ರಾಮನುಚ್ವಾಸವು ಅಲೆದಿರದೆ ರಾವುಣನೆಡೆಗೆ|
ರಾಮನುಂ ದಶಕಂಠನೆಲನುಸಿರಿರನೆ||
ರಾಮರಾವುಣರಿಸಿರ್ಗಳಿಂದು ನಮ್ಮೊಳಗಿರವೇ?|
ಭೂಮಿಯಲಿ ಪೊಸತೇನೋ? -ಮಂಕುತಿಮ್ಮ||
ರಾಮನು ಉಸಿರಾಡಿದ ಗಾಳಿಯನ್ನೇ ರಾವಣನೂ ಉಸಿರಾಡಿರಲಿಲ್ಲವೆ? ಅಂತಯೇ ರಾಮನು ಕೂಡ ರಾವಣ ಉಸಿರಾಡಿದ ಗಾಳಿಯನ್ನೇ ಉಸಿರಾಡಿರಬಹುದಲ್ಲವೆ? ಅಂದು ರಾಮ ಮತ್ತು ರಾವಣರೂ ಉಸಿರಾಡಿದ ಗಾಳಿಯನ್ನೇ ನಾವಿಂದು ಉಸಿರಾಡುತ್ತಿರುವುದಲ್ಲವೆ? ಹೀಗಿರುವಾಗ ಈ ಭೂಮಿಯಲ್ಲಿ ಹೊಸತು ಅಂತ ಏನಿದೆಯೋ? ಎಂದು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಪ್ರಶ್ನಿಸಿದ್ದಾರೆ.
ಸೃಷ್ಟಿಯ ಜೀವಸಂಕುಲದ ಇತಿಹಾಸವನ್ನು ಅವಲೋಕನ ಮಾಡಿದಾಗ ಆದಿಯಿಂದ ಇಲ್ಲಿಯವರೆಗೂ ಬದುಕಿಗೆ ಆಧಾರವಾಗಿರುವುದು ಅದೇ ಭೂಮಿ, ಅದೇ ಸೂರ್ಯ ಚಂದ್ರ, ಅದೇ ನೀರು, ಅದೇ ಗಾಳಿ ಎನ್ನುವುದು ಅರಿವಾಗುತ್ತದೆ. ಆದರೆ ಇದೆಲ್ಲವುಗಳನ್ನು ಆಧಾರವಾಗಿಟ್ಟುಕೊಂಡು ಮಾನವನು ತನ್ನ ಪ್ರತಿಭೆ ಹಾಗೂ ಸೃಜನಶೀಲ ಗುಣದಿಂದ ಮಾಡಿದ ಪರಿವರ್ತನೆಯೇ ಪುರಾತನ ಮತ್ತು ಆಧುನಿಕತೆಯ ನಡುವೆ ವ್ಯತ್ಯಾಸ ತಂದಿರುವುದು. ಹಿಂದೆ ಇರುವಂತೆ ಇಂದೂ ಕೂಡ ರಾಮನಂತಹ ಅದರ್ಶ ವ್ಯಕ್ತಿಗಳಿರುವಂತೆ ರಾವಣನಂತಹ ದುಷ್ಟಶಕ್ತಿಗಳು ಇವೆ. ಅಂದು ರಾಮ ರಾವಣರೂ ಉಸಿರಾಡಿದ ಗಾಳಿಯನ್ನೇ ಎಲ್ಲರೂ ಉಸಿರಾಡುತ್ತಿದ್ದಾರೆ. "ಕೆಡುಕಿರ್ದುದೆಂದು?" ಎಂಬ ಡಿವಿಜಿಯವರೆ ಕೇಳುವಂತೆ ಒಳ್ಳೆಯವರು ಇರುವ ಹಾಗೆ ಕೆಟ್ಟವರು ಕೂಡ ಎಲ್ಲ ಕಾಲದಲ್ಲಿಯೂ ಇದ್ದರು ಮತ್ತು ಇರುತ್ತಾರೆ ಎನ್ನುವ ವಾಸ್ತವವನ್ನು ಅಲ್ಲಗಳೆಯಲಾಗದು.

ಹೊಸತೊಂದು ಕಂಡೊಡನೆ ಹಳೆಯದನು ಮರೆಯುತ್ತ|
ನವತೆ ಹಿಂದೋಡುವುದು ಮನದ ಚಾಪಲ್ಯ||
ಭಾವಶ್ರುತಿಗೊಲಿದ ಮನ ಮಾಧುರ್ಯ ನೆಲೆವೀಡು|
ಹಳೆಯದಾಗದೆ ಹೊಸತು?– ಮುದ್ದುರಾಮ||
ಎಂಬ ಕವಿ ಕೆ.ಶಿವಪ್ಪನವರ ಮಾತಿನಂತೆ ನಮ್ಮ ಮನಸ್ಸು ಹೊಸತನದ ಸೊಬಗಿನಲಿ ಮೈಮರೆತು ಹಳತನ್ನು ಮರೆಯುವುದುಂಟು. ಆದರೆ ಹಳತೆ ಮತ್ತೊಮ್ಮ ಹೊಸತಾಗುತ್ತದೆ ಎನ್ನುವುದನ್ನು ಮರೆಯುವಂತಿಲ್ಲ. ತ್ರೇತಾಯುಗದಲ್ಲಿದ್ದ ರಾಮನ ಆದರ್ಶಗಳೆ ಇಂದಿನ ಬದುಕಿಗೂ ಆಧಾರ. ಅಂದಿನ ಮೌಲ್ಯಗಳೇ ಇಂದಿಗೂ ದಾರಿದೀಪ.
ರಾಮ-ರಾವಣರು ಉಸಿರಾಡಿದ ಗಾಳಿಯೆ ನಮ್ಮೆಲ್ಲರೊಳಗಿಹುದು. ಅಂತೆಯೇ ಎಲ್ಲರಲ್ಲಿಯೂ ರಾಮ-ರಾವಣರ ಗುಣಗಳಿರುವುದು ಸಹಜ. ಯಾವುದನ್ನು ಜಾಗೃತಗೊಳಿಸುತ್ತೇವೆಯೋ ಅಂತಹ ವ್ಯಕ್ತಿಗಳಾಗುತ್ತೇವೆ. ಹಳತೆಂದು ತಾತ್ಸಾರ ಮಾಡದೆ ಒಳ್ಳೆಯ ಗುಣಗಳನ್ನು ನಮ್ಮ ಮನಸ್ಸಿನಲ್ಲಿ ದೃಢವಾಗಿ ನೆಲೆ ನಿಲ್ಲುವಂತೆ ಪ್ರಾಮಾಣಿಕ ಪ್ರಯತ್ನ ಮಾಡಿದಾಗಲೆ ಬದುಕು ಹೊಸತನದಿಂದ ಕಂಗೊಳಿಸುವುದು. ರಾಮನು ಉಸಿರಾಡಿದ ಗಾಳಿಯನ್ನೆ ಉಸಿರಾಡುವ ಎಲ್ಲರೂ ಅವನ ಜೀವನಾದರ್ಶಗಳನ್ನು ಪಾಲಿಸುವಂತಾದಾಗಲೇ ಸರ್ವರ ಜೀವನವೂ ಸಾರ್ಥಕವಾಗುವುದಲ್ಲವೆ?.



































