ವಿದ್ಯಾರ್ಥಿಗಳು ಮಾನಸಿಕವಾಗಿ ದೈಹಿಕವಾಗಿ ಸೃದೃಢರಾಗಬೇಕು – ಡಾ. ಸಂಜಯ್
ಕಾರ್ಕಳ : ತಂದೆ, ತಾಯಿ ಹಾಗೂ ಶಿಕ್ಷಕರು ಬದುಕಿಗೆ ಬೆಳಕು ತೋರುವ ದೇವರು. ಅವರ ಮಾರ್ಗದರ್ಶನ ಹಾಗೂ ಪ್ರಾಮಾಣಿಕ ಪ್ರಯತ್ನದ ಮೂಲಕ ಉತ್ತಮ ಸಾಧನೆ ಮಾಡಿ ಸಮಾಜದಲ್ಲಿ ಮಾದರಿ ವ್ಯಕ್ತಿತ್ವ ಬೆಳೆಸಿಕೊಳ್ಳಿ ಎಂದು ಉಡುಪಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಾರುತಿ ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು.
ಅವರು ಶುಕ್ರವಾರ ಗಾಂಧೀ ಮೈದಾನದಲ್ಲಿ ನಡೆದ ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ. ಟಿ.ಎಂ.ಎ. ಪೈ ಆಸ್ಪತ್ರೆಯ ಸ್ತ್ರೀರೋಗ ತಜ್ಞ ಡಾ. ಸಂಜಯ್ ಮಾತನಾಡಿ, ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ಸಾಧನೆಯೊಂದಿಗೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕ ವಾತಾವರಣವಿರಬೇಕು. ಹಾಗಾದಾಗ ಮಾತ್ರ ವಿದ್ಯಾರ್ಥಿಗಳು ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಲು ಸಾಧ್ಯ. ಈ ನಿಟ್ಟಿನಲಿ ಕ್ರೈಸ್ಟ್‌ಕಿಂಗ್‌ನಲ್ಲಿ ನಡೆಯುತ್ತಿರುವ ಇಂದಿನ ಕಾರ್ಯಕ್ರಮ ಅಭಿನಂದನಾರ್ಹ ಎಂದರು.

ದೇಶ ಕಟ್ಟುವ ಕೆಲಸದಲ್ಲಿ ತೊಡಗಿಕೊಳ್ಳಿ – ಭಾಸ್ಕರ್ ಟಿ.
ಕ್ಷೇತ್ರ ಶಿಕ್ಷಣಾಧಿಕಾರಿ ಭಾಸ್ಕರ ಟಿ. ಮಾತನಾಡಿ, ದೇಶದ ಮೊದಲ ಪ್ರಧಾನ ಮಂತ್ರಿ ಜವಹರಲಾಲ್ ನೆಹರೂ ಅವರಿಗೆ ಮಕ್ಕಳ ಮೇಲಿದ್ದ ಅಪಾರ ಪ್ರೀತಿಯಿಂದಾಗಿ ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಮಕ್ಕಳೇ ದೇಶದ ಅಮೂಲ್ಯವಾದ ಆಸ್ತಿ. ಇಂದಿನ ಮಕ್ಕಳ ಭವಿಷ್ಯದಲ್ಲಿ ಭವ್ಯ ಭಾರತದ ಅಸ್ತಿತ್ವವಿದೆ. ವಿದ್ಯಾರ್ಥಿ ದೆಸೆಯಲ್ಲೇ ಸಮಾಜದಲ್ಲಿ ಮುಂದೆ ನಾನು ಏನು ಆಗಬಲ್ಲೇ, ನನ್ನಿಂದ ಸಮಾಜಕ್ಕಾಗಿ ಏನು ಮಾಡಬಹುದು ಎಂಬ ಆಲೋಚನೆಯಿರಬೇಕಾದುದು ಅಗತ್ಯವೆಂದರು.
ಸಂಸ್ಥೆಯ ಆರನೇ ತರಗತಿ ವಿದ್ಯಾರ್ಥಿನಿ ಅಪೂರ್ವ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅವೆಲಿನ್ ಲೂಯಿಸ್, ಟ್ರಸ್ಟಿಗಳಾದ ಪೀಟರ್ ಫೆರ್ನಾಂಡಿಸ್, ವಾಲ್ಟರ್ ಡಿʼಸೋಜಾ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಮೆರಿಯನ್ ಡಿʼಸೋಜಾ, ಪದವಿ ಪೂರ್ವ ಕಾಲೇಜಿ ಉಪ ಪ್ರಾಂಶುಪಾಲ ಡಾ. ಪ್ರಕಾಶ್ ಭಟ್ ಹಾಗೂ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯ ಶಿಕ್ಷಕ ಡೊಮಿನಿಕ್ ಅಂದ್ರಾದೆ ಸ್ವಾಗತಿಸಿ, ಆಂಗ್ಲ ಭಾಷಾ ಶಿಕ್ಷಕಿ ಆಲಿಸ್ ಕಾರ್ಯಕ್ರಮ ನಿರೂಪಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಲಕ್ಷ್ಮೀ ನಾರಾಯಣ ಕಾಮತ್ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜ್ಞಾನ ವಸ್ತು ಪ್ರದರ್ಶನ, ಚಿಣ್ಣರ ನೃತ್ಯ, ಕ್ಲೇ ಮೊಡಲಿಂಗ್, ಡ್ರಾಯಿಂಗ್, ಫುಡ್ ಫೆಸ್ಟ್ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿತು.













































































