2550ನೇ ಪರಿನಿರ್ವಾಣ ನಿಮಿತ್ತ ವಿಶೇಷ ಅಂಚೆ ಕಾರ್ಡ್, ಮುದ್ರೆ ಬಿಡುಗಡೆ
ಕಾರ್ಕಳ: ಅಹಿಂಸಾ ಪರಮೋ ಧರ್ಮ, ಅನೇಕಾಂತವಾದ ಹಾಗೂ ಬದುಕು ಬದುಕಲು ಬಿಡು ಎಂಬ ಉದಾತ್ತ ತತ್ವಗಳನ್ನು ಪ್ರತಿಪಾದಿಸಿದವರು ಮಹಾವೀರರು. ಅಹಿಂಸೆಯ ಪ್ರತಿಪಾಧಕರಾದ ಭಗವಾನ್ ಮಹಾವೀರರ ಬೋಧನೆ ಸಾರ್ವಕಾಲೀಕ ಎಂದು ಮೈಸೂರು ಮಹಾಸಂಸ್ಥಾನದ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಭಗವಾನ್ ಶ್ರೀ ಮಹಾವೀರರ 2550ನೇ ಪರಿನಿರ್ವಾಣ ಅಥವಾ ಮೋಕ್ಷ ಕಲ್ಯಾಣ ಮಹೋತ್ಸವದ ಅಂಗವಾಗಿ ಭಾರತೀಯ ಅಂಚೆ ಇಲಾಖೆ ಮೈಸೂರು ವಿಭಾಗ ಪ್ರಕಟಿಸಿದ ಭಗವಾನ್ ಮಹಾವೀರರ ವಿಶೇಷ ಅಂಚೆ ಕಾರ್ಡ್ ಹಾಗೂ ನಿರ್ವಾಣ ಮಹೋತ್ಸವದ ವಿಶೇಷ ಮುದ್ರೆಯನ್ನು ಮೈಸೂರು ಅರಮನೆಯಲ್ಲಿ ಬಿಡುಗಡೆಗೊಳಿಸುವ ಕಾರ್ಯಕ್ರಮದಲ್ಲಿ ಸೋಮವಾರ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿದರು.
ಅಂಚೆ ಕಚೇರಿಗಳ ಸೀನಿಯರ್ ಸೂಪರಿಂಟೆಂಡೆಂಟ್ ಐಪಿಎಸ್ ಅಧಿಕಾರಿ ಡಾ. ಏಂಜೆಲ್ ರಾಜ್ ಅಂಚೆ ಕಾರ್ಡ್ ಮತ್ತು ಮುದ್ರೆಯನ್ನು ಬಿಡುಗಡೆಗೊಳಿಸಿದರು. ಈ ವರ್ಷ ಕೇಂದ್ರ ಹಾಗೂ ಅನೇಕ ರಾಜ್ಯ ಸರಕಾರ ಮಾತ್ರವಲ್ಲದೆ ದೇಶ-ವಿದೇಶಗಳಲ್ಲಿನ ಜೈನ ಧರ್ಮೀಯರು ಜೈನ ಧರ್ಮದ ಪ್ರವರ್ತಕ ಭಗವಾನ್ ಶ್ರೀ ಮಹಾವೀರರ 2550ನೇ ಪರಿನಿರ್ವಾಣ ಅಥವಾ ಮೋಕ್ಷ ಕಲ್ಯಾಣ ಮಹೋತ್ಸವವನ್ನು ಆಚರಿಸುತ್ತಿರುವುದು ಸಂತಸದ ಸಂಗತಿ. ಜೈನ ಧರ್ಮೀಯರು ಭಗವಾನ್ ಮಹಾವೀರರು ಮೋಕ್ಷ ಹೊಂದಿದ ದಿನವನ್ನು ಮನೆಮನೆಗಳಲ್ಲಿ, ಬಸದಿಗಳಲ್ಲಿ ದೀಪಗಳನ್ನು ಉರಿಸುವುದರ ಮೂಲಕ ದೀಪಾವಳಿಯನ್ನಾಗಿ ಆಚರಿಸಿ ಸಂಭ್ರಮಿಸುತ್ತಾರೆ. ಜೈನಧರ್ಮಿಯರಿಗೆ ದೀಪಾವಳಿ ಆತ್ಮಕಲ್ಯಾಣದ ಸಂಕೇತ ಎಂದು ಅವರು ಹೇಳಿದರು.

ಯೋಜನೆಯ ಪ್ರವರ್ತಕ ಮೂಡುಬಿದರೆ ಎಕ್ಸಲೆಂಟ್ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮೆಲ್ಲರ ಹೆಮ್ಮೆ ಹಾಗೂ ಗೌರವಕ್ಕೆ ಪಾತ್ರವಾಗಿರುವ ಮೈಸೂರು ಮಹಾಸಂಸ್ಥಾನದ ಮಹಾರಾಜರು ತಮ್ಮ ಅರಮನೆಯಲ್ಲಿ ಈ ಕಾರ್ಯಕ್ರಮವನ್ನು ನಡೆಸಲು ಅವಕಾಶ ಮಾಡಿಕೊಟ್ಟು ತಮ್ಮ ಉಪಸ್ಥಿತಿಯನ್ನು ನೀಡಿ ಹರಸಿ ಶುಭಕೋರಿ ಭಗವಾನ ಮಹಾವೀರರ 2550ನೇ ನಿರ್ವಾಣ ಮಹೋತ್ಸವದ ಪ್ರಥಮ ಅಂಚೆ ಕಾರ್ಡ್ ಹಾಗೂ ಮುದ್ರೆಯನ್ನು ಸ್ವೀಕರಿಸಿದ್ದು ಅಹಿಂಸಾ ತತ್ವದಲ್ಲಿ ನಂಬಿಕೆಯಿಟ್ಟುಕೊಂಡಿರುವ ನಮಗೆ ತುಂಬ ಸಂತೋಷವಾಗಿದೆ, ಕಾರ್ಯಕ್ರಮ ಶೃಂಗ ಸಾರ್ಥಕ್ಯವನ್ನು ಕಂಡಿದೆ ಎಂದರು.
ವಿಶೇಷವಾದ ಅಂಚೆ ಕಾರ್ಡ್ ಹಾಗೂ ಮುದ್ರೆಯ ಪ್ರವರ್ತಕರಾದ ಮೂಡುಬಿದಿರೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಯುವರಾಜ್ ಜೈನ್ ಹಾಗೂ ರಶ್ಮಿತಾ ಜೈನ್, ಭಾರತೀಯ ಜೈನ ತೀರ್ಥ ಸಂರಕ್ಷಿಣಿ ಮಹಾಸಭಾದ ಕಾರ್ಯಾಧ್ಯಕ್ಷ ವಿಕಾಸ್ ಜೈನ್, ಹುಬ್ಬಳ್ಳಿಯ ಸಂಸ್ಕಾರ ವಿದ್ಯಾಲಯದ ಅಧ್ಯಕ್ಷ ಮಹಾವೀರ ಕುಂದೂರ್, ಮೈಸೂರು ಅಂಚೆ ವಿಭಾಗದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.






































































