ಮೂರು ಉಪಮುಖ್ಯಮಂತ್ರಿ ಹುದ್ದೆ ಮೂಲಕ ಡಿಕೆಶಿ ಕಟ್ಟಿಹಾಕುವ ತಂತ್ರಗಾರಿಕೆ?
ಬೆಂಗಳೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮನೆಯಲ್ಲಿ ಕಾಂಗ್ರೆಸ್‌ನ ಕೆಲವು ನಾಯಕರಿಗಾಗಿ ನಡೆದ ಡಿನ್ನರ್ ಪಾರ್ಟಿ ಕಾಂಗ್ರೆಸ್‌ನ ಒಳಬೇಗುದಿಗೆ ಕಾರಣವಾಗಿದೆ. ಸಚಿವರೂ ಸೇರಿದಂತೆ ಕೆಲವು ಹಿರಿಯ ನಾಯಕರು ಈ ಭೋಜನಕೂಟದಲ್ಲಿ ಭಾಗವಹಿಸಿ ತಡರಾತ್ರಿಯ ತನಕ ರಹಸ್ಯ ಚರ್ಚೆ ಮಾಡಿರುವುದು ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಸತೀಶ್ ಜಾರಕಿಹೊಳಿ ಇತ್ತೀಚಿಗಷ್ಟೇ ದಿಲ್ಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಭೇಟಿಮಾಡಿ ಮೂರು ಡಿಸಿಎಂ ಹುದ್ದೆಯ ದಾಳ ಉರುಳಿಸಿದ್ದರು. ಮುಂಬರುವ ಲೋಕಸಭೆ ಚುನಾವಣೆ ದೃಷ್ಟಿಯಿಂದ ಹಿಂದುಳಿದ ವರ್ಗದ ಹಾಗೂ ಅಲ್ಪಸಂಖ್ಯಾತ ಸಮುದಾಯದವರು ಡಿಸಿಎಂ ಆಗಬೇಕು ಎಂದು ಚರ್ಚೆ ನಡೆಸಿದ್ದೇನೆ. ನಾನು ಡಿಸಿಎಂ ಆಗಬೇಕು ಎಂದು ಕಾರ್ಯಕರ್ತರು ಹಾಗೂ ಮಠಾಧೀಶರು ಒತ್ತಾಯಿಸುತ್ತಿರೋದನ್ನು ವರಿಷ್ಠರ ಗಮನಕ್ಕೆ ತಂದಿರೋದಾಗಿ ಹೇಳಿದ್ದರು.
ಸಹಕಾರ ಸಚಿವ ರಾಜಣ್ಣ ಕೂಡ ಬಹಿರಂಗವಾಗಿಯೇ ಹೋದಲ್ಲಿ ಬಂದಲೆಲ್ಲಾ ಮೂರು ಡಿಸಿಎಂ ಹುದ್ದೆಗಳ ಸೃಷ್ಟಿ ಬಗ್ಗೆ ಒತ್ತಾಯಿಸುತ್ತಿದ್ದಾರೆ. ವೀರಶೈವ ಲಿಂಗಾಯತ, ಅಲ್ಪಸಂಖ್ಯಾತ ಮತ್ತು ಪರಿಶಿಷ್ಟ ವರ್ಗದವರಿಗೆ ಡಿಸಿಎಂ ಹುದ್ದೆ ನೀಡಬೇಕು. ಇದರಿಂದ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂದು ಹೇಳುತ್ತಿದ್ದಾರೆ.
ಸಚಿವ ಸತೀಶ್ ಜಾರಕಿಹೊಳಿ ಗುರುವಾರ ಡಿನ್ನರ್ ನೆಪದಲ್ಲಿ ತಮ್ಮ ನಿವಾಸದಲ್ಲಿ ಸಭೆ ನಡೆಸಿದ್ದಾರೆ. ಸಚಿವರಾದ ಡಾ.ಜಿ. ಪರಮೇಶ್ವರ್, ಡಾ.ಎಚ್.ಸಿ. ಮಹದೇವಪ್ಪ, ಕೆ.ಎಚ್. ಮುನಿಯಪ್ಪ, ಕೆ.ಎನ್. ರಾಜಣ್ಣ ಸಭೆಯಲ್ಲಿ ಭಾಗವಹಿಸಿದ್ದಾರೆ. ರಾತ್ರಿ 9 ಗಂಟೆಯಿಂದ 11 ಗಂಟೆಯವೆರೆಗೆ ರಹಸ್ಯವಾಗಿ ಮಾತುಕತೆ ನಡೆದಿದೆ. ಸಭೆಯಲ್ಲಿ ಹಾಜರಿದ್ದವರ ಪೈಕಿ ಸತೀಶ್ ಜಾರಕಿಹೊಳಿ, ಗೃಹ ಸಚಿವ ಪರಮೇಶ್ವರ್ ಕೂಡ ಡಿಸಿಎಂ ಸ್ಥಾನದ ರೇಸ್‌ನಲ್ಲಿ ಪ್ರಮುಖವಾಗಿ ಇದ್ದಾರೆ. ಸತೀಶ್ ಜಾರಕಿಹೊಳಿ, ಮಹದೇವಪ್ಪ, ಕೆ.ಎನ್.ರಾಜಣ್ಣ ಇವರೆಲ್ಲಾ ಸಿಎಂ ಸಿದ್ದರಾಮಯ್ಯ ಬಣಕ್ಕೆ ಸೇರಿದವರು ಎಂಬುದೂ ವಿಶೇಷ.
ಸರಕಾರ ರಚನೆಯಾಗುವ ವೇಳೆ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಡಿ.ಕೆ ಶಿವಕುಮಾರ್ ಸರಕಾರದಲ್ಲಿ ಒಬ್ಬನೇ ಉಪಮುಖ್ಯಮಂತ್ರಿ ಇರಬೇಕೆಂಬ ಷರತ್ತು ಹಾಕಿ ಆ ಹುದ್ದೆಯನ್ನು ಒಪ್ಪಿಕೊಂಡಿದ್ದಾರೆ. ಉಪಮುಖ್ಯಮಂತ್ರಿಯಾಗಿದ್ದರೂ ಕೂಡ ಸಿಎಂ ಸಿದ್ದರಾಮಯ್ಯಗಿಂತ ತುಂಬಾ ಚುರುಕಿನಿಂದ ರಾಜಕೀಯ ದಾಳಗಳನ್ನು ಉರುಳಿಸುತ್ತಿದ್ದಾರೆ. ಸಂಪುಟ ವಿಸ್ತರಣೆ ವೇಳೆಯೇ ಎರಡು-ಮೂರು ಡಿಸಿಎಂ ಹುದ್ದೆ ಸೃಷ್ಟಿಸುವುದಾದರೆ ತಮಗೆ ಆ ಸ್ಥಾನವೇ ಬೇಡ. ಒಬ್ಬನಿಗೇ ಕೊಡಿ ಎಂದು ಹೈಕಮಾಂಡ್ ಮುಂದೆ ಪಟ್ಟುಹಾಕಿ ಅದರಲ್ಲಿ ಯಶಸ್ವಿ ಆಗಿದ್ದರು. ಡಿ.ಕೆ. ಶಿವಕುಮಾರ್ ಬೆಂಬಲಿಗ ಶಾಸಕರಂತೂ ಎರಡೂವರೆ ವರ್ಷದ ಬಳಿಕ ಡಿ.ಕೆ. ಶಿವಕುಮಾರ್ ಅವರೇ ಸಿಎಂ ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಬೆಂಬಲಿಗರೆಲ್ಲ ಸೇರಿ ಮೂರು ಉಪಮುಖ್ಯಮಂತ್ರಿ ಹುದ್ದೆಗೆ ಒತ್ತಾಯಿಸುತ್ತಿರುವುದು ಶಿವಕುಮಾರ್ ಅವರನ್ನು ಕಟ್ಟಿಹಾಕುವ ಸಿದ್ದರಾಮಯ್ಯನವರ ತಂತ್ರಗಾರಿಕೆ ಎನ್ನಲಾಗುತ್ತಿದೆ.
























