ವಿದ್ಯಾರ್ಥಿನಿಯ ಹತ್ಯೆಗೆ ಯತ್ನಿಸಿದ ಅಪರಾಧಿಗೆ 18 ವರ್ಷ ಜೈಲು

ಮಂಗಳೂರು: ನಾಲ್ಕು ವರ್ಷದ ಹಿಂದೆ ವಿದ್ಯಾರ್ಥಿನಿಯನ್ನು ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಪ್ರಕರಣದ ಆರೋಪಿಗೆ ಜಿಲ್ಲಾ 2ನೇ ಹೆಚ್ಚುವರಿ ನ್ಯಾಯಾಲಯ ಒಟ್ಟು 18 ವರ್ಷ 1 ತಿಂಗಳ ಸಜೆ ಹಾಗೂ ಸಂತ್ರಸ್ತೆಗೆ 2 ಲಕ್ಷ ರೂ. ನೀಡುವಂತೆ ಆದೇಶ ನೀಡಿದೆ.
2019ರ ಜೂ.28ರಂದು ದೇರಳಕಟ್ಟೆಯ ಬಗಂಬಿಲ ರಸ್ತೆಯಲ್ಲಿನ ಶಾಂತಿಧಾಮ ಬಳಿ ಆರೋಪಿ ಸುಶಾಂತ್ ಯಾನೆ ಶಾನ್ (31) ಕಾಲೇಜಿನಿಂದ ಬರುತ್ತಿದ್ದ ಸಂತ್ರಸ್ತೆಯನ್ನು ಹಿಂಬಾಲಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಬಂದಿದ್ದ. ಶಾಂತಿಧಾಮ ಬಳಿ ಅಡ್ಡಗಟ್ಟಿ ಯುವತಿ ಮುಂದೆ ಹೋಗದಂತೆ ತಡೆಹಿಡಿದು ಆಕೆಯನ್ನು ಅಪ್ಪಿಹಿಡಿದು ಚೂರಿಯಿಂದ ಎದೆ, ಹೊಟ್ಟೆ ಹಾಗೂ ದೇಹದ ವಿವಿಧೆಡೆ ಇರಿದು ನಂತರ ಅದೇ ಚೂರಿಯಿಂದ ತನ್ನ ಕುತ್ತಿಗೆಗೆ ಹಾಗೂ ಕೈ ನಾಡಿಗೆ ಇರಿದು ಆತ್ಮಹತ್ಯೆಗೆ ಯತ್ನಿಸಿದ್ದ.

ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಸಿಬ್ಬಂದಿ ಆಸ್ಪತ್ರೆ ಮೇಲಿನ ಭಾಗದಿಂದ ಗಮನಿಸಿ ತಕ್ಷಣ ಆಂಬ್ಯುಲೆನ್ಸ್ ಸಮೇತ ಘಟನಾ ಸ್ಥಳಕ್ಕೆ ಬಂದು ಸಂತ್ರಸ್ತೆಯನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆಯನ್ನು ಕೊಡಿಸಿದ್ದರು. ಚಿಕಿತ್ಸೆ ನೀಡಿದ ದಾದಿಯ ಸೇವೆ ರಾಷ್ಟ್ರಮಟ್ಟದಲ್ಲಿ ಶ್ಲಾಘನೆಗೆ ಒಳಗಾಗತ್ತು. ಆರೋಪಿ ನೃತ್ಯ ತರಬೇತಿದಾರನಾಗಿದ್ದು, ಸಂತ್ರಸ್ತೆ ಕಲಿಯುತ್ತಿದ್ದ ಕಾಲೇಜಿನಲ್ಲಿ ನೃತ್ಯ ಕಲಿಸುತ್ತಿದ್ದ. ಈ ಸಂದರ್ಭ ಇಬ್ಬರ ನಡುವೆ ಇದ್ದ ಗೆಳೆತನವನ್ನು ತಪ್ಪಾಗಿ ಅರ್ಥೈಸಿಕೊಂಡ ಸುಶಾಂತ್ ಪ್ರೀತಿಸುವಂತೆ, ಮದುವೆಯಾಗುವಂತೆ ಪೀಡಿಸುತ್ತಿದ್ದ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡು ದ್ವೇಷದಿಂದ ಸಂತ್ರಸ್ತೆ ಕೊಲೆಗೆ ಯತ್ನಿಸಿದ್ದ. ಪ್ರಕರಣದ ಸಂಪೂರ್ಣ ಘಟನೆ ಕೆ.ಎಸ್ ಹೆಗ್ಡೆ ಆಸ್ಪತ್ರೆ ಹಿಂಭಾಗದ ಸಿಸಿಟಿವಿಯಲ್ಲಿ ಸೆರೆಯಾಗಿರುವುದು ತನಿಖಾಧಿಕಾರಿಗಳು ಅದನ್ನೇ ಪ್ರಮುಖ ಸಾಕ್ಷ್ಯಾಧಾರವನ್ನಾಗಿ ಬಳಸಿಕೊಂಡಿದ್ದರು.
ಎಲ್ಲ ಸಾಕ್ಷ್ಯಾಧಾರಗಳನ್ನು ಪರಿಗಣಿಸಿದ ನ್ಯಾಯಧೀಶೆ ಪ್ರೀತಿ ಕೆ.ಪಿ ಆರೋಪಿ ಒಟ್ಟು 18 ವರ್ಷ 1 ತಿಂಗಳ ಜೈಲು ಸಜೆ 2 ಲಕ್ಷ ರೂ. ದಂಡ ವಿಧಿಸಿದ್ದಾರೆ.





























































































































error: Content is protected !!
Scroll to Top