ಡಾ.ನಾ.ಸೋಮೇಶ್ವರ ಎಂಬ ಕನ್ನಡ ನಾಡು ನುಡಿಯ ಅನನ್ಯ ಸೇವಕ
ಡಾಕ್ಟರ್ ನಾ.ಸೋಮೇಶ್ವರ ಕರ್ನಾಟಕದಲ್ಲಿ ಯಾರಿಗೆ ಗೊತ್ತಿಲ್ಲ ಹೇಳಿ? ಚಂದನ ವಾಹಿನಿಯಲ್ಲಿ ವರ್ಷಾನುಗಟ್ಟಲೆ ನಿರಂತರವಾಗಿ ಪ್ರಸಾರವಾಗುತ್ತಿರುವ ‘ಥಟ್ ಅಂತ ಹೇಳಿ’ ಜನಪ್ರಿಯ ರಸಪ್ರಶ್ನೆಗಳ ರೋಚಕ ಕಾರ್ಯಕ್ರಮವನ್ನು ಮರೆಯಲು ಸಾಧ್ಯವೇ ಇಲ್ಲ. ಆ ಕಾರ್ಯಕ್ರಮದ ಮೋಡಿಗೆ ಒಳಗಾಗದವರು ಯಾರೂ ಇಲ್ಲ ಎಂದು ಖಚಿತವಾಗಿ ಹೇಳಬಹುದು. ಅದರ ರೂವಾರಿ ಡಾಕ್ಟರ್ ನಾರಪ್ಪ ಸೋಮೇಶ್ವರ.
ಬಡತನದ ಬಾಲ್ಯ ಅವರದ್ದು
ಡಾಕ್ಟರ್ ಸೋಮೇಶ್ವರ ಹುಟ್ಟಿದ್ದು ಬೆಂಗಳೂರಿನ ಮಲ್ಲೇಶ್ವರಂನಲ್ಲಿ, 14 ಮೇ 1955ರಂದು. ಬಾಲ್ಯದಲ್ಲಿ ತೀವ್ರವಾದ ಬಡತನ, ಹಸಿವು ಅವರು ಎದುರಿಸಿದ್ದರು. ಅದಕ್ಕೆ ಅವರು ಕಂಡುಕೊಂಡ ಪರಿಹಾರ ಎರಡು. ಪತ್ರಿಕೆಗೆ ಲೇಖನಗಳನ್ನು ಮತ್ತು ಚಿತ್ರಗಳನ್ನು ಬರೆಯುವುದು ಹಾಗೂ ತನಗಿಂತ ಕಿರಿಯ ತರಗತಿಯ ವಿದ್ಯಾರ್ಥಿಗಳಿಗೆ ಟ್ಯೂಷನ್ ಕ್ಲಾಸ್ ಮಾಡಿ ಒಂದಿಷ್ಟು ಹಣ ಸಂಪಾದನೆ ಮಾಡುವುದು.

ಅವರು ಜನಪ್ರಿಯ ವೈದ್ಯರಾದರು
ಅವರು ಎಂಬಿಬಿಎಸ್ ಪದವಿ ಸಂಪಾದನೆ ಮಾಡಿದ್ದು ಪ್ರತಿಷ್ಠಿತವಾದ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ. ವೈದ್ಯರಾಗಿ ಪ್ರಾಕ್ಟೀಸ್ ಮಾಡುತ್ತಾ ಬಿಡುವಿನ ಅವಧಿಯಲ್ಲಿ ಅವರು ಕನ್ನಡದಲ್ಲಿ ಸರಣಿ ವೈದ್ಯಕೀಯ ಲೇಖನಗಳನ್ನು ಬರೆಯಲು ಆರಂಭಿಸಿದರು.
‘ಜೀವ ನಾಡಿ’ ಎಂಬ ವೈದ್ಯಕೀಯ ವಿಜ್ಞಾನದ ಜನಪ್ರಿಯವಾದ ಮಾಸ ಪತ್ರಿಕೆಯನ್ನು ಪ್ರಧಾನ ಸಂಪಾದಕರಾಗಿ ಮುನ್ನಡೆಸಿದರು. ವೈದ್ಯಕೀಯ ವಿಜ್ಞಾನದ ಜ್ಞಾನವನ್ನು ಜನಸಾಮಾನ್ಯರ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಅವಿರತವಾದ ಪ್ರಯತ್ನ ಅವರದ್ದು. ಕನ್ನಡದಲ್ಲಿ ವೈದ್ಯಕೀಯ ವಿಜ್ಞಾನದ 50 ಪುಸ್ತಕಗಳನ್ನು ಅವರು ಈಗಾಗಲೇ ಬರೆದಿದ್ದಾರೆ. ಇನ್ನೂ ಹಲವು ಪುಸ್ತಕಗಳು ಪ್ರಕಾಶನದ ಹಂತದಲ್ಲಿವೆ. ಅವರ ಸಾವಿರಾರು ಬಿಡಿ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೈದ್ಯಕೀಯ ವಿಷಯಗಳ ಬಗ್ಗೆ 1200 ಟಿವಿ ಕಾರ್ಯಕ್ರಮಗಳನ್ನು ಅವರು ನೀಡಿದ್ದಾರೆ. ಅಸಂಖ್ಯವಾದ ರೇಡಿಯೊ ಕಾರ್ಯಕ್ರಮ ನೀಡಿದ್ದಾರೆ.
ಅವರಿಗೆ ಒಲಿದಿದೆ ಡಾಕ್ಟರ್ ಬಿ.ಸಿ.ರಾಯ್ ಪ್ರಶಸ್ತಿ

ಅವರಿಗೆ ಅತ್ಯುತ್ತಮ ವೈದ್ಯರಿಗೆ ನೀಡಲ್ಪಡುವ ಡಾಕ್ಟರ್ ಬಿ.ಸಿ.ರಾಯ್ ಪ್ರಶಸ್ತಿ ದೊರೆತಿದೆ. ಎರಡು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡ ಅವರಿಗೆ ದೊರೆತಿದೆ. ಕರ್ನಾಟಕದ ಅತ್ಯುತ್ತಮ ವಿಜ್ಞಾನ ಲೇಖಕ ಪ್ರಶಸ್ತಿ ಅವರು ನಿರಂತರವಾಗಿ ಪಡೆಯುತ್ತಿದ್ದಾರೆ. ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ.
‘ಏಳು ಸುತ್ತಿನ ಕೋಟೆಯಲ್ಲಿ ಎಂಟು ಕೋಟಿ ಬಂಟರು’ ಮತ್ತು ‘ಜ್ಞಾನೇಂದ್ರಿಯಗಳು ಮತ್ತು ನಮ್ಮ ಒಡಲಿನ ವಿಸರ್ಜನಾ ಅಂಗಗಳು’ ಅವರ ಅತ್ಯಂತ ಜನಪ್ರಿಯ ಪುಸ್ತಕಗಳು. ವಿಜ್ಞಾನ ಮತ್ತು ವೈದ್ಯಕೀಯ ವಿಜ್ಞಾನವನ್ನು ಕರ್ನಾಟಕದಲ್ಲಿ ಜನಪ್ರಿಯಗೊಳಿಸಿದ ಕೀರ್ತಿ ಖಂಡಿತವಾಗಿಯೂ ಡಾಕ್ಟರ್ ನಾ. ಸೋಮೇಶ್ವರ ಅವರಿಗೆ ದೊರೆಯಬೇಕು.
ಥಟ್ ಅಂತ ಹೇಳಿ-ಅವರದ್ದೇ ಮಾನಸ ಶಿಶು

ಇನ್ನು ಅವರ ಟ್ರೆಂಡ್ ಸೆಟ್ಟರ್ ಟಿವಿ ಕಾರ್ಯಕ್ರಮ ‘ಥಟ್ ಆಂತ ಹೇಳಿ’ ಬಗ್ಗೆ ನಾನು ಬರೆಯಲೇಬೇಕು. ಚಂದನ ವಾಹಿನಿಯಲ್ಲಿ ರಾತ್ರಿ 9.30ಕ್ಕೆ ಪ್ರಸಾರವಾಗುವ ಈ ಕ್ವಿಜ್ ಕಾರ್ಯಕ್ರಮ 2002 ಜನವರಿ 4ರಂದು ಆರಂಭವಾಯಿತು. ಅಂದಿನಿಂದ ನಿರಂತರವಾಗಿ ವಾರಕ್ಕೆ ಐದು ದಿನ (ಸೋಮವಾರದಿಂದ ಶುಕ್ರವಾರದವರೆಗೆ) ಪ್ರಸಾರವಾಗುವ ಕಾರ್ಯಕ್ರಮ ಇದು. ಪ್ರತಿ ದಿನ ಮೂರು ಜನ ಒಂದೇ ವಯಸ್ಸಿನ ಸ್ಪರ್ಧಿಗಳು ಭಾಗವಹಿಸುತ್ತಾರೆ. ಅವರನ್ನು ರಾಜ್ಯದ ಮೂಲೆ ಮೂಲೆಗಳಿಂದ ಆಯ್ಕೆ ಮಾಡಲಾಗುತ್ತದೆ. ಶಿಕ್ಷಣ, ಸಂಸ್ಕೃತಿ, ವಿಜ್ಞಾನ, ಒಗಟು, ಪದಬಂಧ, ತಂತ್ರಜ್ಞಾನ, ನಾಡು ನುಡಿ, ಕನ್ನಡ ಸಾಹಿತ್ಯ ಮೊದಲಾದ ಹತ್ತು ಕ್ಷೇತ್ರಗಳ ಪ್ರಶ್ನೆಗಳು ಇರುತ್ತವೆ. ಆಡಿಯೋ ಮತ್ತು ವೀಡಿಯೋ ಸುತ್ತುಗಳು ಇರುತ್ತವೆ. ಸರಿ ಉತ್ತರ ಕೊಟ್ಟವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ಉತ್ತಮ ಪುಸ್ತಕಗಳನ್ನು ಬಹುಮಾನವಾಗಿ ನೀಡುವುದು ಈ ಕ್ವಿಜ್ ಕಾರ್ಯಕ್ರಮದ ವೈಶಿಷ್ಟ್ಯ. ಕ್ವಿಜ್ ಮಾಸ್ಟರ್ ಆಗಿ ಡಾಕ್ಟರ್ ನಾ. ಸೋಮೇಶ್ವರ ಅವರ ನಿರೂಪಣೆಯೇ ಈ ಕಾರ್ಯಕ್ರಮದ ಜೀವಾಳ. ಆರಂಭದಲ್ಲಿ ಸಿಂಡಿಕೇಟ್ ಬ್ಯಾಂಕ್ ಈ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿತ್ತು. ನಂತರ ಯಾವುದೇ ಪ್ರಾಯೋಜಕರು ಇಲ್ಲದೆ ಕೂಡ ಈ ಜನಪ್ರಿಯ ಕಾರ್ಯಕ್ರಮವು ಚಂದನ ವಾಹಿನಿಯಲ್ಲಿ ನಿರಂತರ ಪ್ರಸಾರವಾಗುತ್ತಿದೆ.
2012ರಲ್ಲಿ 1756 ಎಪಿಸೋಡ್ ಪೂರ್ತಿ ಮಾಡುವ ಮೂಲಕ ಈ ಕ್ವಿಜ್ ಶೋ ಲಿಮ್ಕಾ ದಾಖಲೆಯ ಪುಸ್ತಕದಲ್ಲಿ ಸ್ಥಾನ ಪಡೆಯಿತು. ಭಾರತದಲ್ಲಿ ಅದುವರೆಗೆ ಯಾವ ಟಿವಿ ಕ್ವಿಜ್ ಕಾರ್ಯಕ್ರಮ ಇಷ್ಟೊಂದು ದೀರ್ಘ ಅವಧಿಗೆ ನಡೆದಿಲ್ಲ ಎನ್ನುವುದು ಆ ಕಾರ್ಯಕ್ರಮ ಮತ್ತು ಸೋಮೇಶ್ವರ ಅವರ ಹಿರಿಮೆ.
ದಾಖಲೆ ದಾಖಲೆ ಮತ್ತು ದಾಖಲೆ
‘ಥಟ್ ಆಂತ ಹೇಳಿ’ ಟಿವಿ ಕ್ವಿಜ್ ಕಾರ್ಯಕ್ರಮ 2023 ಜುಲೈ ತಿಂಗಳ ಹೊತ್ತಿಗೆ 4446 ಯಶಸ್ವಿ ಕಂತುಗಳನ್ನು ಪೂರೈಸಿ ಮುನ್ನಡೆದಿದೆ. ಭಾಗವಹಿಸಿದ ಸ್ಪರ್ಧಿಗಳ ಸಂಖ್ಯೆಯು 15,000ಕ್ಕಿಂತ ಹೆಚ್ಚು. ಕೇಳಿದ ಪ್ರಶ್ನೆಗಳ ಸಂಖ್ಯೆಯೇ 50,000ಕ್ಕಿಂತ ಅಧಿಕ. ಒಂದು ಪ್ರಶ್ನೆ ಕೂಡ ಇದುವರೆಗೂ ರಿಪೀಟ್ ಆಗಿಲ್ಲ ಅನ್ನೋದು ಗ್ರೇಟ್. ಬಹುಮಾನವಾಗಿ ನೀಡಿದ ಪುಸ್ತಕಗಳ ಸಂಖ್ಯೆಯೇ ಅಂದಾಜು 60,000. ಯಾರನ್ನೂ ಅಪಮಾನ ಮಾಡದೆ ಧೈರ್ಯ ತುಂಬುವ ಅವರ ಶೈಲಿ ನಿಜಕ್ಕೂ ಅದ್ಭುತವೇ ಆಗಿದೆ. ಉತ್ತರ ನೀಡಿದ ನಂತರ ಸೋಮೇಶ್ವರ ಅವರು ನೀಡುವ ಪೂರಕ ಮಾಹಿತಿಗಳು ಕೂಡ ಅದ್ಭುತವೇ ಆಗಿರುತ್ತವೆ. ಎಲ್ಲ ವಿಧವಾಗಿ ಕೂಡ ಈ ಕಾರ್ಯಕ್ರಮ ಮುರಿಯಲಾಗದ ದಾಖಲೆಯೇ ಆಗಿದೆ.
ಭರತ ವಾಕ್ಯ
ಡಾಕ್ಟರ್ ನಾ.ಸೋಮೇಶ್ವರ ಅವರು ಕನ್ನಡದ ನಾಡು ನುಡಿಯ ಅಭಿವೃದ್ಧಿಗೆ ಅತ್ಯಂತ ನಿರ್ಣಾಯಕ ಕೊಡುಗೆಯನ್ನು ನೀಡುತ್ತಿದ್ದಾರೆ. ಯಾರೂ ಮುರಿಯಲಾಗದ ದಾಖಲೆ ಆ ಕಾರ್ಯಕ್ರಮದ್ದು. ಅವರಿಗೆ ನಮ್ಮ ಪ್ರಣಾಮಗಳು.
































































