ಜನರಿಗೆ ಆರೋಗ್ಯ ವಿಮೆ ನೀಡಿ ಮನಗೆಲ್ಲುವ ಪ್ರಯತ್ನ
ಬೆಳಗಾವಿ: ಮಹಾರಾಷ್ಟ್ರ ಮತ್ತೆ ಬೆಳಗಾವಿಯಲ್ಲಿ ಗಡಿ ತಕರಾರು ಪ್ರಾರಂಭಿಸಿದೆ. ಮಹಾರಾಷ್ಟ್ರ ಸಂಸದ ಧೈರ್ಯಶೀಲ ಮಾನೆ ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಬಾಲ್ಕಿ ಸೇರಿದಂತೆ 865 ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಬೇಕು. ಗಡಿ ವಿವಾದ ಹೋರಾಟ ಸುಪ್ರೀಂಕೋರ್ಟ್ನಲ್ಲಿದೆ. ನಮ್ಮ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬರೀ ಹೇಳಿಕೆ ಕೊಡುವ ಸಿಎಂ ಅಲ್ಲ. ಗಡಿ ವಿವಾದದ ಹೋರಾಟದಲ್ಲಿ ಏಕನಾಥ್ ಶಿಂಧೆ ಜೈಲಿಗೆ ಹೋಗಿದ್ದರು. ಹೀಗಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ಬೆಳಗಾವಿಯಲ್ಲಿ ಹೇಳಿದ್ದಾರೆ.
ಕರ್ನಾಟಕದ ಗಡಿಯಲ್ಲಿ ಇರುವ ಮರಾಠಿ ಭಾಷಿಕರಿಗೆ ಮಹಾರಾಷ್ಟ್ರ ಸರ್ಕಾರ ಆರೋಗ್ಯ ವಿಮೆ ಜಾರಿ ಮಾಡಿದೆ. 865 ಹಳ್ಳಿಗಳಲ್ಲಿರುವ ಮರಾಠಿ ಭಾಷಿಕರಿಗೆ ಈ ಯೋಜನೆ ತಲುಪಿಸಬೇಕು. ಇದೇ ಕಾರಣಕ್ಕೆ ಮಹಾರಾಷ್ಟ್ರ ಸರ್ಕಾರ ಎಂಇಎಸ್‌ಗೆ ಪೂರ್ಣ ಅಧಿಕಾರ ನೀಡಿದೆ. ಎಂಇಎಸ್ನ ಶಿಫಾರಸ್ಸು ಮೇರೆಗೆ ಆರೋಗ್ಯ ವಿಮೆ ಲಾಭ ಮರಾಠಿ ಭಾಷಿಕರಿಗೆ ಸಿಗಲಿದೆ. ಎಷ್ಟೇ ಕೋಟಿ ಖರ್ಚಾದರೂ ಪರವಾಗಿಲ್ಲ, ಮಹಾರಾಷ್ಟ್ರ ಸೇರಬಯಸುವ 865 ಹಳ್ಳಿಗಳ ಜನರ ಮನೆ ಮನೆಗೂ ಎಂಇಎಸ್ ಮುಖಂಡರು ಯೋಜನೆ ತಲುಪಿಸಬೇಕು ಎಂದು ಹೇಳಿದ್ದಾರೆ.
ಈ ಆರೋಗ್ಯ ವಿಮೆ ಯೋಜನೆ ಗಡಿ ಹೋರಾಟಕ್ಕೆ ಬಲ ತಂದು ಕೊಡಲಿದೆ. ಈ ವಿಮೆ ಮೂಲಕ ಕರ್ನಾಟಕ, ಮಹಾರಾಷ್ಟ್ರದಲ್ಲಿ ಇರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ಗಡಿ ಭಾಗದ ಮರಾಠಿ ಭಾಷಿಕರ ಪರವಾಗಿ ಮಹಾರಾಷ್ಟ್ರ ಸರ್ಕಾರವಿದೆ ಎಂದಿದ್ದಾರೆ.





















