ಬೆಂಗಳೂರು ಬಂದ್‌ ಶುರು : ಬೆಳಗ್ಗೆಯೇ ತೀವ್ರ ಪ್ರತಿಭಟನೆ

ಕಾವೇರಿ ನೀರಿಗಾಗಿ ರಸ್ತೆಗಿಳಿದ ಜನ; ಹೋರಾಟ ಹತ್ತಿಕ್ಕಲು ಸರಕಾರ ಯತ್ನ ಆರೋಪ

ಬೆಂಗಳೂರು : ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ಕರೆಕೊಟ್ಟ ಬೆಂಗಳೂರು ಬಂದ್‌ ಬಿಸಿ ಮುಂಜಾನೆಯೇ ಜನರಿಗೆ ತಟ್ಟಿದೆ. ಎಲ್ಲೆಡೆ ಪ್ರತಿಭಟನೆ ಭುಗಿಲೆದ್ದಿದ್ದು, ಜನರು ಆಕ್ರೋಶದಿಂದ ರಸ್ತೆಗಿಳಿದಿದ್ದಾರೆ.
ಸೆ.29ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಇದಕ್ಕೂ ಮುನ್ನ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಇಂದು ಬೆಂಗಳೂರು ಬಂದ್ ನಡೆಯುತ್ತಿದೆ. ಈ ಬಂದ್‌ಗೆ 100ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿವೆ. ಪ್ರತಿಪಕ್ಷಗಳೆಲ್ಲ ಬಂದ್‌ಗೆ ಬೆಂಬಲ ಸೂಚಿಸಿರುವುದರಿಂದ ಪ್ರತಿಭಟನೆಯ ಕಾವು ಜೋರಾಗಿದೆ. ಬೆಳಗ್ಗೆ 6 ಗಂಟೆಯಿಂದಲೇ ಬೆಂಗಳೂರು ಬಂದ್ ಆಚರಿಸಲಾಗುತ್ತಿದ್ದು, ಸಂಜೆ 6 ಗಂಟೆಯವರೆಗೂ ಮುಂದುವರಿಯಲಿದೆ.
ಕನ್ನಡಿಗರ ರಕ್ಷಣಾ ವೇದಿಕೆ ಕಾರ್ಯಕರ್ತರು ತೆರೆದ ವಾಹನದಲ್ಲಿ ಟೌನ್​​ಹಾಲ್​ನತ್ತ ರ್ಯಾಲಿ ಹೊರಟಿದ್ದಾರೆ. ಕನ್ನಡ ಪ್ರಕಾಶ್ ನೇತೃತ್ವದಲ್ಲಿ ರ್ಯಾಲಿ ನಡೆಯುತ್ತಿದೆ. ಬೆಂಗಳೂರು ಬಂದ್ ಎಫೆಕ್ಟ್ ರೋಗಿಗಳಿಗೂ ತಟ್ಟಿದೆ. ಶಿವಮೊಗ್ಗದ ಮಾನಸ ಆಸ್ಪತ್ರೆಗೆ ಹೋಗಲು ಆಂಧ್ರ ಪ್ರದೇಶದಿಂದ ಮೆಜೆಸ್ಟಿಕ್​ಗೆ ಪ್ರಯಾಣಿಕರು ಬಂದಿದ್ದಾರೆ. ಇಲ್ಲಿಂದ ಚಿಕಿತ್ಸೆಗಾಗಿ ಶಿವಮೊಗ್ಗ ಹೋಗಲು ಬಸ್ ಬಿಡುತ್ತಿಲ್ಲ. ಹೀಗಾಗಿ ರೋಗಿಗಳು ಪರದಾಡುತ್ತಿದ್ದಾರೆ.
ಪ್ರತಿಭಟನೆಗೆ ಮುಂದಾಗಿದ್ದ ಕುರುಬೂರು ಶಾಂತಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೈಸೂರು ಬ್ಯಾಂಕ್ ಸರ್ಕಲ್​ನಲ್ಲಿ ರೈತ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಸುಮಾರು 20ಕ್ಕೂ ಹೆಚ್ಚು ರೈತರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಪೊಲೀಸರು ಕುರುಬೂರು ಶಾಂತಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದರು.
ಬಂದ್ ದಿಕ್ಕು ತಪ್ಪಿಸುವ ಕೆಲಸವಾಗಬಾರದು. ಪೋಲಿಸರು ಪ್ರತಿಭಟನೆ ಮಾಡುವವರಿಗೆ ತಡೆಯೊಡ್ಡುತ್ತಿದ್ದಾರೆ ಎಂದು ಗೊತ್ತಾಗಿದೆ. 144 ಸೆಕ್ಷನ್ ಹಾಕಬಾರದಿತ್ತು. ನಮ್ಮ ಹೋರಾಟ, ಚಳವಳಿ ಇರಲಿದೆ. ಈಗ ಟೌನ್‌ಹಾಲ್‌ಗೆ ಹೋಗುತ್ತಿದ್ದೇವೆ. ಇಲ್ಲಿ ಏನೇ ನಡೆದರೂ ಇಡೀ ರಾಜ್ಯಕ್ಕೆ ಸಂದೇಶ ಹೋಗುತ್ತದೆ. ಪೋಲಿಸರು ಎಚ್ಚರಿಕೆಯಿಂದ ಇರಬೇಕು ಎಂದು ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ. ಕರ್ನಾಟಕ ಸರ್ಕಾರ ನೀರಗಂಟಿ ಸರ್ಕಾರ. ನಮ್ಮ ಸರ್ಕಾರ ತಮಿಳುನಾಡಿಗೆ ನೀರು ಹರಿಸಿ ನೀರುಗಂಟಿ ಕೆಲಸ ಮಾಡುತ್ತಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆರೋಪಿಸಿದ್ದಾರೆ.
ಈ ನಡುವೆ ಕಾವೇರಿ ನೀರಿಗಾಗಿ ನಡೆಯುತ್ತಿರುವ ಬೆಂಗಳೂರು ಬಂದ್​ಗೆ ನನ್ನ ಪೂರ್ಣ ಬೆಂಬಲವಿದೆ. ಹೋರಾಟ ಶಾಂತಿಯುತವಾಗಿರಲಿ, ಬಂದ್ ಯಶಸ್ವಿ ಆಗಲಿ. ಜೆಡಿಎಸ್​ ಪಕ್ಷದ ಕಾರ್ಯಕರ್ತರು ಕೂಡ ಬಂದ್​ನಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಟ್ವೀಟ್​ ಮಾಡಿದ್ದಾರೆ.
ಬೆಳಗ್ಗೆ 9 ಗಂಟೆ ನಂತರ ಕೆಆರ್​ ಮಾರುಕಟ್ಟೆಯಲ್ಲಿ ಅಂಗಡಿಗಳು ಬಂದ್​ ಆಗಿವೆ. ಬೆಂಗಳೂರಿನ ಮೈಸೂರು ಬ್ಯಾಂಕ್​ ಸರ್ಕಲ್​​ನಲ್ಲಿ ಇಂದು ಧರಣಿ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. 2 ಕೆಎಸ್ಆರ್‌ಪಿ, 1 ವಾಟರ್ ಜೆಟ್ ಹಾಗೂ 10ಕ್ಕೂ ಹೆಚ್ಚು ಬಸ್​ಗಳನ್ನು ನಿಯೋಜಿಸಲಾಗಿದೆ. ಟೌನ್​ಹಾಲ್​ನಿಂದ ಫ್ರೀಡಂ ಪಾರ್ಕ್​​ನತ್ತ ಬರುವ ರ್ಯಾಲಿಯನ್ನು ಮಾರ್ಗ ಮಧ್ಯದಲ್ಲಿಯೇ ತಡೆಯಲು ಪೊಲೀಸರು ವ್ಯವಸ್ಥೆ ಮಾಡಿದ್ದಾರೆ.
ಬೆಂಗಳೂರು ಬಂದ್​ಗೆ ಬಿಎಂಆರ್​ಸಿಎಲ್​ ನೈತಿಕ ಬೆಂಬಲ ಸೂಚಿಸಿದೆ. ಬಂದ್ ನಡುವೆಯೂ ನಮ್ಮ ಮೇಟ್ರೋ ಎಂದಿನಂತೆ ಇರಲಿದೆ. ಬೆಳ್ಗೆಯಿಂದಲೇ ನಮ್ಮ ಮೇಟ್ರೊ ಓಡಾಟ ಆರಂಭವಾಗಿದೆ.
ರಾಮನಗರದ ಐಜೂರು ಸರ್ಕಲ್ ಬಳಿ ಜಯ ಕರ್ನಾಟಕ ಸಂಘಟನೆ ಧರಣಿ ಮಾಡುತ್ತಿದೆ. ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಬಂದ್​ ಕರೆ ಹಿನ್ನೆಲೆಯಲ್ಲಿ ಫ್ರೀಡಂ ಪಾರ್ಕ್​ನಲ್ಲಿ ಮಾತ್ರ ಪ್ರತಿಭಟನೆ ನಡೆಸಲು ಅವಕಾಶ ನೀಡಲಾಗಿದೆ. ಫ್ರೀಡಂ ಪಾರ್ಕ್ ಹೊರತುಪಡಿಸಿ ಬೇರೆ ಕಡೆ ಧರಣಿಗೆ ಅವಕಾಶವಿಲ್ಲ. ನಗರದ ವಿವಿಧೆಡೆ ಪ್ರತಿಭಟನೆ ನಡೆಸಲು ಮುಂದಾದರೆ ವಶಪಡಿಸಿಕೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ.
ಬಂದ್​ಗೆ ಪೆಟ್ರೋಲ್​ ಬಂಕ್​​​ ಒಕ್ಕೂಟ ನೈತಿಕ ಬೆಂಬಲ ಸೂಚಿಸಿದೆ. ಆದರೂ ಕೂಡ ಪೆಟ್ರೋಲ್ ಬಂಕ್​​ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ​
ಬಂದ್​​ ನಡುವೆಯೇ ಎಂದಿನಂತೆ ಬಿಎಂಟಿಸಿ ಮತ್ತು ಕೆಎಸ್​ಆರ್​​ಟಿಸಿ ಸಂಚಾರ ನಡೆಸಿವೆ. ಕೆಎಸ್​ಆರ್​ಟಿಸಿ ಬಸ್​ಗಳು ರಾಜ್ಯದ ವಿವಿಧ ಪ್ರದೇಶಗಳಿಗೆ ಸಂಚಾರ ನಡೆಸುತ್ತಿವೆ. ಹಾಗೇ ಬಿಎಂಟಿಸಿ ಬಸ್​​ಗಳು ನಗರದ ವಿವಿಧ ಪ್ರದೇಶಗಳಲ್ಲಿ ಸಂಚಾರ ನಡೆಸುತ್ತಿವೆ.







































error: Content is protected !!
Scroll to Top