ಕಾರ್ಕಳ : ಅಜೆಕಾರು ಶ್ರೀ ರಾಮಮಂದಿರ ಟ್ರಸ್ಟ್, ಅಜೆಕಾರು ಸಾರ್ವಜನಿಕ ಶಾರದ ಮಹೋತ್ಸವ ಸಮಿತಿ , ಡಾ. ಟಿ. ಎಂ. ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳ, ಮಾಹೆ ಮಣಿಪಾಲ ಹಾಗೂ ಕಾರ್ಡಿಯಾಲಜಿ ಅಟ್ ಡೋರ್ಸ್ಟೆಪ್ ಫೌಂಡೇಶನ್ (ಕ್ಯಾಡ್) ಸಂಸ್ಥೆ ಯ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಹೃದಯ ತಜ್ಞ ಡಾ| ಪದ್ಮನಾಭ ಕಾಮತ್ ಅವರ ತಂಡದ ನೇತೃತ್ವದಲ್ಲಿ ಫೆ. 25 ರಂದು ಅಜೆಕಾರು ರಾಮ ಮಂದಿರದಲ್ಲಿ ಬೃಹತ್ ಉಚಿತ ಹೃದಯ ತಪಾಸಣಾ ಉಚಿತ ಶಿಬಿರ ನಡೆಯಿತು.
ಶಿಬಿರ ಉದ್ಘಾಟಿಸಿ ಮಾತನಾಡಿದ ಮಣಿಪಾಲ ವಿಶ್ವವಿದ್ಯಾನಿಲಯದ ಸಹ ಕುಲಪತಿ ಡಾ. ಶರತ್ ರಾವ್, ಮಣಿಪಾಲ ಆಸ್ಪತ್ರೆಗಳು ಗ್ರಾಮೀಣ ಭಾಗದ ಜನತೆಯ ಆರೋಗ್ಯದ ಕಾಳಜಿಗೆ ಮಹತ್ವ ನೀಡುತ್ತಿವೆ. ಸಕಾಲಕ್ಕೆ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆ ದೊರಕುವುದು ಕಷ್ಟ ಸಾಧ್ಯ. ಈ ಹಿನ್ನೆಲೆಯಲ್ಲಿ ಉಚಿತ ಆರೋಗ್ಯ ತಪಾಸಣೆಗಳನ್ನು ನಡೆಸುವುದರಿಂದ ಬಡ ಹಾಗೂ ಮಧ್ಯಮ ವರ್ಗಗಳ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ ಎಂದರು.
ಹೃದಯ ತಜ್ಞ ಡಾ| ಪದ್ಮನಾಭ ಕಾಮತ್ ಮಾತನಾಡಿ, ಅಜೆಕಾರು ಭಾಗದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಗೊಂಡರೆ ರೋಗಿಗಳು ಸಕಾಲ ಚಿಕೆತ್ಸೆಗಳಿಗೆ ದೂರದ ನಗರಗಳಿಗೆ ಅಲೆಯಬೇಕಾಗಿಲ್ಲ ಎಂದ ಅವರು ಆರೋಗ್ಯ ಶಿಬಿರಗಳಲ್ಲಿ ತೊಡಗಿಸಿಕೊಂಡ ಗ್ರಾಮ ವ್ಯಾಪ್ತಿಗಳ ಎಲ್ಲಾ ಇಸಿಜಿ ಕೇಂದ್ರಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶ್ರಮಿಸಿದ ದಾದಿಯರು ಹಾಗೂ ವೈದ್ಯರ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.


ಸಭೆಯಲ್ಲಿ ಡಾ. ನಿರಂಜನ್, ಕಾರ್ಕಳ ಟಿ. ಎಂ. ಎ. ಪೈ ರೋಟರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಕೀರ್ತಿನಾಥ ಬಳ್ಳಾಲ್, ಅಜೆಕಾರು ಶಾರದೋತ್ಸವ ಸಮಿತಿಯ ಸಂದೀಪ್ ಶೆಟ್ಟಿ, ನಡಿಮಾರು ಜಯರಾಜ್ ಹೆಗ್ಡೆ, ಪ್ರದೀಪ್ ಹೆಗ್ಡೆ, ಅಜೆಕಾರು ರಾಮ ಮಂಡಿರ ಟ್ರಸ್ಟ್ನ ಅಧ್ಯಕ್ಷ ಪ್ರೇಮಾನಂದ ಶೆಣೈ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಡಾ| ಪದ್ಮನಾಭ ಕಾಮತ್ ಅವರನ್ನು ಸನ್ಮಾನಿಸಲಾಯಿತು. ಸುಭಾಶ್ಚಂದ್ರ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ರವೀಂದ್ರ ಪಾಟ್ಕರ್ ಧನ್ಯವಾದ ವಿತ್ತರು. ಮಲೇಕಾ ಮಣಿಪಾಲದ ಡೀನ್ ಡಾ| ಉಲ್ಲಾಸ್ ಕಾಮತ್ ಸಹಕರಿಸಿದರು.
ಶಿಬಿರದಲ್ಲಿ 750ಕ್ಕೂ ಅಧಿಕ ಶಿಭಿರಾರ್ಥಿಗಳು ಪಾಲ್ಗೊಂಡಿದ್ದರು. 500ಕ್ಕೂ ಅಧಿಕ ಇಸಿಜಿ, 47ನುರಿತ ವೈದ್ಯರು, 20 ಸಮುದಾಯ ಅಧಿಕಾರಿಗಳು, 100 ಸ್ವಯಂ ಸೇವಕರು, 30 ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.









































