ನಿಷೇಧವಿದ್ದರೂ ಡಿವೈಎಸ್ಪಿ ಪ್ರಭಾವ ಬಳಸಿ ಚಾರಣ ಮಾಡಿದ ಅನುಮಾನ
ಮಂಗಳೂರು: ಚಾರ್ಮಾಡಿ ಅರಣ್ಯದಲ್ಲಿ ನಾಪತ್ತೆಯಾಗಿದ್ದ ಡಿವೈಎಸ್ಪಿಯೊಬ್ಬರ ಸಂಬಂಧಿ ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಲ್ಲಾಳರಾಯದುರ್ಗ ಬಳಿ ಪತ್ತೆಯಾಗಿದ್ದಾರೆ. ಡಿವೈಎಸ್ಪಿ ಸಂಬಂಧಿ ಧನುಷ್ ನಾಪತ್ತೆಯಾಗಿದ್ದ ಯುವಕ . ಡಿವೈಎಸ್ಪಿ ಶಿಫಾರಸ್ಸು ಬಳಸಿ ಬೆಂಗಳೂರು ಮೂಲದ 10 ಜನ ವಿದ್ಯಾರ್ಥಿಗಳು ಭಾನುವಾರ ಸಂಜೆ ಬೆಳ್ತಂಗಡಿ ತಾಲೂಕಿನ ಮೂಲಕ ಚಾರ್ಮಾಡಿ ಅರಣ್ಯದಲ್ಲಿ ಚಾರಣಕ್ಕೆ ತೆರಳಿದ್ದರು. ಈ ತಂಡದಲ್ಲಿದ್ದ ಧನುಷ್ ನಾಪತ್ತೆಯಾಗಿದ್ದ. ಧನುಷ್ ದಟ್ಟಾರಣ್ಯದ ಮದ್ಯೆ 700 ಅಡಿ ಕೆಳಗಿದ್ದನು. ಧನುಷ್ ನಾಪತ್ತೆಯಾಗುತ್ತಿದ್ದಂತೆ ತಂಡದಲ್ಲಿದ್ದ ಓರ್ವ ಯುವಕ ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಬಳಿಕ ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸರು ಮತ್ತು ಅರಣ್ಯಾಧಿಕಾರಿಗಳು ಜಂಟಿಯಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ನಾಪತ್ತೆಯಾದ ಯುವಕರ ಮೊಬೈಲ್ ನೆಟ್ವರ್ಕ್ ಪತ್ತೆಯಾಗಿ ಮತ್ತೆ ಸಂಪರ್ಕ ಕಡಿತವಾಗಿತ್ತು. ಕೊನೆಗೆ ಧನುಷ್ ಮಧ್ಯರಾತ್ರಿ ಪತ್ತೆಯಾಗಿದ್ದಾನೆ.
ಜನವರಿ 26 ರಂದು ಕುಮಾರಪರ್ವತಕ್ಕೆ ಸಾವಿರಾರು ಚಾರಣಿಗರು ಆಗಮಿಸಿದ್ದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು. ಕೆಲವರು ಟೆಂಟ್ ಹಾಕಿ ರಾತ್ರಿ ಪರ್ವತದಲ್ಲಿ ಉಳಿಯುತ್ತಿದ್ದರು. ಹೀಗಾಗಿ ಚಾರಣಕ್ಕೆ ಮಾನದಂಡ ರೂಪಿಸುವವರೆಗೂ ಆನ್‌ಲೈನ್ ಬುಕ್ಕಿಂಗ್ ಇಲ್ಲದ ಎಲ್ಲ ಚಾರಣ ತಾಣಗಳಲ್ಲಿ ತಾತ್ಕಾಲಿಕವಾಗಿ ಚಾರಣ ನಿರ್ಬಂಧಿಸಲಾಗಿದೆ ಎಂದು ಕಳೆದ ತಿಂಗಳು ಅರಣ್ಯ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಆದರು ಕೂಡ ಬೆಂಗಳೂರಿನ ಈ 10 ಜನ ಯುವಕರಿಗೆ ಚಾರಣಕ್ಕೆ ಅವಕಾಶ ಏಕೆ ನೀಡಲಾಯಿತು ಎಂಬ ಪ್ರಶ್ನೆ ಉದ್ಭವವಾಗಿದೆ.

























