ಹಾಲಿವುಡ್ ಮೀರಿಸಿದ ದೃಶ್ಯ ವೈಭವದ ಸಿನೆಮಾ ಇದು
ಈ ವಾರ ಬಿಡುಗಡೆಯಾದ ಹಿಂದಿ ಸಿನೆಮಾ ‘ಫೈಟರ್’ ಭಾರತವನ್ನು ಪ್ರೀತಿಸುವ ಪ್ರತಿಯೊಬ್ಬನೂ ನೋಡಬೇಕಾದ ಸಿನೆಮಾ. ನಾನು ಸಿನೆಮಾದ ವಿಮರ್ಶೆ ಮಾಡಲು ಹೊರಡುವುದಿಲ್ಲ. ಆದರೆ ಆ ಸಿನೆಮಾದ ಆಶಯ, ದೃಶ್ಯ ವೈಭವ, ತಾಂತ್ರಿಕತೆ, ಕಲಾವಿದರ ಅಭಿನಯ ಎಲ್ಲವೂ ಅದ್ಭುತ.
ಸಿದ್ಧಾರ್ಥ್ ಆನಂದ ರೂಪಿಸಿದ ಸಿನೆಮಾ ಇದು
250 ಕೋಟಿ ಮಹಾ ಬಜೆಟ್ಟಿನಲ್ಲಿ ಯುವ ನಿರ್ದೇಶಕ ಸಿದ್ಧಾರ್ಥ್ ಆನಂದ್ ರೂಪಿಸಿದ ಸಿನೆಮಾ ಇದು. ಇಡೀ ಸಿನಿಮಾದಲ್ಲಿ ಶೋಕೆಸ್ ಆಗಿರುವುದು ಭಾರತೀಯ ವಾಯುಸೇನೆಯ ಮೈ ನವಿರೇಳಿಸುವ ಸಾಹಸಗಳ ಕಥೆ. ಅಲ್ಲಿ ತೀವ್ರವಾದ ಭಾವುಕತೆ ಇದೆ. ಕರುಳು ಹಿಂಡುವ ದೃಶ್ಯಗಳು ಇವೆ. ಸೈನಿಕರ ಕುಟುಂಬಗಳ ನೋವಿನ ಕಥೆ ಇದೆ. ಅಂತರವಾಹಿನಿ ಆದ ಪ್ರೇಮಕತೆ ಇದೆ. ಪಾಕಿಸ್ಥಾನದ ಭಯೋತ್ಪಾದಕ ಸಂಘಟನೆಗಳು ನಡೆಸುವ ಕ್ರೌರ್ಯ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಹೆಜ್ಜೆ ಹೆಜ್ಜೆಗೂ ಭಾರತೀಯ ಸೈನಿಕರ ತ್ಯಾಗ, ಬಲಿದಾನಗಳ ಹೂರಣ ಇದೆ. ಆದ್ದರಿಂದ ಪ್ರತಿಯೊಬ್ಬ ರಾಷ್ಟ್ರಪ್ರೇಮಿಯೂ ನೋಡಬೇಕಾದ ಸಿನೆಮಾ ಇದು. ಹಿಂದೆ ಬಂದ ಈ ರೀತಿಯ ಸೈನಿಕರ ಸಿನಿಮಾಗಳಿಗಿಂತ ಭಿನ್ನವಾದ, ಹೆಚ್ಚು ತಾಂತ್ರಿಕತೆ ಇರುವ ಮತ್ತು ಪವರ್ಫುಲ್ ಕಥೆ ಹೊಂದಿರುವ ಹಿಂದಿ ಸಿನೆಮಾ ಇದು. ಭಾರತೀಯ ಸಿನಿಮಾಗಳು ಹಾಲಿವುಡ್ ಮೇಕಿಂಗ್ ಸಿನೆಮಾಗಳನ್ನು ಮೀರಿಸುತ್ತಿರುವುದು ಕೂಡ ನಮಗೆ ಹೆಮ್ಮೆಯ ಸಂಗತಿ.


ವಾಯುಸೇನೆಯ ನಾಲ್ವರು ಡ್ರಾಗನ್ ಹೀರೋಗಳು
2019ರ ಪುಲ್ವಾಮಾ ದಾಳಿ, ಅದರ ನಂತರ ನಡೆದ ಬಾಲಾಕೋಟ್ ವಾಯುನೆಲೆಯ ಅಟ್ಯಾಕ್ ಇವುಗಳಿಂದ ಈ ಸಿನೆಮಾ ತೆರೆದುಕೊಳ್ಳುತ್ತದೆ. ಕುತಂತ್ರಿ ಪಾಕಿಸ್ಥಾನಕ್ಕೆ ಬುದ್ಧಿ ಕಲಿಸಲು ಭಾರತೀಯ ಸೇನೆಯು ರೂಪಿಸಿದ ನಾಲ್ಕು ಮಂದಿಯ ಡ್ರಾಗನ್ ಪಡೆ ಹೇಗೆ ಸೇಡು ತೀರಿಸಿಕೊಳ್ಳುತ್ತದೆ ಎಂಬುದೇ ಸಿನೆಮಾದ ರೋಮಾಂಚಕ ಕಥೆ. ಸಂಶೇರ್ ಪಟಾನಿಯಾ (ಪ್ಯಾಟಿ), ಮಿನಾಲ್ ಠಾಕೂರ್ (ಮಿನ್ನಿ), ಬಶೀರ್ (ಬಾಷ್), ಸರ್ತಾಜ್ ಸಿಂಗ್ (ತಾಜ್) ಈ ನಾಲ್ಕು ಸ್ಕ್ವಾಡ್ರನ್ ಲೀಡರ್ ರಾಂಕ್ ಪಡೆದ ಈ ತಂಡವನ್ನು ರಚನೆ ಮಾಡಿದ ಸೇನಾ ಮುಖ್ಯಸ್ಥರು ಅವರಿಗೆ ಅತ್ಯಾಧುನಿಕ ಯುದ್ಧವಿಮಾನಗಳನ್ನು ಹಾರಿಸುವ ತರಬೇತಿ ಕೊಡುತ್ತದೆ. ಅದರಲ್ಲಿ ಇಬ್ಬರು ಯುದ್ಧಕೈದಿಗಳಾಗಿ ಪಾಕಿಸ್ಥಾನದಲ್ಲಿ ಪಡುವ ಬವಣೆ, ಅವರನ್ನು ಹಿಂದೆ ತರಲು ಸೇನಾ ಮುಖ್ಯಸ್ಥರು ಪಡುವ ಕಷ್ಟ, ರೋಮಾಂಚಕಾರಿ ಆದ ಜಾಗ್ವಾರ್ ಮೊದಲಾದ ಯುದ್ಧ ವಿಮಾನಗಳ ಹಾರಾಟಗಳು, ಸೈನಿಕರ ದಿನಚರಿ ಹೇಗೆ ಇರುತ್ತದೆ? ಅವರು ಯಾವ ರೀತಿ ಯೋಚನೆ ಮಾಡುತ್ತಾರೆ? ಅವರ ಕುಟುಂಬಗಳ ಸಪೋರ್ಟ್ ಹೇಗೆ ಪಡೆಯುತ್ತಾರೆ? ಸೇನಾ ಅಧಿಕಾರಿಗಳು ಹೇಗೆ ಶಿಸ್ತು ರೂಪಿಸುತ್ತಾರೆ? ಇಂತಹ ಅದ್ಭುತ ಸಂಗತಿಗಳು ಈ ಸಿನೆಮಾದಲ್ಲಿ ತುಂಬಾ ಚೆನ್ನಾಗಿ ಮೂಡಿಬಂದಿವೆ. ಯುದ್ಧ ಕೈದಿಗಳನ್ನು ಪಾಕಿಸ್ಥಾನದ ಭಯೋತ್ಪಾದಕ ಸಂಘಟನೆ ಮತ್ತು ಅಲ್ಲಿನ ಸೇನೆ ಎಷ್ಟು ಕ್ರೂರವಾಗಿ ನಡೆಸಿಕೊಳ್ಳುತ್ತದೆ? ಮೊದಲಾದ ಸಂಗತಿಗಳ ಹಸಿಹಸಿ ಚಿತ್ರಣ ಈ ಸಿನೆಮಾದಲ್ಲಿ ತುಂಬ ಚೆನ್ನಾಗಿ ಮೂಡಿಬಂದಿವೆ. ಆಕಾಶದಲ್ಲಿ ಅತ್ಯಾಧುನಿಕ ಯುದ್ಧ ವಿಮಾನಗಳು ಸೌಂಡ್ ಮಾಡುತ್ತ ಹಾರುವುದನ್ನು ನೋಡುವಾಗ ರೋಮಾಂಚನ ಆಗುತ್ತದೆ. ಭಾರತದ ಸೈನಿಕರು ದೇಶಕ್ಕಾಗಿ ಯಾವ ರೀತಿಯ ಬಲಿದಾನಕ್ಕೆ ತವಕಿಸುತ್ತಾರೆ? ಜೈ ಹಿಂದ್ ಎಂಬ ಮಂತ್ರ ಯಾವ ರೀತಿಯಲ್ಲಿ ಅವರ ರಕ್ತವನ್ನು ಬಿಸಿ ಮಾಡುತ್ತದೆ? ಮೊದಲಾದ ಘಟನೆಗಳನ್ನು ಈ ಸಿನೆಮಾದಲ್ಲಿ ತುಂಬಾ ಚೆನ್ನಾಗಿ ಪ್ರೇಕ್ಷಕರ ಮುಂದೆ ಇಡಲಾಗಿದೆ. ಸಿನೆಮಾದ ದ್ವಿತೀಯ ಭಾಗದಲ್ಲಿ ಬರುವ ವಂದೇ ಮಾತರಂ ಗೀತೆಯು ಉಂಟುಮಾಡುವ ಭಾವ ತೀವ್ರತೆಯನ್ನು ಥಿಯೇಟರ್ ಒಳಗೆ ಕೂತು ಅನುಭವಿಸಬೇಕು.
ಹೆಣ್ಣು ಮಕ್ಕಳು ಸೇನೆಗೆ ಸೇರುವುದೇ ಅಪರಾಧ ಎಂದು ಯೋಚನೆ ಮಾಡುವ ಅಪ್ಪ ಸಿನೆಮಾದ ಕೊನೆಯಲ್ಲಿ ಹೇಗೆ ಬದಲಾದರು? ಮಗಳ ಸಾಹಸದ ಕಥೆಗಳಿಂದ ಅವರು ಹೇಗೆ ಪ್ರಭಾವಿತರಾದರು? ಅಪ್ಪ, ಅಮ್ಮ ಮತ್ತು ಮಗಳ ಆ ಭಾವನಾತ್ಮಕ ದೃಶ್ಯವು ನಮಗೆ ಖಂಡಿತವಾಗಿ ಕಣ್ಣೀರು ತರಿಸುತ್ತದೆ. ಸಿದ್ಧಾರ್ಥ್ ಆನಂದ್ ಎಂಬ ಸಿನೆಮಾ ಮಾಂತ್ರಿಕ ಈ ಸಿನೆಮಾವನ್ನು ಲೆಜೆಂಡ್ ಮಾಡಿ ಬಿಟ್ಟಿದ್ದಾರೆ.

ಅಭಿನಯದಲ್ಲಿ ಎಲ್ಲರಿಗೂ ಪೂರ್ಣ ಅಂಕ
ಪ್ಯಾಟಿಯಾಗಿ ಹೃತಿಕ್ ರೋಷನ್ ಅವರ ಅಭಿನಯ ಮತ್ತು ಸ್ಕ್ರೀನ್ ಅಪಿಯರೆನ್ಸ್ ಎರಡೂ ಇಲ್ಲಿ ಅದ್ಭುತವಾಗಿದೆ. ಮೀನಲ್ ಆಗಿ ದೀಪಿಕಾ ಪಡುಕೋಣೆ ಇಲ್ಲಿ ತನ್ನ ಹಿಂದಿನ ಸಿನೆಮಾಗಳನ್ನು ಮೀರಿ ಅಭಿನಯ ಮಾಡಿದ್ದಾರೆ. ಇದುವರೆಗೆ ಆಕೆಯನ್ನು ಗ್ಲಾಮರ್ ಗೊಂಬೆಯಾಗಿ ನೋಡಿದ ಪ್ರೇಕ್ಷಕರಿಗೆ ಇಲ್ಲಿ ತಾನೆಷ್ಟು ಪ್ರಬುದ್ಧವಾದ ನಟಿ ಎನ್ನುವುದನ್ನು ಆಕೆ ಸಾಬೀತುಪಡಿಸಿದ್ದಾರೆ. ಸೇನಾ ಮುಖ್ಯಸ್ಥರಾಗಿ ಅನಿಲ್ ಕಪೂರ್ ಇಲ್ಲಿ ಅಚ್ಚರಿಯ ಮೂಟೆಗಳನ್ನು ಹೊತ್ತು ತಂದಿದ್ದಾರೆ. ತನ್ನ ಮೊದಲ ಸಿನೆಮಾದಲ್ಲಿ ಅದ್ಭುತವಾಗಿ ನಟಿಸಿರುವ ವಿಲನ್ ರಿಶನ್ ಶಾನಿ ಹೆಚ್ಚು ಇಂಪ್ರೆಸ್ ಮಾಡಿದ್ದಾರೆ. ಉಳಿದಂತೆ ಕರಣ್ ಸಿಂಗ್, ಅಕ್ಷಯ್ ಒಬೆರಾಯ್ ಮೊದಲಾದ ನಟರು ಇಡೀ ಸಿನಿಮಾದ ಉದ್ದಕ್ಕೂ ಮಿಂಚಿದ್ದಾರೆ. ಕ್ಲಾಸಿಕ್ ಆದ ಸಂಭಾಷಣೆ ಇಡೀ ಸಿನೆಮಾದ ಹೈಲೈಟ್. ಜಮ್ಮು- ಕಾಶ್ಮೀರದ ಸುಂದರವಾದ ಹೊರಾಂಗಣ ಕಣ್ಣಿಗೆ ಕಟ್ಟುತ್ತದೆ. ಹಾಡುಗಳು ತುಂಬಾ ಚೆನ್ನಾಗಿವೆ. ರೋಮನ್ ಚಿಬ್ ಎಂಬ ಮಾಜಿ ಸೇನಾಧಿಕಾರಿ ಬರೆದ ಕಥೆ ಇದು. ಅದರಿಂದಾಗಿ ಇಡೀ ಸಿನೆಮಾ ಪರಿಪೂರ್ಣತೆಗೆ ಹತ್ತಿರ ಇದೆ. ಎಲ್ಲಿಯೂ ಫ್ಯಾಂಟಸಿ ಇಲ್ಲ. ಹೃತಿಕ್ ರೋಷನ್ ಮತ್ತು ದೀಪಿಕಾ ಕೆಮಿಸ್ಟ್ರಿ ಇಲ್ಲಿ ಅದ್ಭುತವಾಗಿ ವರ್ಕ್ ಆಗಿದೆ.
ಭಾರತವನ್ನು ಪ್ರೀತಿಸುವ ಮಂದಿ, ಸೇನೆಯ ಸಾಹಸಗಳನ್ನು ಇಷ್ಟಪಡುವವರು, ತೀವ್ರ ಭಾವುಕವಾದ ಸನ್ನಿವೇಶಗಳನ್ನು ಇಷ್ಟ ಪಡುವವರು ಈ ಸಿನೆಮಾ ನೋಡದಿದ್ದರೆ ಅದು ಮಹಾ ಪಾಪ. ಇಂತಹ ದೇಶಪ್ರೇಮದ ಮೆಗ್ನಮಾಪಸ್ ಸಿನೆಮಾ ನೀಡಿದ ಸಿದ್ಧಾರ್ಥ್ ಆನಂದ್ ಎಂಬ ನಿರ್ದೇಶಕನನ್ನು ಖಂಡಿತವಾಗಿ ಅಭಿನಂದಿಸಬೇಕು.

































































