ದೆಹಲಿ : ಚೀನಾ ಪರ ಪ್ರಚಾರಕ್ಕೆ ಹಣ ಪಡೆದ ಆರೋಪದ ಹಿನ್ನೆಲೆ ಸುದ್ದಿ ವೆಬ್ಸೈಟ್ ನ್ಯೂಸ್ಕ್ಲಿಕ್ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥರನ್ನು ದೆಹಲಿ ಪೊಲೀಸರು ಬಂಧನ ಮಾಡಿದ್ದಾರೆ. ಭಯೋತ್ಪಾದನಾ ವಿರೋಧಿ ಕಾನೂನೂ, ಕಾನೂನು ಬಾಹಿರ ಚಟುವಟಿಕೆ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ.
ನ್ಯೂಸ್ ಪೋರ್ಟಲ್ನ ಎಚ್ಆರ್ ಹೆಡ್ ಅಮಿತ್ ಚಕ್ರವರ್ತಿ ಎಂಬುವರನ್ನು ಸಹ ಬಂಧನ ಮಾಡಲಾಗಿದೆ. ಇದಕ್ಕೂ ಮುನ್ನ ಮಂಗಳವಾರ ನ್ಯೂಸ್ಕ್ಲಿಕ್ ವೆಬ್ಸೈಟ್ಗೆ ಸಂಬಂಧಿಸಿದ ಹಲವು ಪತ್ರಕರ್ತರ ಮನೆ, ಕಚೇರಿ ಮೇಲೆ ದೆಹಲಿ ಪೊಲೀಸರು ದಾಳಿ ಮಾಡಿ ಕೆಲವರನ್ನು ಬಂಧಿಸಲಾಯಿತು. ಕಾನೂನುಬಾಹಿರ ಚಟುವಟಿಕೆ ತಡೆ ಕಾನೂನು (ಯುಎಪಿಎ) ಅನ್ವಯ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಸುದ್ದಿ ಪೋರ್ಟಲ್ ಚೀನಾ ಪರ ಪ್ರಚಾರ ನಡೆಸಲು ಹಣವನ್ನು ಪಡೆದಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಆರೋಪಿಸಿದ ಬೆನ್ನಲ್ಲೇ ಆ. 17ರಂದು ದೆಹಲಿ ಪೊಲೀಸರು ಭಯೋತ್ಪಾದನೆ-ತಡೆ ಕಾನೂನಿನಡಿ ಪ್ರಕರಣವನ್ನು ದಾಖಲಿಸಿದ್ದರು.

ತಮ್ಮ ಲ್ಯಾಪ್ಟಾಪ್ ಮತ್ತು ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಕೆಲವು ಪತ್ರಕರ್ತರು ಟ್ವೀಟ್ ಮಾಡಿದ್ದಾರೆ. ದೆಹಲಿ ರಾಷ್ಟ್ರ ರಾಜಧಾನಿ ವಲಯದಾದ್ಯಂತ (ಎನ್ಸಿಆರ್) ಸುಮಾರು 30 ಸ್ಥಳಗಳಲ್ಲಿ ದೆಹಲಿ ಪೊಲೀಸರ ವಿಶೇಷ ಘಟಕದ ಅಧಿಕಾರಿಗಳು ದಾಳಿ ನಡೆಸಿದರು. ಕೆಲವು ಪತ್ರಕರ್ತರನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗಳಿಗೆ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಯಾರೇ ತಪ್ಪು ಮಾಡಿದರೂ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಕೇಂದ್ರ ವಾರ್ತಾ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ನಾನು ಸಮರ್ಥನೆ ಮಾಡಿಕೊಳ್ಳುವ ಅಗತ್ಯವೇನೂ ಇಲ್ಲ. ಯಾರೇ ತಪ್ಪು ಮಾಡಿದರೂ ಸೂಕ್ತ ಮಾರ್ಗಸೂಚಿಗಳನ್ವಯ ಕ್ರಮಕೈಗೊಳ್ಳಲು ತನಿಖಾ ಸಂಸ್ಥೆಗಳು ಸ್ವತಂತ್ರವಾಗಿವೆ ಎಂದಿದ್ದಾರೆ.
ಪತ್ರಕರ್ತರ ಮೇಲಿನ ಪೊಲೀಸ್ ದಾಳಿಯನ್ನು ಭಾರತೀಯ ಪ್ರೆಸ್ ಕ್ಲಬ್ (ಪಿಸಿಐ) ಖಂಡಿಸಿದೆ. ನ್ಯೂಸ್ಕ್ಲಿಕ್ಗೆ ಸಂಬಂಧಿಸಿದ ಪತ್ರಕರ್ತರು ಮತ್ತು ಲೇಖಕರ ಮನೆಗಳ ಮೇಲೆ ನಡೆದ ದಾಳಿಗಳ ಬಗ್ಗೆ ಪ್ರೆಸ್ ಕ್ಲಬ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಡಿಫೆಂಡ್ ಮೀಡಿಯಾಫ್ರೀಡಂ ಎಂಬ ಹ್ಯಾಶ್ಟ್ಯಾಗ್ನೊಂದಿಗೆ ಅದು ದಾಳಿಯನ್ನು ಕಟುವಾಗಿ ಖಂಡಿಸಿದೆ. ಪತ್ರಕರ್ತರಿಗೆ ಸೌಹಾರ್ದತೆ ಸೂಚಿಸಿರುವ ಪಿಸಿಐ, ಈ ವಿಚಾರದಲ್ಲಿ ವಿವರಣೆ ನೀಡುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿದೆ






























































