ಅದು ಒಳಿತು ಇದು ಕೆಟ್ಟದೆಂಬ ಹಠ ನಿನಗೇಕೆ?|
ಹೊದಿಸಿಹುದು ದೈವವೆಲ್ಲಕಮೊಂದು ತೆರೆಯ||
ಸೊದೆಯ ಸೌರಭ ನಂಜು ಬಟ್ಟಲಲಿ ತೋರೀತು|
ವಿಧಿಯ ಬಗೆಯೆಂತಿಹುದೊ –ಮಂಕುತಿಮ್ಮ||
ಇದು ಒಳ್ಳೆಯದು ಇನ್ನೊಂದು ಕೆಟ್ಟದ್ದು ಎಂದು ನಿರ್ಣಯ ಮಾಡುವ ಹಠ ಒಳ್ಳೆಯದಲ್ಲ. ಪ್ರತಿಯೊಂದರ ನಿಜಸ್ವರೂಪವನ್ನು ದೈವ ಒಂದು ತೆರೆಯ ಹಿಂದೆ ಅಡಗಿಸಿ ಇಟ್ಟಿರುತ್ತದೆ. ವಿಷದ ಬಟ್ಟಲಿನಲ್ಲಿಯೇ ಅಮೃತದ ಪರಿಮಳ ಹೊರಹೊಮ್ಮಬಹುದು. ವಿಧಿಯ ಕಾರ್ಯವೈಖರಿಯ ರೀತಿಯನ್ನು ಅರಿಯುವುದು ಅಷ್ಟು ಸುಲಭವಲ್ಲ ಎನ್ನುವುದನ್ನು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ.

ನಾವು ಒಂದು ವಸ್ತು, ವಿಷಯ, ವ್ಯಕ್ತಿ ಹಾಗೂ ಘಟನೆಗಳ ಬಗ್ಗೆ ಇದು ಒಳ್ಳೆಯದು ಅದು ಕೆಟ್ಟದ್ದು ಎನ್ನುವ ನಿರ್ಣಯವನ್ನು ತಕ್ಷಣ ಕೊಟ್ಟು ಬಿಡುತ್ತೇವೆ. ಆದರೆ ಅದು ಅನೇಕ ಸಂದರ್ಭಗಳಲ್ಲಿ ತಪ್ಪಾಗಿ ಆಮೇಲೆ ಪಶ್ಚಾತ್ತಾಪ ಪಡುವುದುಂಟು. ‘ನಿಧಾನಿಸಿ ನೋಡಿದಾಗ ನಿಜವು ತಿಳಿಯುವುದು’ ಎಂಬಂತೆ ಸಮಾಧಾನದಿಂದ ಯೋಚಿಸಿ ನಿರ್ಧಾರಕ್ಕೆ ಬರಬೇಕೆ ಹೊರತು ಆತುರದಿಂದ ಹೇಳಿ ಕೊನೆಗೆ ನಾನು ಹೇಳಿದ್ದೇ ಸರಿ ಎನ್ನುವ ಹಠಕ್ಕೆ ಬೀಳಬಾರದು. ತಕ್ಷಣ ಒಳ್ಳೆಯದು; ಒಳ್ಳೆಯವರೆಂದು ನಂಬಿ ಮೋಸ ಹೋದವರು ಈ ಜಗತ್ತಿನಲ್ಲಿ ಸಾಕಷ್ಟು ಜನರಿದ್ದಾರೆ. ಪ್ರತಿಯೊಂದಕ್ಕೂ ವಿಧಿಯ ಒಂದು ತೆರೆ ಮುಸುಕಿರುತ್ತದೆ. ಆ ತೆರೆ ಸರಿದಾಗಲೇ ವಾಸ್ತವ ಬಯಲಾಗುವುದು. ಈ ಮಾಯೆಯ ಮುಸುಕು ಅನೇಕ ಸಂದರ್ಭಗಳಲ್ಲಿ ನಮ್ಮನ್ನು ಮರಳು ಮಾಡುತ್ತದೆ. ಆದ್ದರಿಂದ ನಾವು ಸದಾ ಎಚ್ಚರಿಕೆಯದ ಇರಬೇಕು. ದುಡುಕಿ ಯಾವ ನಿರ್ಧಾರಕ್ಕೂ ಬರಬಾರದು.

ಯಾವ ಲೋಕದಿ ಕೂಡ ಕನಕಮೃಗವಿರದೆಂದು|
ಭಾವಜ್ಞ ರಾಮನೇನರಿಯದಾದ||
ದೈವಾಂಶಗುಂ ಕೂಡ ತಿಳಿವು ಮರೆಯಾಗುವುದು|
ದೈವೀಕವಲ್ಲವೇಂ- ಬೋಳುಬಸವ||
ಅಂದರೆ ಚಿನ್ನದ ಜಿಂಕೆ ಯಾವ ಲೋಕದಲ್ಲಿಯೂ ಇರಲು ಸಾಧ್ಯವಿಲ್ಲ ಎನ್ನುವುದನ್ನು ದೈವಾಂಶ ಸಂಭೂತನಾದ ರಾಮನಿಗೆ ಅರಿಯಲಾಗಲಿಲ್ಲವೆಂದಾದರೆ ಸಾಮಾನ್ಯದವರ ಗತಿಯೇನು? ನಮ್ಮ ಅರಿವು ಮತ್ತು ನಿರ್ಣಯವನ್ನು ಮೀರುವ ಶಕ್ತಿ ಜಗತ್ತನ್ನು ಮುನ್ನಡೆಸುತ್ತಿರುವುದು. ವಿಷದ ಬಟ್ಟನಲ್ಲಿಯೇ ಅಮೃತದ ಸ್ವಾದವನ್ನು ಕಾಣಹುದು. ಇಂದು ನಾವು ಕೆಟ್ಟದ್ದು ಎಂದಿದ್ದು ನಾಳೆ ಒಳಿತಾಗಬಹುದು. ಬದುಕಿನಲ್ಲಿ ಎಲ್ಲವೂ ನನ್ನದೇ ಸರಿ ಎನ್ನುವ ಹಠಕ್ಕೆ ಬೀಳದೆ ಈ ಸೃಷ್ಟಿಯು ಮುನ್ನಡೆಯುವುದು ಆ ವಿಧಿಯ ನಿಯಮದಂತೆ ಎನ್ನುವ ವಾಸ್ತವವನ್ನು ಅರಿತು ನಡೆದಾಗಲೇ ಜೀವನ ಸಾರ್ಥಕವಾಗುವುದಲ್ಲವೆ?



























