417 ಕೋ.ರೂ. ಬೃಹತ್ ಅಕ್ರಮ ವ್ಯವಹಾರ
ಹೊಸದಿಲ್ಲಿ : ಛತ್ತೀಸ್ಗಢದ ಮಹದೇವ್ ಬೆಟ್ಟಿಂಗ್ ಆ್ಯಪ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ರಣಬೀರ್ ಕಪೂರ್ ಸೇರಿ ಹಲವು ಸೆಲೆಬ್ರಿಟಿಗಳಿಗೆ ಜಾರಿ ನಿರ್ದೇಶನಾಲಯ ನೋಟಿಸ್ ಜಾರಿ ಮಾಡಿದ್ದು, ಶುಕ್ರವಾರ ವಿಚಾರಣೆಗೆ ಕರೆಸಿದೆ.
ಕಳೆದ ತಿಂಗಳು ಮಹದೇವ್ ಆನ್ಲೈನ್ ಬೆಟ್ಟಿಂಗ್ ಪ್ರಕರಣ ಸಂಬಂಧಪಟ್ಟಂತೆ 417 ಕೋಟಿ ರೂಪಾಯಿ ವಶಕ್ಕೆ ಪಡೆಯಲಾಗಿತ್ತು. ಈಗ ಈ ವಿಚಾರವಾಗಿ ನಟ ಬಾಲಿವುಡ್ ನಟ ರಣಬೀರ್ ಕಪೂರ್ಗೆ ಸಮನ್ಸ್ ಜಾರಿಗೊಳಿಸಲಾಗಿದೆ.ರಣಬೀರ್ ಕಪೂರ್ ಈ ಬೆಟ್ಟಿಂಗ್ ಜಾಹೀರಾತಿಗೆ ರೂಪದರ್ಶಿಯಾಗಿದ್ದರು. ಅಕ್ಟೋಬರ್ 6 ರಂದು ತನಿಖಾ ಸಂಸ್ಥೆಯ ರಾಯ್ಪುರ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಇಡಿ ರಣಬೀರ್ ಕಪೂರ್ಗೆ ಸೂಚಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಆ್ಯಪ್ನ ಅನೇಕ ಜಾಹೀರಾತುಗಳಲ್ಲಿ ರಣಬೀರ್ ಕಪೂರ್ ಅವರು ಕಾಣಿಸಿಕೊಂಡಿದ್ದು, ಈ ಸಂಬಂಧ ಅವರಿಗೆ ಸಿಕ್ಕಾಪಟ್ಟೆ ಹಣ ವರ್ಗಾವಣೆ ಆಗಿದೆ ಎಂದು ಹೇಳಲಾಗಿದೆ. ರಣಬೀರ್ ಕಪೂರ್ ನಂತರ, ಹಾಸ್ಯನಟ ಕಪಿಲ್ ಶರ್ಮಾ, ನಟಿ ಹುಮಾ ಖುರೇಷಿ ಮತ್ತು ಹಿನಾ ಖಾನ್ ಅವರಿಗೂ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗಾಗಿ ಹಾಜರಾಗುವಂತೆ ಬೇರೆ ಬೇರೆ ದಿನಾಂಕಗಳಲ್ಲಿ ಸಮನ್ಸ್ ನೀಡಲಾಗಿದೆ.
ಇತ್ತೀಚೆಗೆ ಮೂವರು ಸೆಲೆಬ್ರಿಟಿಗಳಿಗೆ ವಿವಿಧ ದಿನಾಂಕಗಳಲ್ಲಿ ರಾಯ್ಪುರ ಕಚೇರಿಗೆ ಹಾಜರಾಗುವಂತೆ ಸಮನ್ಸ್ ಕಳುಹಿಸಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಕಲಾವಿದರು ಮಹಾದೇವ್ ಆ್ಯಪ್ ಅನ್ನು ಪ್ರಚಾರ ಮಾಡಿದ್ದರು. ಕೆಲವರು ಯುಎಇಯಲ್ಲಿ ಆ್ಯಪ್ನ ಪ್ರವರ್ತಕ ಸೌರಭ್ ಚಂದ್ರಕರ್ ಅವರ ವಿವಾಹದಲ್ಲಿ ಅತಿಥಿಗಳನ್ನು ರಂಜಿಸಲು ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಪ್ರಕರಣದಲ್ಲಿ ಸುಮಾರು ಹನ್ನೆರಡು ಸೆಲೆಬ್ರಿಟಿಗಳ ವಿಚಾರಣೆ ನಡೆಯುತ್ತಿದ್ದು, ಶೀಘ್ರದಲ್ಲೇ ಅವರೆಲ್ಲರಿಗೂ ಸಮನ್ಸ್ ಕಳುಹಿಸಲಾಗುವುದು ಎಂದು ಇಡಿ ಮೂಲಗಳು ಹೇಳುತ್ತವೆ.






























































