ಗೆದ್ದು ಮಾನ ಉಳಿಸಿಕೊಳ್ಳಲು ಕಾಂಗರೂ ಟೀಮ್ ಪ್ಲಾನ್
ರಾಜ್‌ಕೋಟ್ : ಭಾರತ ಹಾಗೂ ಆಸ್ಟ್ರೇಲಿಯ ನಡುವಣ ಅಂತಿಮ ಮೂರನೇ ಏಕದಿನ ಪಂದ್ಯ ಇಂದು ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯಲಿದೆ. ಆಸ್ಟ್ರೇಲಿಯ ವಿರುದ್ಧದ ಏಕದಿನ ಸರಣಿಯನ್ನು ಭಾರತ ಈಗಾಗಲೇ 2-0 ಅಂತರದಿಂದ ವಶಪಡಿಸಿಕೊಂಡಿದೆ. ಹೀಗಿದ್ದರೂ ಟೀಮ್ ಇಂಡಿಯಾಕ್ಕಿದು ಔಪಚಾರಿಕ ಪಂದ್ಯವಲ್ಲ. ಐಸಿಸಿ ಏಕದಿನ ವಿಶ್ವಕಪ್ ದೃಷ್ಟಿಯಿಂದ ಭಾರತಕ್ಕೆ ಇದು ಮಹತ್ವದ ಪಂದ್ಯವಾಗಿದೆ. ಅಲ್ಲದೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ತಂಡಕ್ಕೆ ಮರಳಿದ್ದು, ಗೆದ್ದು ಪ್ರತಿಷ್ಠೆ ಉಳಿಸಬೇಕಿದೆ. ಅತ್ತ ಕಾಂಗರೂ ಪಡೆ ಮಾನ ಉಳಿಸಿಕೊಳ್ಳಲು ಕೊನೇ ಪಂದ್ಯ ಗೆಲ್ಲುವ ಪ್ಲಾನ್ನಲ್ಲಿದೆ.
ಭಾರತ ತಂಡ ಬ್ಯಾಟಿಂಗ್- ಬೌಲಿಂಗ್ನಲ್ಲಿ ಭರ್ಜರಿ ಫಾರ್ಮ್ನಲ್ಲಿದೆ. ಶುಭ್ಮನ್ ಗಿಲ್ಗೆ ವಿಶ್ರಾಂತಿ ನೀಡಿರುವ ಪರಿಣಾಮ ನಾಯಕ ರೋಹಿತ್ ಶರ್ಮಾ ಜತೆ ಇಶಾನ್ ಕಿಶನ್ ಕಣಕ್ಕಿಳಿಯಲಿದ್ದಾರೆ. ಶ್ರೇಯಸ್ ಅಯ್ಯರ್ ಮೂರನೇ ಕ್ರಮಾಂಕವನ್ನು ವಿರಾಟ್ ಕೊಹ್ಲಿಗೆ ಬಿಟ್ಟುಕೊಡಬೇಕು. ಹಾರ್ದಿಕ್ ಪಾಂಡ್ಯ ತಂಡ ಸೇರಿರುವ ಕಾರಣ ಸೂರ್ಯಕುಮಾರ್ ಯಾದವ್ ಪ್ಲೇಯಿಂಗ್ ಇಲೆವೆನ್ನಿಂದ ಹೊರಬೀಳಬಹುದು. ಶಾರ್ದೂಲ್ ಠಾಕೂರ್ಗೆ ವಿಶ್ರಾಂತಿ ನೀಡಲಾಗಿದೆ. ಕುಲ್ದೀಪ್ ಯಾದವ್ ಇವರ ಜಾಗಕ್ಕೆ ಬರುವ ಸಂಭವವಿದೆ.
ರಾಜ್‌ಕೋಟ್‌ನಲ್ಲಿ ಮಳೆ ಕಾಟ ಇಲ್ಲದಿರುವುದರಿಂದ ಪಂದ್ಯ ನಿರಾಂತಕವಾಗಿ ಸಾಗುವ ಸಾಧ್ಯತೆಯಿದೆ.