ಗುರುವಾಯನಕೆರೆ ಯೋಧ ಏಕನಾಥ ಶೆಟ್ಟಿ ಇದ್ದ ವಿಮಾನ
ಹೊಸದಿಲ್ಲಿ: ಏಳು ವರ್ಷಗಳ ಹಿಂದೆ ಕಾರ್ಯಾಚರಣೆಯ ವೇಳೆ 29 ರಕ್ಷಣಾ ಸಿಬ್ಬಂದಿಯೊಂದಿಗೆ ನಾಪತ್ತೆಯಾಗಿದ್ದ ಭಾರತೀಯ ವಾಯುಪಡೆಯ ಎಎನ್-32 ವಿಮಾನದ ಅವಶೇಷಗಳು ಚೆನ್ನೈ ಕರಾವಳಿಯಲ್ಲಿ 3.1 ಕಿಮೀ ಆಳದಲ್ಲಿ ಪತ್ತೆಯಾಗಿವೆ. ಈ ವಿಮಾನದಲ್ಲಿ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಓರ್ವ ಯೋಧ ಕೂಡ ಇದ್ದರು.
ತಾಂಬರಂ ವಾಯುನೆಲೆಯಿಂದ ಅಂಡಮಾನ್ನ ಪೋರ್ಟ್ಬ್ಲೇರ್ಗೆ 2016ರ ಜುಲೈ 22ರಂದು ಪ್ರಯಾಣ ಬೆಳೆಸಿದ್ದ ಭಾರತೀಯ ವಾಯುಸೇನೆಯ ಎಎನ್-32-2743 ಯುದ್ಧ ವಿಮಾನ ಬಂಗಾಲಕೊಲ್ಲಿ ಸಮುದ್ರದ ಮೇಲೆ ಹಾರುತ್ತಿದ್ದಾಗ ಸಂಪರ್ಕ ಕಡಿತಗೊಂಡು, ನಾಪತ್ತೆಯಾಗಿತ್ತು. ಬೆಳಗ್ಗೆ 8.30ಕ್ಕೆ ವಿಮಾನ ಹೊರಟಿದ್ದು, 9.12ಕ್ಕೆ ನಿಲ್ದಾಣದೊಂದಿಗಿನ ಸಂಪರ್ಕ ಕಡಿತಗೊಂಡಿತ್ತು. 11.45ಕ್ಕೆ ಪೋರ್ಟ್ಬ್ಲೇರ್ಗೆ ತಲುಪಬೇಕಿದ್ದ ವಿಮಾನ ಕಣ್ಮರೆಯಾಗಿರುವುದಾಗಿ ಮಧ್ಯಾಹ್ನ 1.50ಕ್ಕೆ ವಾಯುಸೇನೆ ಪ್ರಕಟಿಸಿತ್ತು. ಅದರಲ್ಲಿದ್ದ ಗುರುವಾಯನಕೆರೆಯ ಏಕನಾಥ ಶೆಟ್ಟಿ ಸೇರಿ 29 ಜನ ಸೈನಿಕರ ಸುಳಿವು ಸಿಕ್ಕಿರಲಿಲ್ಲ. ಈ ಘಟನೆ ನಡೆದು 7.5 ವರ್ಷಗಳೇ ಕಳೆದಿವೆ. ಚೆನ್ನೈ ಮೂಲದ ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆ (ಎನ್ಐಒಟಿ) ವಿಜ್ಞಾನಿಗಳು ಕಳೆದ ತಿಂಗಳು ಬಹು-ಬೀಮ್ ಸೋನಾರ್(ಸೌಂಡ್ ನ್ಯಾವಿಗೇಷನ್ ಮತ್ತು ರೇಂಜಿಂಗ್) ಸೇರಿದಂತೆ ಸಮುದ್ರದ ಆಳದಲ್ಲಿ ಕಾರ್ಯಾಚರಣೆ ನಡೆಸಬಲ್ಲ ಎಯುವಿ ವಾಹನವನ್ನು ವಿಮಾನ ಅವಘಡ ಸಂಭವಿಸಿದ್ದ ಸ್ಥಳದಲ್ಲಿ ನಿಯೋಜಿಸಿದ್ದರು. ಎಯುವಿ ವಾಹನ 3.1 ಕಿ.ಮೀ. ಆಳದಲ್ಲಿ ವಿಮಾನದ ಅವಶೇಷಗಳನ್ನು ಪತ್ತೆ ಮಾಡಿದೆ.
ಸೋನಾರ್ ವಿಮಾನದ ಅವಶೇಷಗಳ ಚಿತ್ರಗಳನ್ನು ಕ್ಲಿಕ್ ಮಾಡಿದೆ. ತಕ್ಷಣ ಆ ಚಿತ್ರಗಳನ್ನು ವಾಯುಪಡೆ ಅಧಿಕಾರಿಗಳಿಗೆ ಕಳುಹಿಸಲಾಗಿದೆ. ಅವರು ಅಧ್ಯಯನ ನಡೆಸಿ ಈ ಅವಶೇಷಗಳು ಏಳು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ An-32 ವಿಮಾನಕ್ಕೆ ಸೇರಿದ್ದು ಎಂದು ದೃಢಪಡಿಸಿದ್ದಾರೆ.




























































