ಕಾರ್ಕಳ : ಪರಶುರಾಮನ ಪ್ರತಿಮೆಯ ವಿಚಾರವಾಗಿ ಕಾರ್ಯಕರ್ತರ ಸಭೆಯಲ್ಲಿ ಶಾಸಕರು ನೀಡಿದ ಹೇಳಿಕೆ ಸಮರ್ಥನೆಯೇ ಹೊರತು ಅದೇ ಸತ್ಯವಲ್ಲ. ಭಾಷೆಯ ಎಲ್ಲೆ ಮೀರಿ ಆಡಿದ ಅಸಭ್ಯ ಮತ್ತು ಅವಹೇಳನ ಮಾತುಗಳಿಂದ ಏನೂ ಸಾಧಿಸಿದಂತೆ ಆಗುವುದಿಲ್ಲ ಎಂದು ಶುಭದ ರಾವ್ ಹೇಳಿದ್ದಾರೆ.
ಮಂಗಳವಾರ ವಿಡಿಯೋ ಮೂಲಕ ಪ್ರಕಟನೆ ನೀಡಿರುವ ಶುಭದ ರಾವ್, ತಾನು ಮಾಡಿರುವ ಆರೋಪಗಳು ಸುಳ್ಳೆಂದು ದೇಗುಲದಲ್ಲಿ ಪ್ರಮಾಣ ಮಾಡಿ ಸಾಬೀತುಪಡಿಸಿದರೆ ನಾನು ಕ್ಷಮೆ ಕೇಳಿ ರಾಜಕೀಯ ನಿವೃತ್ತಿಯಾಗುತ್ತೇನೆ. ಅಂದೇ ನಮ್ಮ ನಡುವಿನ ರಾಜಕೀಯ ಸಂಘರ್ಷ ಕೊನೆಯಾಗಲಿ ಪ್ರಮಾಣ ಮಾಡುವ ಸ್ಥಳ, ಸಮಯ, ದಿನಾಂಕವನ್ನು ನೀವೇ ನಿರ್ಧರಿಸಿ ಎಂದು ಶಾಸಕ ಸುನಿಲ್ ಕುಮಾರ್ ರವರಿಗೆ ಪುರಸಭಾ ಸದಸ್ಯ, ಕಾಂಗ್ರೆಸ್ ವಕ್ತಾರ ಶುಭದ ರಾವ್ ಸವಾಲು ಹಾಕಿದ್ದಾರೆ.
ಬಿಜೆಪಿಯ ಕಚೇರಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಪರಶುರಾಮನ ಪ್ರತಿಮೆ ಬಗ್ಗೆ ಶಾಸಕರು ನೀಡಿದ ಸಮರ್ಥನೆ ಸುಳ್ಳಿನಿಂದ ಕೂಡಿದೆ. ತನ್ನ ಮೇಲೆ ಬಂದ ಆರೋಪಗಳನ್ನು ಕಾರ್ಯಕರ್ತರ ಸಭೆ ಕರೆದು ಅವರ ಮುಂದೆ ಹೇಳುವ ದುಸ್ಥಿತಿ ಅವರಿಗೆ ಬಂದಿರುವುದು ದುರಂತ. ಅವರ ಮೇಲೆ ಮಾಡಿದ ಆರೋಪಗಳಲ್ಲಿ ಒಂದನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ ಎಂದು ಹೇಳಿರುವ ಅವರು ದೇಗುಲದಲ್ಲಿ ಪ್ರಮಾಣಕ್ಕೆ ಬರುವ ಮೂಲಕ ಆರೋಪಗಳೆಲ್ಲವೂ ಸುಳ್ಳೆಂದು ಸಾಬೀತುಪಡಿಸಲು ಒಳ್ಳೆಯ ಅವಕಾಶವಿದೆ. ಸವಾಲನ್ನು ಸ್ವೀಕರಿಸಲಿ ಎಂದು ಹೇಳಿರುವ ಶುಭದ ಅವರು ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿಯವರು ಉದ್ಘಾಟಿಸಿದ್ದ ಪರಶುರಾಮನ ಪ್ರತಿಮೆ ಸಂಪೂರ್ಣ ಕಂಚಿನದ್ದೇ ? ಪ್ರತಿಮೆಯ ಮೇಲ್ಬಾಗ ತೆರವು ವಿಚಾರವಾಗಿ ಜಿಲ್ಲಾಡಳಿತ, ಪೊಲೀಸ್ ಮತ್ತು ನಿರ್ಮಿತಿ ಕೇಂದ್ರದ ಮೇಲೆ ತಾವು ಒತ್ತಡ ಹೇರಲಿಲ್ಲವೇ ? ಕಾಂಗ್ರೆಸ್ ಅನುದಾನ ತಡೆ ಹಿಡಿದಿದೆ ಎಂಬ ನಿಮ್ಮ ಆರೋಪ ಸರಿಯೇ ? ಎಂದು ಶುಭದ ರಾವ್ ಪ್ರಶ್ನಿಸಿದರು.






























































