ತಾಯಂದಿರೇ ಮಕ್ಕಳಿಗೆ ಆದರ್ಶದ ಪಾಠ ಹೇಳಬೇಕು : ಅಕ್ಷಯಾ ಗೋಖಲೆ

ಹೆಬ್ರಿ: ಹದಿಹರೆಯದ ಕಾಲಘಟ್ಟದಲ್ಲಿ ಮಕ್ಕಳು ಬದಲಾಗುವುದು ಸಹಜ. ಬಾಹ್ಯ ಪ್ರಚೋದನೆಗೆ ಒಳಗಾಗಿ ತಪ್ಪು ಕೆಲಸಗಳನ್ನು ಮಾಡುತ್ತಾರೆ. ಆ ಕಾಲಘಟ್ಟದಲ್ಲಿ ಮಕ್ಕಳ ಚಲನವಲನಗಳ ಬಗ್ಗೆ ತಾಯಂದಿರು ನಿಗಾ ಇಟ್ಟು ಮುನ್ನೆಚ್ಚರಿಕೆ ವಹಿಸಿ ಅವರಿಗೆ ಆದರ್ಶವಾಗಿ ಬದುಕಿನ ಪಾಠವನ್ನು ಹೇಳಿಕೊಡಬೇಕು. ಮಕ್ಕಳನ್ನು ತಿದ್ದುವಲ್ಲಿ ತಾಯಂದಿರ ಪಾತ್ರವೇ ಪ್ರಧಾನವಾದುದು ಎಂದು ವಾಗ್ಮಿ ಅಕ್ಞಯಾ ಗೋಖಲೆ ಹೇಳಿದರು.

ಮುದ್ರಾಡಿ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಹೆಬ್ರಿ ತಾಲೂಕು ಡಾ. ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ನಡೆದ ಹೆಬ್ರಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯಲ್ಲಿ ಹದಿಹರೆಯದ ಮಕ್ಕಳನ್ನು ಭವಿಷ್ಯದ ಸಭ್ಯ ನಾಗರಿಕರನ್ನಾಗಿ ರೂಪಿಸುವಲ್ಲಿ ಮಾತೆಯರ ಪಾತ್ರ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಎಳವೆಯಲ್ಲಿಯೇ ಮಕ್ಕಳಿಗೆ ದೇವರ ಕಥೆಗಳನ್ನು, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ದೇಶಭಕ್ತರ ತಾಯಂದಿರ ಕಥೆಗಳನ್ನು ತಿಳಿಸುತ್ತಾ ಸನಾತನ ಧರ್ಮದ ಸಂಸ್ಕೃತಿಯನ್ನು ಬೆಳೆಸುವ ಕಾರ್ಯ ಆಗಬೇಕು. ಆಧುನಿಕ ತಂತ್ರಜ್ಞಾನದ ಜೀವನಶೈಲಿಗೆ ಒಳಗಾದ ಮಕ್ಕಳು ಬದಲಾವಣೆಯ ನೆಪದಲ್ಲಿ ನಮ್ಮ ಸಂಸ್ಕೃತಿಯನ್ನು ಬಿಟ್ಟು ಅಸಭ್ಯ ವರ್ತನೆಯಿಂದ ಹಾದಿ ತಪ್ಪುತ್ತಿರುವುದು ಅತ್ಯಂತ ಖೇದಕರ ಸಂಗತಿ. ಆ ನಿಟ್ಟಿನಲ್ಲಿ ಜ್ಞಾನವಿಕಾಸ ಕೇಂದ್ರಗಳ ಮೂಲಕ ಹೆತ್ತವರಿಗೆ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಮುದ್ರಾಡಿ ಪ್ರೌಢಶಾಲೆಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್, ಸತ್ಯನಾರಾಯಣ ಪೂಜಾ ಸಮಿತಿ ಮುದ್ರಾಡಿ ವಲಯ ಅಧ್ಯಕ್ಷ ಮುದ್ರಾಡಿ ಮಂಜುನಾಥ್ ಪೂಜಾರಿ ಶುಭ ಹಾರೈಸಿದರು. ಮುದ್ರಾಡಿ ವಲಯಾಧ್ಯಕ್ಷ ಮಾತಿಬೆಟ್ಟು ರತ್ನಾಕರ ಪೂಜಾರಿ, ವಲಯದ ಮಾಜಿ ಅಧ್ಯಕ್ಷ ಬಲ್ಲಾಡಿ ಸುಧಾಕರ್ ಶೆಟ್ಟಿ ಉಪಸ್ಥಿತರಿದ್ದರು.

ಮುದ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಸಂತಿ ಪೂಜಾರಿ ಅಧ್ಯಕ್ಷತೆ ವಹಿಸಿ, ಉದ್ಘಾಟಿಸಿದರು. ಹೆಬ್ರಿ ತಾಲೂಕು ಯೋಜನಾಧಿಕಾರಿ ಲೀಲಾವತಿ ಜ್ಞಾನವಿಕಾಸ ಯೋಜನೆಗಳ ಅಡಿಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ, ಕೇಂದ್ರದಲ್ಲಿ ಇರುವ ಸದಸ್ಯರು ಬದುಕು ರೂಪಿಸಿಕೊಂಡ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಧಾ ಮತ್ತು ಶಶಿಕಲಾ ಅನಿಸಿಕೆ ವ್ಯಕ್ತಪಡಿಸಿದರು. ಹೆಬ್ರಿ ತಾಲೂಕು ಸಮನ್ವಯಾಧಿಕಾರಿ ಚಂದ್ರಾವತಿ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಮಮತಾ ವಂದಿಸಿದರು. ಸೇವಾ ಪ್ರತಿನಿಧಿಗಳಾದ ಪ್ರಶಾಂತ್ ಮತ್ತು ಕಾಂತಿ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ತಾಲೂಕಿನ ಎಲ್ಲ ವಲಯಗಳ ಜ್ಞಾನವಿಕಾಸ ಕೇಂದ್ರದ ಸದಸ್ಯೆಯರು ಉಪಸ್ಥಿತರಿದ್ದರು.

































































error: Content is protected !!
Scroll to Top