ಲೀಲಾಧರ ಶೆಟ್ಟಿಯವರ ಡೆತ್‌ನೋಟ್‌ – ಸಾವಿನಲ್ಲೂ ಸಮಾಜಕ್ಕಾಗಿ ಮಿಡಿದ ಹೃದಯ

ಕಾರ್ಕಳ : ಸಮಾಜ ಸೇವಕ, ರಂಗಕರ್ಮಿ ಕಾಪು ಲೀಲಾಧರ ಶೆಟ್ಟಿ ಮತ್ತು ಅವರ ಪತ್ನಿ ವಸುಂಧರಾ ಎಲ್‌. ಶೆಟ್ಟಿ ಮಂಗಳವಾರ ರಾತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಕ್ಕಳಿಲ್ಲದ ಈ ದಂಪತಿ 16 ವರ್ಷದ ಹಿಂದೆ ಒಂದು ಹೆಣ್ಣು ಮಗುವನ್ನು ದತ್ತು ಪಡೆದಿದ್ದರು. ಈ ಸಾಕು ಪುತ್ರಿ ಮನೆ ದುರಸ್ತಿ ಕೆಲಸಕ್ಕೆಂದು ಬಂದಿದ್ದ ಗಿರೀಶ್‌ ಎನ್ನುವವನೊಂದಿಗೆ ಓಡಿ ಹೋಗಿದ್ದಾಳೆ ಎಂದು ಶಂಕಿಸಲಾಗಿದೆ. ಸಾಕುಪುತ್ರಿ ಮನೆಬಿಟ್ಟು ಹೋದ ವಿಚಾರವಾಗಿ ಮನನೊಂದು ಲೀಲಾಧರ ಶೆಟ್ಟಿ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಅವರ ಅಕ್ಕನ ಮಗ ಮೋಹನ್ ಡಿ. ಶೆಟ್ಟಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸಾಕುಪುತ್ರಿಗಾಗಿ ಪೊಲೀಸರು ಶೋಧಕಾರ್ಯ ಮುಂದುವರೆಸಿದ್ದಾರೆ. ಕಳೆದ ಎರಡು ದಿನಗಳಿಂದ ಕಾಪು ಪರಿಸರದಲ್ಲಿ ನೀರವ ಮೌನ ಆವರಿಸಿದೆ.

ಡೆತ್‌ನೋಟ್‌
ಲೀಲಾಧರ ಶೆಟ್ಟಿ ಅವರು ಡೆತ್‌ನೋಟ್‌ ಬರೆದಿಟ್ಟಿದ್ದು, ಅದರ ವಿವರ ಅಧಿಕೃತವಾಗಿ ಬಹಿರಂಗವಾಗಿಲ್ಲ. “ನನ್ನನ್ನು ಕ್ಷಮಿಸಿ, ಪ್ರಾಣಕ್ಕಿಂತ ಮಾನ ಮುಖ್ಯ ಯಾರಿಗೆಲ್ಲಾ ಎಷ್ಟು ಸಾಲ ಕೊಡಬೇಕಿದೆ ಮತ್ತು ಅವರ ದೂರವಾಣಿ ಸಂಖ್ಯೆ ಇಲ್ಲಿದೆ. ಎಲ್‌ಐಸಿ ಕಮೀಷನ್‌ನಿಂದ ಬರುವ ಹಣದಲ್ಲಿ ಸಂದಾಯ ಮಾಡಿ. ತಾನು ಕಲಿತ ಕರಂದಾಡಿ ಶಾಲೆಯನ್ನು ಅಭಿವೃದ್ಧಿ ಪಡಿಸಿ, ಅಲ್ಲಿನ ಮಕ್ಕಳ ಬಗ್ಗೆ ಪ್ರೀತಿ ತೋರಿ. ಬಾಕಿ ಇರುವ ಊರಿನ ವಿವಿಧ ಅಭಿವೃದ್ಧಿ ಕೆಲಸಗಳನ್ನು ಶೀಘ್ರ ಮುಗಿಸಿ’ ಎಂದು ಪತ್ರದಲ್ಲಿ ಬರೆದಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ.

ಕಾಕತಾಳೀಯ
ಮಂಗಳವಾರ ರಾತ್ರಿ ಅವರ ರಂಗತರಂಗ ತಂಡದಿಂದ ಪೆರ್ಡೂರಿನ ಸಾಂತ್ಯಾರಿನಲ್ಲಿ ನಾಟಕ ಪ್ರದರ್ಶನ ನಡೆಯುತ್ತಿದ್ದ ವೇಳೆ ಇದ್ದಕ್ಕಿದ್ದಂತೆ 11.30 ರಿಂದ 12.30 ರವರೆಗೆ ಒಂದು ಗಂಟೆ ಮೈಕ್‌ ಬಂದ್‌ ಆಗಿತ್ತು. ಬಳಿಕ ತನ್ನಿಂತಾನೆ ಸರಿಯಾಗಿತ್ತು. ಇದೇ ಅವಧಿಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು.

































































error: Content is protected !!
Scroll to Top