ಪಂಚರಾಜ್ಯ ಚುನಾವಣೆಗಾಗಿ ಗುತ್ತಿಗೆದಾರರಿಗೆ ಕಿರುಕುಳ ಕೊಟ್ಟು ವಸೂಲು ಮಾಡಿದ ಹಣ
ಬೆಂಗಳೂರು: ಆದಾಯ ತೆರಿಗೆ ಅಧಿಕಾರಿಗಳು ಬೆಂಗಳೂರಿನ ಫ್ಲ್ಯಾಟ್ ಒಂದರಲ್ಲಿ ವಶಪಡಿಸಿಕೊಂಡಿರುವ ಕಂತೆ ಕಂತೆ ಹಣ ಕಾಂಗ್ರೆಸ್ಗೆ ಸೇರಿದ್ದು ಎಂದು ಬಿಜೆಪಿ ಮತ್ತು ಜೆಡಿಎಸ್ ಆರೋಪಿಸಿದೆ. ಗುತ್ತಿಗೆದಾರರು, ಆಭರಣ ಮಳಿಗೆ ಮಾಲೀಕರು, ಮಾಜಿ ಕಾರ್ಪೋರೇಟರ್ಗಳಿಗೆ ಸೇರಿದ ಹಲವು ಕಡೆ ಬುಧವಾರ ರಾತ್ರಿಯಿಂದೀಚೆಗೆ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆದಿದೆ. ಈ ಸಂದರ್ಭ ಅಂಬಿಕಾಪತಿ ಎಂಬ ಗುತ್ತಿಗೆದಾರನಿಗೆ ಸೇರಿದ ಫ್ಲ್ಯಾಟ್ನಲ್ಲಿ ರಟ್ಟಿನ ಪೆಟ್ಟಿಗೆಳಲ್ಲಿ ತುಂಬಿಸಿಟ್ಟಿದ್ದ ಸುಮಾರು 43 ಕೋಟಿ. ರೂ. ಪತ್ತೆಯಾಗಿದೆ. ಈ ಗುತ್ತಿಗೆದಾರ ಕಾಂಗ್ರೆಸ್ ನಾಯಕರ ಜತೆ ನಿಕಟ ಒಡನಾಟ ಹೊಂದಿದ್ದಾರೆ ಎನ್ನಲಾಗಿದೆ. ಅವರ ಪತ್ನಿ ಕಾಂಗ್ರೆಸ್ನಿಂದ ಕಾರ್ಪೋರೇಟರ್ ಕೂಡ ಆಗಿದ್ದರು.
ಈ ಹಣ ಕಾಂಗ್ರೆಸ್ಗೆ ಸೇರಿದ್ದು, ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೆ ಬಳಸಲು ಕರ್ನಾಟಕದಲ್ಲಿ ಹಣ ಸಂಗ್ರಹಿಸುತ್ತಿದ್ದಾರೆ ಎಂದು ಬಿಜೆಪಿ, ಜೆಡಿಎಸ್ ಆರೋಪಿಸಿದೆ. ಐದು ರಾಜ್ಯಗಳಾದ ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಮಿಜೋರಾಂ ಮತ್ತು ಛತ್ತೀಸ್ಗಢ ಚುನಾವಣೆಗೆ ಹಣ ನೀಡಲು ಕಾಂಗ್ರೆಸ್ ಗುತ್ತಿಗೆದಾರರಿಂದ ಕಮಿಷನ್ ಪಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
5 ರಾಜ್ಯಗಳ ಚುನಾವಣೆ ಘೋಷಣೆಯಾದ ತಕ್ಷಣ ಕಾಟನ್ ಬಾಕ್ಸ್ಗಳಲ್ಲಿ ಗುತ್ತಿಗೆದಾರರ ಮನೆಯಲ್ಲಿ ಪತ್ತೆಯಾದ ಹಣ ಯಾರದ್ದು? ಯಾರಿಂದ ಸಂಗ್ರಹಿಸಲಾಗಿದೆ? ಇದಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಟಿಎಂ ಆಗುತ್ತೆ ಎಂದು ಈ ಹಿಂದೆ ಅಮಿತ್ ಶಾ ಹೇಳಿದ್ದರು. ಇದೀಗ ಸಾಕ್ಷಿ ಸಮೇತ ಕಳ್ಳರು ಸಿಕ್ಕಿಬಿದ್ದಿದ್ದಾರೆ. ಯಾವ ಕಮಿಷನ್ ಮೂಲಕ ಹಣ ಸಂಗ್ರಹಿಸಿದ್ದಾರೆ ಎಂದು ತನಿಖೆ ಆಗಲಿ. ಸಿಎಂ, ಡಿಸಿಎಂ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪಾತ್ರ ಏನು ಎಂದು ತನಿಖೆ ಆಗಬೇಕು. ಕೆಂಪಣ್ಣ ಕಾಂಗ್ರೆಸ್ ಏಜೆಂಟ್ ಅನ್ನೋದು ಪ್ರೂವ್ ಆಗುತ್ತಿದೆ. ಪತ್ತೆಯಾಗಿರುವ ದುಡ್ಡು ಪಂಚ ರಾಜ್ಯಗಳಿಗೆ ಎಲ್ಲೆಲ್ಲಿ ಹೋಗುತ್ತಿತ್ತೋ, ಈ ಬಗ್ಗೆ ತನಿಖೆಯಾದರೆ ಎಲ್ಲರೂ ಸಿಕ್ಕಿಹಾಕಿಕೊಳ್ಳುತ್ತಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಎಟಿಎಂ ಸರ್ಕಾರ ಅನ್ನೋದು ಈಗ ಸಾಕ್ಷಿ ಸಮೇತ ಗೊತ್ತಾಗಿದೆ. ಕೇವಲ ಸಣ್ಣ ಮೊತ್ತವಷ್ಟೇ ಸಿಕ್ಕಿದೆ, ಇನ್ನೂ ಬಹಳಷ್ಟು ಕಡೆ ಇರುತ್ತದೆ. ಕಿರುಕುಳ ನೀಡಿ ಹೆದರಿಸಿ ಕಲೆಕ್ಷನ್ ಮಾಡಿರುವ ಈ ದುಡ್ಡು ಯಾರಿಗೆ ಸೇರಿದ್ದು ಅಂತಾ ಗುತ್ತಿಗೆದಾರರು ಹೇಳಬೇಕು. ಹಿಂಸೆ ಕೊಟ್ಟು ವಸೂಲಿ ಮಾಡಿದ್ದಾರೆಂದು ಗುತ್ತಿಗೆದಾರರು ಹೇಳುತ್ತಿದ್ದಾರೆ. ನಮ್ಮ ಸರ್ಕಾರದ ಮೇಲೆ ಆಧಾರವಿಲ್ಲದೆ ಆರೋಪ ಮಾಡಿದ್ದರು. ಅಂದು ಆಪಾದನೆ ಮಾಡಿದವರಲ್ಲಿ ಅಂಬಿಕಾಪತಿ ಒಬ್ಬ. ಯಾವುದಾದರೂ ಗುತ್ತಿಗೆದಾರರ ಹತ್ತಿರ ಕ್ಯಾಶ್ ಹೇಗೆ ಬರುತ್ತದೆ? ಇದು ಕಿಕ್ಬ್ಯಾಕ್ ದುಡ್ಡು, ವಸೂಲಿ ದುಡ್ಡು, ಕಮಿಷನ್ ದುಡ್ಡು ಎಂದು ಬಿಜೆಪಿ ಶಾಸಕ ಡಾ.ಅಶ್ವತ್ಥ ನಾರಾಯಣ ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ಐಟಿ ದಾಳಿ ಬಗ್ಗೆ ನಮಗ್ಯಾಕೆ ಕೇಳುತ್ತೀರಾ ಎಂದು ಪ್ರಶ್ನಿಸಿದರು. ಯಾವ ರಾಜ್ಯಗಳಿಗೂ ನಾವು ಹಣ ಕೊಡಲ್ಲ, ಅವರು ಕೇಳುವುದಿಲ್ಲ. ಹಣ ಹೋಗಿರುವುದನ್ನು ಬಿಜೆಪಿಯವರು ನೋಡಿದ್ದಾರಾ? ಬಿಜೆಪಿಯವರ ಮಾಡಿದ ಎಲ್ಲ ಆರೋಪಗಳು ಆಧಾರ ರಹಿತ ಎಂದಿದ್ದಾರೆ.
ರಾಜಕೀಯ ಇಲ್ಲದೆ ಐಟಿ ಅಧಿಕಾರಿಗಳು ಬರುವುದಿಲ್ಲ. ರಾಜಕೀಯ ನಡೆಯುತ್ತಾ ಇರುವುದು ನಮಗೆ ಗೊತ್ತಿದೆ. ಬಿಜೆಪಿ ಅಧಿಕಾರದಲ್ಲಿ ಇರುವ ಕಡೆ ಐಟಿ ದಾಳಿ ನಡೆಯುವುದಿಲ್ಲ. ಅವರ್ಯಾರೋ ರಸ್ತೆ ಬೀದಿಯಲ್ಲಿ ಮಾತಾಡೋವರಿಗೆ ನಾನು ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.






























































