ಬಿಜೆಪಿ-ಕಾಂಗ್ರೆಸ್ ನಡುವೆ ತೀವ್ರ ಪೋಸ್ಟರ್ ವಾರ್
ಹೊಸದಿಲ್ಲಿ : ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೋಸ್ಟರ್ ವಾರ್ ಶುರುವಾಗಿದ್ದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಹತ್ತು ತಲೆಯ ರಾವಣನಿಗೆ ಹೋಲಿಸಿ ಬಿಜೆಪಿ ಇಂದು ಬಿಡುಗಡೆ ಮಾಡಿದ ಪೋಸ್ಟರ್ ನೋಡಿದ ಬಳಿಕ ಕಾಂಗ್ರೆಸ್ ನಾಯಕರು ಕೆಂಡಾಮಂಡಲವಾಗಿದ್ದಾರೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿಯನ್ನು ಅತಿ ದೊಡ್ಡ ಸುಳ್ಳುಗಾರ ಎಂದು ಬಿಂಬಿಸುವ ಪೋಸ್ಟರನ್ನು ತಯಾರಿಸಿ ಹಂಚಿಕೊಂಡಿದೆ.
ಬಿಜೆಪಿ ಟ್ವಿಟ್ಟರ್ನಲ್ಲಿ ಹಂಚಿಕೊಂಡ ಪೋಸ್ಟರ್‌ನಲ್ಲಿ ರಾಹುಲ್ ಗಾಂಧಿಯನ್ನು ಹೊಸ ಯುಗದ ರಾವಣ ಎಂದು ಕರೆದಿದೆ. ಇದನ್ನು ಕಾಂಗ್ರೆಸ್ ಬದಲವಾಗಿ ಟೀಕಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಚಿತ್ರವನ್ನು ಹಾಕಿ ಸುಳ್ಳುಗಾರ ಎಂದು ಕರೆದಿದೆ. ಜಾರ್ಜ್ ಸೊರೊಸ್ ನಿರ್ದೇಶನದ–ಇಂಡಿಯಾ ಇನ್ ಡೇಂಜರ್–ಕಾಂಗ್ರೆಸ್ ಪಾರ್ಟಿ ಪ್ರೊಡಕ್ಷನ್ ಎಂಬ ಶೀರ್ಷಿಕೆಯ ಹ್ಯಾಂಡಲ್‌ನಲ್ಲಿ ರಾಹುಲ್ ಗಾಂಧಿಯ ಬಹುತಲೆಯ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಹಂಗೇರಿ ಮೂಲದ ಅಮೆರಿಕದ ಉದ್ಯಮಿ ಜಾರ್ಜ್ ಸೊರಸ್ ಅವರನ್ನೂ ಗುರಿಯಾಗಿಸಿದೆ. ಅವರು ದುಷ್ಟ, ಧರ್ಮ ವಿರೋಧಿ ಮತ್ತು ರಾಮ ವಿರೋಧಿ. ಭಾರತವನ್ನು ನಾಶ ಮಾಡುವುದು ಇವರ ಗುರಿಯಾಗಿದೆ ಎಂದು ಬರೆದಿದೆ.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಬಿಜೆಪಿ ವಿರುದ್ಧ ದಾಳಿ ನಡೆಸಿ ಹಿಂಸಾಚಾರವನ್ನು ಉತ್ತೇಜಿಸುವುದು ಬಿಜೆಪಿಯ ಪ್ರಯತ್ನವಾಗಿದೆ ಎಂದು ಅವರು ಟೀಕಿಸಿದ್ದಾರೆ.






























































