯಾಯಾಲಯವು ವಾರೆಂಟನ್ನು ಹೊರಡಿಸುವಂತಿಲ್ಲ. ಜೀವನಾಂಶದ ಕುರಿತು ಆದೇಶವಾದ ನಂತರ ಪತ್ನಿಯು ಮರು ವಿವಾಹವಾದಲ್ಲಿ ಆತಳು ತನ್ನ ಪತಿಯಿಂದ ಜೀವನಾಂಶವನ್ನು ವಸೂಲು ಮಾಡುವ ಹಕ್ಕನ್ನು ಕಳಕೊಳ್ಳುತ್ತಾಳೆ. ವಿವಾಹಿತ ಪುತ್ರಿಗೆ ತನ್ನ ತಂದೆ ಅಥವಾ ತಾಯಿಯ ವಿರುದ್ಧ ಜೀವನಾಂಶವನ್ನು ಕೇಳುವ ಹಕ್ಕು ಇರುವುದಿಲ್ಲ. ಕ್ರಿಮಿನಲ್ ಪ್ರೊಸೀಜರ್ ಕೋಡ್ನ 125 ನೇ ಕಲಂ ಪ್ರಕಾರ ಜೀವನಾಂಶ ಪಡೆಯುವ ಹಕ್ಕನ್ನು ಎಲ್ಲಾ ಧರ್ಮಕ್ಕೆ ಸೇರಿದ ವ್ಯಕ್ತಿಗಳು ಹೊಂದಿರುತ್ತಾರೆ. ಈ ಬಗ್ಗೆ ಅವರವರ ವೈಯುಕ್ತಿಕ ಕಾನೂನಿಗೆ ಸಂಬಂಧವಿರುವುದಿಲ್ಲ. ಯಾವುದೇ ವ್ಯಕ್ತಿಯು ತಾನು ಮತಾಂತರಗೊಂಡ ಕಾರಣಕ್ಕಾಗಿ ಜೀವನಾಂಶ ಪಾವತಿಯ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ.

ಜೀವನಾಂಶದ ಅರ್ಜಿಯ ತನಿಖೆಯ ಸಂದರ್ಭದಲ್ಲಿ ಅರ್ಜಿಯನ್ನು ವಿರೋಧಿಸುವ ವ್ಯಕ್ತಿಯು ತನ್ನ ಪತ್ನಿಯ ಶೀಲದ ಬಗ್ಗೆ ಆರೋಪ ಮಾಡಿದಲ್ಲಿ ಅಂತಹ ಆರೋಪವನ್ನು ಸೂಕ್ತ ಸಾಕ್ಷ್ಯಾದಾರ ಸಮೇತವಾಗಿ ರುಜುವಾತು ಮಾಡುವ ಜವಾಬ್ದಾರಿಯನ್ನು ಆರೋಪ ಮಾಡಿದ ವ್ಯಕ್ತಿಯು ಹೊಂದಿರುತ್ತಾನೆ. ಜೀವನಾಂಶದ ಮೊತ್ತವನ್ನು ನಿರ್ಧರಿಸುವ ಸಂದರ್ಭದಲ್ಲಿ ನ್ಯಾಯಾಲಯವು ಗಂಡ ಮತ್ತು ಹೆಂಡತಿ ಇವರಿಬ್ಬರ ವರಮಾನವನ್ನು ಮತ್ತು ಅವರ ಕುಟುಂಬದ ಸ್ಥಾನಮಾನವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ನ್ಯಾಯಾಲಯವು ಒಮ್ಮೆ ತನಿಖೆ ಮುಖಾಂತರ ನಿರ್ಧರಿಸಿರುವ ಜೀವನಾಂಶದ ಮೊತ್ತವನ್ನು ಆ ನಂತರ ಸಂದರ್ಭಕ್ಕನುಸಾರವಾಗಿ ಬದಲಾಯಿಸುವ ಅಧಿಕಾರವನ್ನು ಹೊಂದಿರುತ್ತದೆ. ಜೀವನಾಂಶ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ನಂತರ ಅದು ವಿಚಾರಣೆಯಾಗಿ ಆದೇಶ ಆಗುವವರೆಗೆ ಅರ್ಜಿದಾರರಿಗೆ ಎದುರುದಾರರಿಂದ ಸೂಕ್ತ ದರದ ಮಧ್ಯಕಾಲೀನ ಜೀವನಾಂಶವನ್ನು ಕೊಡಿಸುವ ಬಗ್ಗೆ ಸೂಕ್ತ ಆದೇಶವನ್ನು ನೀಡುವ ಅಧಿಕಾರವನ್ನು ನ್ಯಾಯಾಲಯವು ಹೊಂದಿರುತ್ತದೆ.

































































