ಭಾರತೀಯ ದಂಡ ಸಂಹಿತೆ 1860 – ಖಾಸಗಿ ಪ್ರತಿರಕ್ಷೆಯ ಅಧಿಕಾರ

ಭಾರತೀಯ ದಂಡ ಸಂಹಿತೆ 1860 ಅತ್ಯಂತ ಹಳೆಯದಾದ ಕಾನೂನುಗಳ ಪೈಕಿ ಒಂದಾಗಿದ್ದು ಭಾರತ ಗಣರಾಜ್ಯದಲ್ಲಿನ ಅಧಿಕೃತ ಕ್ರಿಮಿನಲ್ ಕೋಡ್ ಆಗಿರುತ್ತದೆ. ಮೊಟ್ಟ ಮೊದಲ ಬಾರಿಗೆ 1862 ರಲ್ಲಿ ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ನಮ್ಮ ದೇಶದಲ್ಲಿ ಜ್ಯಾರಿಗೆ ಬಂದಿರುವ ಮೂಲತ: ಬ್ರಿಟಿಷ್ ಇಂಡಿಯನ್ ಪಿನಲ್ ಕೋಡ್ ಎಂಬ ಹೆಸರಿನ ಈ ಕಾನೂನು 1947ರಲ್ಲಿ ಭಾರತದ ವಿಭಜನೆಯ ನಂತರ ಕ್ರಮವಾಗಿ ಭಾರತೀಯ ದಂಡ ಸಂಹಿತೆ ಮತ್ತು ಪಾಕಿಸ್ತಾನ ದಂಡ ಸಂಹಿತೆ ಎಂಬ ಹೆಸರಿನಲ್ಲಿ ಸ್ವತಂತ್ರವಾಗಿ ಮುಂದುವರಿಯಲ್ಪಟ್ಟಿರುತ್ತದೆ. ಇತ್ತೀಚೆಗೆ 11-08-2023 ರಂದು ಕೇಂದ್ರ ಸರಕಾರವು ಈ ಕಾನೂನಿನ ಹೆಸರನ್ನು ಭಾರತೀಯ ನ್ಯಾಯ ಸಂಹಿತೆ ಎಂಬುದಾಗಿ ಪರಿವರ್ತಿಸುವ ಬಗ್ಗೆ ಕರಡು ಸಂಹಿತೆಯನ್ನು ಲೋಕ ಸಭೆಯಲ್ಲಿ ಮಸೂದೆಗಾಗಿ ಮಂಡಿಸಿದ್ದು ಈ ಕುರಿತ ಪ್ರಕ್ರಿಯೆಯು ಅಂತಿಮ ಹಂತದಲ್ಲಿ ಬಾಕಿ ಇರುತ್ತದೆ.

ಈ ಮೇಲ್ಕಾಣಿಸಿದ ಕಾನೂನಿನ ಪ್ರಕಾರ ಖಾಸಗಿ ಪ್ರತಿರಕ್ಷೆಯ ಅಧಿಕಾರವನ್ನು ಪ್ರತಿಯೊಬ್ಬ ವ್ಯಕ್ತಿಯು ಹೊಂದಿರುತ್ತಾನೆ. ಅಂದರೆ ತನಗೆ ಅಥವಾ ತನ್ನ ಸ್ವತ್ತಿಗೆ ಇತರರಿಂದ ಅಪಾಯ ಉಂಟಾಗುವ ಸಂದರ್ಭದಲ್ಲಿ ಪ್ರತಿಯೊಬ್ಬ ವ್ಯಕಿಯು ಸದುದ್ದೇಶದಿಂದ ತನ್ನ ಖಾಸಗಿ ಪ್ರತಿರಕ್ಷೆಯ ಅಧಿಕಾರವನ್ನು ಉಪಯೋಗಿಸಿ ಮಾಡುವ ಯಾವುದೇ ಕೃತ್ಯವು ಅಪರಾಧವಾಗುವುದಿಲ್ಲ. ತನ್ನ ದೇಹಕ್ಕೆ ಅಥವಾ ಇತರರ ದೇಹಕ್ಕೆ ಅಥವಾ ಪ್ರಾಣಕ್ಕೆ ಅಥವಾ ಸ್ವತ್ತಿಗೆ ಭಾದಕವಾಗುವಂತೆ ನಡೆಸುವ ಯಾವುದೇ ಅಪರಾಧದ ವಿರುದ್ಧ ಹಾಗೂ ತನ್ನ ಅಥವಾ ಇತರ ಚರ ಅಥವಾ ಸ್ಥಿರ ಸ್ವತ್ತನ್ನು ಕಳ್ಳತನ, ಸುಲಿಗೆ, ಕೇಡು ಅಥವಾ ಅಪರಾಧಿಕ ಅತಿಕ್ರಮಣದ ಪ್ರಯತ್ನವಾಗಿ ನಡೆಸುವ ಯಾವುದೇ ಕೃತ್ಯದ ವಿರುದ್ಧ ರಕ್ಷಿಸಿಕೊಳ್ಳಲು ಮೇಲ್ಕಾಣಿಸಿದ ಕಾನೂನಿನಲ್ಲಿ ತಿಳಿಸಿರುವ ಕೆಲವು ನಿರ್ಬಂಧಗಳಿಗೆ ಒಳಪಟ್ಟು ಸಮಾಜದ ಪ್ರತಿಯೊಬ್ಬ ವ್ಯಕ್ತಿಯು ಖಾಸಗಿ ಪ್ರತಿರಕ್ಷೆಯ ಅಧಿಕಾರವನ್ನು ಹೊಂದಿರುತ್ತಾನೆ. ಅದೇ ರೀತಿಯಾಗಿ ಪರಿಪಕ್ವ ಅರಿವಿನ ಅಭಾವ, ಅಸ್ವಸ್ಥ ಮನಸ್ಸು ಅಥವಾ ಅಮಲಿನ ಕಾರಣದಿಂದ ಅಥವಾ ತಪ್ಪು ಭಾವನೆಯ ಕಾರಣದಿಂದ ನಡೆಸಲ್ಪಡುವ ನಿರ್ದಿಷ್ಟ ಅಪರಾಧ ಕೃತ್ಯದ ವಿರುದ್ಧ ಸಹಾ ಪ್ರತಿಯೊಬ್ಬ ವ್ಯಕ್ತಿಯು ತನ್ನ ಖಾಸಗಿ ಪ್ರತಿರಕ್ಷೆಯ ಅಧಿಕಾರವನ್ನು ಹೊಂದಿರುತ್ತಾನೆ. ಉದಾಹರಣೆಗೆ ಒಬ್ಬ ಅಸ್ವಸ್ಥ ವ್ಯಕ್ತಿ ಯಾವುದೇ ದುರುದ್ದೇಶ ಹೊಂದಿರದೆ ನಡೆಸುವ ಅಪರಾಧ ಸಂದರ್ಭದಲ್ಲಿ ಆತ ತಪ್ಪಿತಸ್ಥನಾಗುವುದಿಲ್ಲ. ಆದರೆ ಅಂತಹ ಸಂದರ್ಭದಲ್ಲಿ ಕೃತ್ಯಕ್ಕೆ ಬಲಿಯಾಗಬಹುದಾದ ವ್ಯಕ್ತಿಯು ತನ್ನ ರಕ್ಷಣೆಗಾಗಿ ಖಾಸಗಿ ಪ್ರತಿರಕ್ಷೆಯನ್ನು ಚಲಾಯಿಸುವ ಅಧಿಕಾರವನ್ನು ಹೊಂದಿರುತ್ತಾನೆ. ತಪ್ಪು ಭಾವನೆಯಿಂದ ಒಬ್ಬ ವ್ಯಕ್ತಿಯ ಮೇಲೆ ನಡೆಸುವ ಹಲ್ಲೆ ಅಪರಾಧವಾಗುವುದಿಲ್ಲವಾದರೂ ಅಂತಹ ಸಂದರ್ಭದಲ್ಲಿ ಹಲ್ಲೆಗೆ ಒಳಪಡಬಹುದಾದ ವ್ಯಕ್ತಿಯು ತನ್ನ ರಕ್ಷಣೆಗಾಗಿ ಖಾಸಗಿ ಪ್ರತಿರಕ್ಷೆಯ ಅಧಿಕಾರವನ್ನು ಚಲಾಯಿಸಬಹುದಾಗಿದೆ.

ಸಾರ್ವಜನಿಕ ಕರ್ತವ್ಯವನ್ನು ನಿರ್ವಹಿಸುವ ಸಂದರ್ಭದಲ್ಲಿ ಯಾವುದೇ ಸಾರ್ವಜನಿಕ ಅಧಿಕಾರಿಯು ತನ್ನ ಪ್ರತಿರಕ್ಷೆಯ ಉದ್ದೇಶಕ್ಕೆ ಅವಶ್ಯಕವಿರುವುದಕ್ಕಿಂತ ಹೆಚ್ಚು ಹಾನಿಯನ್ನು ಇತರರಿಗೆ ಉಂಟು ಮಾಡುವುದಕ್ಕಾಗಿ ಖಾಸಗಿ ಪ್ರತಿರಕ್ಷೆಯ ಅಧಿಕಾರವನ್ನು ಹೊಂದಿರುವುದಿಲ್ಲ. ಮರಣದ ಸಕಾರಣ ಭಯವನ್ನು ಉಂಟುಮಾಡುವ ಯಾವುದೇ ಹಲ್ಲೆಯ ವಿರುದ್ಧ ತನ್ನ ರಕ್ಷಣೆಗಾಗಿ ಖಾಸಗಿ ಪ್ರತಿರಕ್ಷೆಯ ಅಧಿಕಾರವನ್ನು ಪ್ರಯೋಗಿಸುವ ವ್ಯಕ್ತಿಯಿಂದಾಗಿ ಪರಮೋಶದಿಂದ ಏನೂ ಅರಿಯದ ಮುಗ್ಧ ವ್ಯಕ್ತಿಗೆ ಅಪಾಯ ಉಂಟಾದಲ್ಲಿ ಪ್ರಾಮಾಣಿಕ ಉದ್ದೇಶದಿಂದ ಪ್ರತಿರಕ್ಷೆಯನ್ನು ನಡೆಸಿದ ವ್ಯಕ್ತಿಗೆ ಖಾಸಗಿ ಪ್ರತಿರಕ್ಷೆಯ ಅಧಿಕಾರ ಇರುತ್ತದೆ. ಉದಾಹರಣೆಗೆ ಒಂದು ಗುಂಪು ಒಂದು ನಿರ್ದಿಷ್ಟ ವ್ಯಕ್ತಿಯನ್ನು ಕೊಲ್ಲುವ ಪ್ರಯತ್ನದಲ್ಲಿ ಆತನ ಮೇಲೆ ಹಲ್ಲೆ ನಡೆಸಿದಾಗ ತನಗೆ ಹಲ್ಲೆ ನಡೆಸುವ ಗುಂಪಿನ ಮೇಲೆ ಗುಂಡಿನ ಪ್ರತಿದಾಳಿ ನಡೆಸದೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಅಸಾಧ್ಯವೆಂದು ಆತನಿಗೆ ಮನವರಿಕೆಯಾಗಿ ಬೇರೆ ವಿಧಿ ಇಲ್ಲದೆ ಹಲ್ಲೆ ನಡೆಸುವ ಗುಂಪಿನ ಮೇಲೆ ಗುಂಡಿನ ಪ್ರತಿದಾಳಿ ನಡೆಸಿದ ಸಂದರ್ಭದಲ್ಲಿ ಗುಂಪಿನಲ್ಲಿ ಇರುವ ಯಾವುದೇ ಮುಗ್ಧ ವ್ಯಕ್ತಿ ಅಥವಾ ಮಕ್ಕಳಿಗೆ ಹಾನಿ ಉಂಟಾದಲ್ಲಿ ತನ್ನ ರಕ್ಷಣೆಗಾಗಿ ಗುಂಪಿನ ಮೇಲೆ ಪ್ರತಿದಾಳಿ ನಡೆಸಿದ ವ್ಯಕ್ತಿ ಯಾವುದೇ ಅಪರಾಧವನ್ನು ಮಾಡಿದಂತಾಗುವುದಿಲ್ಲ.







































































error: Content is protected !!
Scroll to Top