ರಾಜಪಥ-ನೀವು ಉತ್ತಮ ಭಾಷಣಕಾರ ಆಗಬೇಕೆ?

ಸಾರ್ವಜನಿಕ ವೇದಿಕೆಗಳಲ್ಲಿ ಭಾಷಣ ದೊಡ್ಡ ಸವಾಲು

ಈ 25 ಟಿಪ್ಸಗಳನ್ನು ಪಾಲಿಸಿದರೆ ನೀವು ಖಂಡಿತ ಉತ್ತಮ ಭಾಷಣಕಾರರು ಆಗಬಹುದು.

1) ಯಾರೂ ಜನ್ಮತಃ ಭಾಷಣಕಾರ ಆಗಿ ಹುಟ್ಟುವುದಿಲ್ಲ. ಪ್ರಯತ್ನ ಮಾಡಿದರೆ ಯಾರು ಕೂಡ ಒಳ್ಳೆಯ ಭಾಷಣಕಾರ ಆಗಬಹುದು.

2) ಒಳ್ಳೆಯ ಭಾಷಣಕಾರರಿಗಿಂತ ಪ್ರಭಾವಿ ಭಾಷಣಕಾರರಿಗೆ ಇಂದು ಹೆಚ್ಚು ಡಿಮಾಂಡ್ ಇದೆ. ಪ್ರಭಾವ ಅಂದರೆ ಅದು ನಿಮ್ಮ ಭಾಷಣದ ಪರಿಣಾಮ.

3) ಸಿದ್ಧತೆ ಮಾಡದೆ ಯಾವ ಭಾಷಣವನ್ನು ಮಾಡಬಾರದು. ಒಂದು ಗಂಟೆಯ ಭಾಷಣಕ್ಕಿಂತ ಒಂದು ನಿಮಿಷದ ಭಾಷಣಕ್ಕೆ ಹೆಚ್ಚು ಸಿದ್ಧತೆ ಬೇಕು.

4) ಭಾಷಣಕ್ಕೆ ಸಿದ್ಧತೆ ಮಾಡಲು ಹೊರಡುವ ಮುನ್ನ ಇಷ್ಟನ್ನು ಖಾತರಿ ಪಡಿಸಿಕೊಳ್ಳಿ, ಯಾರು ಪ್ರೇಕ್ಷಕರು? ಯಾವ ಸಂದರ್ಭ? ಮತ್ತು ಎಷ್ಟು ಸಮಯ ನೀವು ಮಾತಾಡಬೇಕು?

5) ನಿರಂತರ ಓದುವಿಕೆ ಮತ್ತು ಬರವಣಿಗೆ ನಿಮ್ಮನ್ನು ಒಳ್ಳೆಯ ಭಾಷಣಕಾರನನ್ನಾಗಿ ರೂಪಿಸಬಲ್ಲವು.

6) ಬೇರೆಯವರ ಭಾಷಣಗಳನ್ನು ಆಲಿಸದೆ ನೀವು ಒಳ್ಳೆಯ ಭಾಷಣಕಾರ ಆಗುವುದಿಲ್ಲ.

7) ಸಾಮಾನ್ಯ ವಿಷಯಗಳನ್ನು ಕೂಡ ಸ್ವಾರಸ್ಯಕರವಾಗಿ ನಿರೂಪಣೆ ಮಾಡುವ ಕೌಶಲ ಬೇಕು. ಅದು ನಿರಂತರ ಅಭ್ಯಾಸದ ಮೂಲಕ ಬರುತ್ತದೆ.

8) ಉತ್ತಮ ವಿಷಯಗಳು ನಿಮ್ಮ ಭಾಷಣದ ದೇಹ. ಆದರೆ ಉತ್ತಮ ಭಾವನೆಗಳು ನಿಮ್ಮ ಭಾಷಣದ ಆತ್ಮ ಆಗಿರುತ್ತವೆ. ಶಬ್ದಗಳಿಗಿಂತ ಭಾವನೆಗಳು ಹೆಚ್ಚು ವೇಗವಾಗಿ ಚಲಿಸುತ್ತವೆ.

9) ಭಾಷಣದಲ್ಲಿ ನೀವು ಬಳಸುವ ಶಬ್ದಗಳು ಹೆಚ್ಚು ತೂಕದ್ದು ಆಗಿರಬೇಕು. ಪ್ರಬುದ್ಧವಾದ ಮಾತುಗಳು ನಿಮ್ಮ ಭಾಷಣದ ತೂಕವನ್ನು ಹೆಚ್ಚಿಸುತ್ತವೆ. ಅತ್ಯಂತ ಸರಳವಾದ ಮತ್ತು ಸಾಹಿತ್ಯಪೂರ್ಣವಾದ ಭಾಷೆ ನಿಮ್ಮ ಭಾಷಣದ ಸೌಂದರ್ಯವನ್ನು ಹೆಚ್ಚಿಸುತ್ತದೆ.

10) ಹಿತಮಿತವಾದ ತಿಳಿಹಾಸ್ಯ, ಅಶ್ಲೀಲತೆ ಇಲ್ಲದ ಮತ್ತು ಯಾರನ್ನೂ ನೋಯಿಸದ ಹಾಸ್ಯಪ್ರಜ್ಞೆ ನಿಮ್ಮ ಭಾಷಣವನ್ನು ಸರ್ವಾಂಗ ಸುಂದರವಾಗಿ ಮಾಡುತ್ತದೆ. ಗಂಭೀರ ಭಾಷಣಕಾರ ಯಾರಿಗೂ ಇಷ್ಟ ಆಗುವುದಿಲ್ಲ.

11) ನೀವು ಆ ದಿನ ತೊಡುವ ವೇಷಭೂಷಣ ಆ ದಿನದ ಸಂದರ್ಭಕ್ಕೆ ಮತ್ತು ನಿಮ್ಮ ಮಾತುಗಳಿಗೆ ಪೂರಕವಾಗಿರಲಿ. ಅತ್ಯಂತ ಸರಳವಾದ ಮತ್ತು ಸದಭಿರುಚಿಯ ಡ್ರೆಸ್ ನಿಮ್ಮ ವ್ಯಕ್ತಿತ್ವದ ಕೈಗನ್ನಡಿ ಆಗುತ್ತದೆ.

12) ನೀವು ಯಾವಾಗಲೂ ಒಳಗೆ ಇರೋದಕ್ಕಿಂತ ಹೊರಗೆ ಹೆಚ್ಚು ಕಾನ್ಫಿಡೆಂಟ್ ಆಗಿ ಕಾಣುತ್ತೀರಿ. ನಿಮ್ಮ ಸಕಾರಾತ್ಮಕ ಯೋಚನೆಗಳು ನಿಮ್ಮನ್ನು ಹೆಚ್ಚು ಕಾನ್ಫಿಡೆಂಟ್ ಮಾಡುತ್ತವೆ

13) ಭಾಷಣದಲ್ಲಿ ಈ ಅಂಶಗಳನ್ನು ಆದಷ್ಟು ಅವಾಯ್ಡ್ ಮಾಡಿ. ನಿಂದನೆ, ಅತಿಯಾದ ಭರವಸೆ, ತುಷ್ಟೀಕರಣ, ಯಾರದೇ ಖಾಸಗಿ ವಿಷಯಗಳು, ವೈಯಕ್ತಿಕ ವಿಷಯಗಳು, ತಪ್ಪು ಮಾಹಿತಿಗಳು ಮತ್ತು ಉದ್ರೇಕಕಾರಿ ಅಂಶಗಳು.

14) ಯಾವುದೇ ಭಾಷಣದ ಆರಂಭ ಉತ್ತಮ ಆಗಿರಬೇಕು. ಅದು ಒಂದು ವಿಮಾನದ ಟೇಕ್ ಆಫ್ ಇದ್ದ ಹಾಗೆ. ಅದು ಪ್ರೇಕ್ಷಕರ ಗಮನವನ್ನು ನಿಮ್ಮ ಕಡೆ ಸೆಳೆಯಲು ಸಹಾಯ ಮಾಡುತ್ತದೆ. ಒಂದು ಒಳ್ಳೆಯ ಸುಭಾಷಿತ, ಕೊಟೇಶನ್, ನೈಜ ಘಟನೆಯ ಮೂಲಕ ನೀವು ಭಾಷಣವನ್ನು ಆರಂಭ ಮಾಡಬಹುದು. ಆದರೆ ಅವುಗಳನ್ನು ನಿಮ್ಮ ಭಾಷಣದ ಮುಂದಿನ ಥೀಮಗೆ ಕನೆಕ್ಟ್ ಮಾಡುವುದು ಅತಿ ಮುಖ್ಯ.
ಭಾಷಣದ ಆರಂಭದಲ್ಲಿ ವೇದಿಕೆಯಲ್ಲಿ ಇರುವ ಎಲ್ಲರನ್ನೂ ಅವರೇ, ಇವರೇ… ಎಂದು ಸಂಬೋಧನೆ ಮಾಡಿ ಪ್ರೇಕ್ಷಕರ ತಾಳ್ಮೆ ಪರೀಕ್ಷೆ ಮಾಡಬೇಡಿ.

15) ಶಬ್ದಗಳ ನಡುವೆ ಒಂದು ಶಬ್ದ ವಿರಾಮ, ವಾಕ್ಯಗಳ ನಡುವೆ ಒಂದು ಉಸಿರು ತೆಗೆದುಕೊಳ್ಳುವಷ್ಟು ವಿರಾಮ ಇರಬೇಕು. ಮಾತಿನ ವೇಗ ನಿಮ್ಮ ಮೆದುಳಿನ ವೇಗಕ್ಕಿಂತ ಹೆಚ್ಚಾದರೆ ತೊಂದರೆ. ಪ್ರೇಕ್ಷಕರ ಗ್ರಹಣ ಶಕ್ತಿಯನ್ನು ಹೊಂದಿಕೊಂಡು ನಿಮ್ಮ ಭಾಷಣದ ವೇಗವನ್ನು ನೀವು ಹೆಚ್ಚು ಅಥವಾ ಕಡಿಮೆ ಮಾಡಬಹುದು.

16)ಪ್ರತಿಯೊಂದು ಭಾಷಣಕ್ಕೆ ಒಂದು ಆತ್ಮ ಇರುತ್ತದೆ. ಉದಾಹರಣೆಗೆ ‘ಶಿಕ್ಷಣದ ಮೂಲಕ ರಾಷ್ಟ್ರನಿರ್ಮಾಣ’ ಇದು ನಿಮ್ಮ ಭಾಷಣದ ಆತ್ಮ ಆದರೆ ನೀವು ಕೊಡುವ ಉದಾಹರಣೆಗಳು, ವಿಷಯ ಮಂಡನೆ ಎಲ್ಲವೂ ಆ ಆತ್ಮದ ಸುತ್ತ ಇರುವ ಹಾಗೆ ನೋಡಿಕೊಳ್ಳಬೇಕು. ಎಲ್ಲಿಯೂ ವಿಷಯಾಂತರ ಆಗದ ಹಾಗೆ ನೋಡಿಕೊಳ್ಳಬೇಕು.

17) ಭಾಷಣದ ಉದ್ದಕ್ಕೂ ನಿಮ್ಮ ಮುಖದ ಭಾವನೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ಭಾವನೆಗಳು ನಿಮ್ಮ ಭಾಷಣದ ವಿಷಯವನ್ನು ಬಹಳ ಸುಂದರವಾಗಿ ಕ್ಯಾರಿ ಮಾಡುತ್ತವೆ. ನೀವು ಹೇಳುವ ಪ್ರತಿಯೊಂದು ಶಬ್ದ ನಿಮ್ಮ ಭಾವನೆಗಳ ವಾಹನದಲ್ಲಿ ಪ್ರೇಕ್ಷಕರಿಗೆ ತುಂಬ ಸುಲಭವಾಗಿ ತಲುಪುತ್ತವೆ.

18) ಯಾವುದೇ ಭಾಷಣಕಾರನ ಪ್ರಬಲವಾದ ಅಸ್ತ್ರವು ಆತನ ಧ್ವನಿ. ನಾಭಿಯಿಂದ ಬರುವ ಬೇಸ್ ವಾಯ್ಸ್ ಧ್ವನಿವರ್ಧಕದ ಮೂಲಕ ಬಹಳ ಅದ್ಭುತ ಇಂಪ್ಯಾಕ್ಟ್ ಉಂಟುಮಾಡುತ್ತದೆ. ಕಿರುಚುವ ಧ್ವನಿ ಯಾರಿಗೂ ಇಷ್ಟ ಆಗುವುದಿಲ್ಲ. ಅದೇ ರೀತಿ ಶ್ವಾಸಕೋಶದ ಮೂಲಕ ಹೊರಡುವ ಧ್ವನಿಯು ಉತ್ತಮ ಭಾವನೆಗಳನ್ನು ಹರಡಲು ಸಹಾಯ ಮಾಡುತ್ತದೆ.

19) ಧ್ವನಿವರ್ಧಕದ ಸರಿಯಾದ ನಿರ್ವಹಣೆ ಕಲಿಯುವುದು ಬಹಳ ಮುಖ್ಯ. ಸಾಮಾನ್ಯವಾದ ಕಂಡೀಷನ್‌ಗಳಲ್ಲಿ ನಿಮ್ಮ ತುಟಿ ಮತ್ತು ಮೈಕ್ರೋಫೋನ್ ನಡುವೆ ಒಂದು ಅಡಿಯಷ್ಟು ಅಂತರ ಇರುವುದು ಒಳ್ಳೇದು. ನೀವು ಮೈಕ್ರೋಫೋನ್ ಹಿಡಿದು ಮಾತಾಡುವಾಗ ಅದು ನಿಮ್ಮ ಭುಜಕ್ಕಿಂತ ಕೆಳಗೆ ಇರುವ ಹಾಗೆ ನೋಡಿಕೊಳ್ಳಿ. ಆಗಲೂ ಮೈಕ್ ಮತ್ತು ತುಟಿಗಳ ನಡುವೆ ಒಂದು ಅಡಿ ಅಂತರ ಇರಬೇಕು. ಮಾತಾಡಲು ಆರಂಭ ಮಾಡಿದ ನಂತರ ಮೈಕ್ ಮತ್ತೆ ಸೆಟ್ ಮಾಡಲು ಹೋಗಬೇಡಿ.
ಅದರ ಜೊತೆಗೆ ಒಳ್ಳೆಯ ಭಾಷಣಕ್ಕೆ ಒಳ್ಳೆಯ ಮಾನಿಟರ್ ಬ್ಯಾಕಪ್ ತುಂಬ ಮುಖ್ಯ. ಅಂದರೆ ನಿಮ್ಮ ಮಾತುಗಳು ನಿಮಗೆ ಸರಿಯಾಗಿ ಹಿಂದೆ ಕೇಳಿದರೆ ನೀವು ಗೆಲ್ಲುತ್ತೀರಿ.

20) ನಿಮ್ಮ ಭಾಷಣದ ಮೊದಲ ಪ್ರೇಕ್ಷಕರು ನೀವೇ ಆಗಿರುತ್ತೀರಿ. ನಿಮ್ಮ ಭಾಷಣವನ್ನು ನೀವೇ ಆನಂದಿಸದೆ ಬೇರೆ ಯಾರೂ ಇಷ್ಟ ಪಡಲು ಸಾಧ್ಯವೇ ಇಲ್ಲ. ಕೇವಲ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸುವ ಉದ್ದೇಶ ಬೇಡ.

21) ಭಾಷಣದ ಪ್ರಭಾವ ಹೆಚ್ಚು ಮಾಡಲು ಧೃಕ್ ಶ್ರವಣ ಮಾಧ್ಯಮಗಳನ್ನು(LCD, ಚಾರ್ಟ್, ಮ್ಯಾಪ್, ಪೋಸ್ಟರ್, ವಿಡಿಯೋ, ಆಡಿಯೋ) ಮೊದಲಾದವುಗಳನ್ನು ಖಂಡಿತ ಬಳಸಬಹುದು.

22) ಭಾಷಣ ಮಾಡುವಾಗ ಪ್ರೇಕ್ಷಕರ ಜತೆಗೆ ನಿಮ್ಮ ದೃಷ್ಟಿ ಸಂಪರ್ಕ(Eye Contact)ವು ಉತ್ತಮ ಭಾವನೆಯನ್ನು ಹರಡುತ್ತದೆ. ಪ್ರತಿಯೊಬ್ಬ ಪ್ರೇಕ್ಷಕನ ಜತೆ ನೀವು ದೃಷ್ಟಿ ಸಂಪರ್ಕದಲ್ಲಿ ಸಂವಹನ ಮಾಡುತ್ತ ಹೋದಾಗ ಪ್ರೇಕ್ಷಕರೂ ನಿಮ್ಮ ಹಾಗೆ ಭಾಷಣದಲ್ಲಿ ಇನ್ವಾಲ್ವ್ ಆಗಲು ಸಾಧ್ಯ ಆಗುತ್ತದೆ. ಆದರೆ ದೊಡ್ಡ ಸಭೆ ಇದ್ದಾಗ ಇದು ಕಷ್ಟಸಾಧ್ಯ.

23) ನಿಮ್ಮ ಭಾಷಣದ ಉದ್ದಕ್ಕೂ ನಿಮ್ಮ ಆಂಗಿಕ ಅಭಿನಯ (ವಿಶೇಷವಾಗಿ ನಿಮ್ಮ ಕೈಗಳು ಮತ್ತು ಭುಜ) ನಿಮ್ಮ ಭಾಷಣದ ಮೌಲ್ಯವನ್ನು ಹೆಚ್ಚಿಸುತ್ತವೆ. ಅಗಲವಾಗಿ ತೆರೆದ ಭುಜಗಳು, ನೀವು ಹೇಳಿದ್ದನ್ನು ಅಭಿವ್ಯಕ್ತ ಮಾಡುವ ಕೈಗಳು ನಿಮ್ಮ ಪ್ರಬಲ ಆಯುಧಗಳು ಆಗುತ್ತವೆ.

24) ಭಾಷಣಕಾರನಾಗಿ ವೇದಿಕೆಯಲ್ಲಿ ನಿಮ್ಮ ನಿಲುವು ಸಂತುಲಿತ ಆಗಿರಬೇಕು. ನಿಮ್ಮ ಇಡೀ ದೇಹದ ಭಾರವನ್ನು ಎದುರು ಇರುವ ಸ್ಟಾಂಡ್ ಮೇಲೆ ಹೊರಿಸಿ ನಿಲ್ಲುವುದು ಒಳ್ಳೆಯದಲ್ಲ. ಇಲ್ಲಿ ಕೂಡ ನಿಮ್ಮ ಅಗಲವಾದ ಭುಜಗಳು ನಿಮಗೆ ಬಲಿಷ್ಠವಾದ ನಿಲುವು ಒದಗಿಸುತ್ತದೆ.
ಭಾಷಣದ ಸ್ಟಾಂಡ್ ಇಲ್ಲದೆ ಇದ್ದಾಗ ನಿಮ್ಮ ಎರಡು ಕಾಲುಗಳ ಮೇಲೆ ಸಮಾನವಾದ ಭಾರವನ್ನು ಹಾಕಿ ನಿಂತು ಮಾತಾಡುವುದು ನಿಮಗೆ ಬ್ಯಾಲೆನ್ಸ್ ಕೊಡುತ್ತದೆ. ಎರಡು ಕಾಲುಗಳ ನಡುವೆ ಕನಿಷ್ಠ ಹತ್ತು ಇಂಚುಗಳ ಅಂತರವು ಇರಬೇಕು. ಹಾಗೆಯೇ ನಿಮ್ಮ ದೇಹದ ಮೇಲ್ಭಾಗ ಒಂದು ಇಂಚು ಮುಂದಕ್ಕೆ ಬಗ್ಗಿದ್ದರೆ ಪ್ರೇಕ್ಷಕರಲ್ಲಿ ಸಹಜವಾದ ಕುತೂಹಲ ಉಂಟಾಗುತ್ತದೆ ಅನ್ನುತ್ತದೆ ಮನಶ್ಶಾಸ್ತ್ರ.

25) ನಿಮ್ಮ ಭಾಷಣದ ಆರಂಭದಷ್ಟೆ ಮುಖ್ಯವಾದದ್ದು ಅದರ ಮುಕ್ತಾಯ. ವಿಮಾನದ ಟೇಕ್‌ಆಫ್‌ ಎಷ್ಟು ಮುಖ್ಯವೋ ಅದರ ಲ್ಯಾಂಡಿಂಗ್ ಅಷ್ಟೇ ಮುಖ್ಯ. ಇಲ್ಲಿ ಕೂಡ ಶ್ಲೋಕ, ಸುಭಾಷಿತ, ಘೋಷಣೆ, ಕೊಟೇಶನ್ ಮೂಲಕ ನಿಮ್ಮ ಮಾತು ಮುಗಿಸಬಹುದು. ಸಾಧ್ಯವಾದರೆ ಒಂದು ಭಾವನಾತ್ಮಕ ಟಚ್ ಕೊಟ್ಟರೆ ತುಂಬಾ ಒಳ್ಳೇದು. ಇಡೀ ಭಾಷಣದ ಸಾರಾಂಶವನ್ನು ಒಂದೆರಡು ವಾಕ್ಯಗಳಲ್ಲಿ ನೀಡಿ ಒಂದು ಸಂದೇಶ ನೀಡಿದರೆ ಇನ್ನೂ ಒಳ್ಳೆಯದು. ಮಾತು ಮುಗಿಸುವಾಗ ಪ್ರೇಕ್ಷಕರಿಗೆ ಮತ್ತು ಸಂಘಟಕರಿಗೆ ಕೃತಜ್ಞತೆ ಹೇಳುವುದು ಅಗತ್ಯ. ಅದು ನಿಮ್ಮ ಸಜ್ಜನಿಕೆಯ ಪ್ರತೀಕ ಆಗುತ್ತದೆ.

ಈ 25 ಅಂಶಗಳು ನಿಮ್ಮನ್ನು ಉತ್ತಮ ಭಾಷಣಕಾರರಾಗಿ ರೂಪಿಸುವುದು ಖಂಡಿತ. ಏನೇ ಆದರೂ ನಿಮ್ಮ ನಿರಂತರ ಪ್ರಯತ್ನವು ಇದ್ದರೆ ಮಾತ್ರ ನಿಮಗೆ ಈ ಭಾಷಣ ಕಲೆಯು ಒಲಿಯುತ್ತದೆ. ಸಾರ್ವಜನಿಕ ವೇದಿಕೆಗಳಲ್ಲಿ ನೀವು ಉತ್ತಮ ಭಾಷಣಕಾರ ಆದರೆ ಮುಂದೆ ಒಳ್ಳೆಯ ನಾಯಕ ಕೂಡ ಆಗಬಹುದು.
ಆಲ್ ದ ಬೆಸ್ಟ್. ಗೆದ್ದು ಬನ್ನಿ.





























































































error: Content is protected !!
Scroll to Top