ಆರ್ಥಿಕ ಚಟುವಟಿಕೆಗಳಿಗೆ ನಿರ್ಬಂಧ ಹೇರಿ ಬಡವರ ಬದುಕಿಗೆ ಬರೆ – ಬಿಜೆಪಿ ಆರೋಪ
ಕಾರ್ಕಳ : ಗ್ಯಾರಂಟಿಗಳ ಆಮಿಷವೊಡ್ಡಿ ಜನರನ್ನು ದಾರಿ ತಪ್ಪಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಇದೀಗ ಆರ್ಥಿಕ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರುವ ಮೂಲಕ ಬಡವರ, ಕೂಲಿ ಕಾರ್ಮಿಕರ ಬದುಕಿಗೆ ಬರೆ ಎಳೆದಿದೆ ಎಂದು ಕಾರ್ಕಳ ಬಿಜೆಪಿ ಆರೋಪಿಸಿದೆ.
ಕಾಂಗ್ರೆಸ್ ಸರಕಾರ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಉಚಿತ ವಿದ್ಯುತ್ ಯೋಜನೆಯ ನೆಪದಲ್ಲಿ ಕೈಗಾರಿಕೆ ಹಾಗೂ ವಾಣಿಜ್ಯ ಬಳಕೆಯ ವಿದ್ಯುತ್ ದರವನ್ನು ಏಕಾಏಕಿ ಏರಿಸಿದ ಪರಿಣಾಮ ಸಣ್ಣಪುಟ್ಟ ಕೈಗಾರಿಕೆಗಳು ಮುಚ್ಚುವ ಸ್ಥಿತಿ ನಿರ್ಮಾಣವಾಗಿ ಇದನ್ನೇ ನಂಬಿ ಸಾಲ ಮಾಡಿ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿದವರ ಬದುಕು ಬೀದಿಗೆ ಬಂದಿದೆ. ಇಂತಹ ಸಣ್ಣ ಉದ್ಯಮಗಳನ್ನೇ ನಂಬಿದ್ದ ಕಾರ್ಮಿಕರು ಕೂಡ ಸಂಕಷ್ಟಕ್ಕೀಡಾಗಿದ್ದಾರೆ ಎಂದು ಕ್ಷೇತ್ರಾಧ್ಯಕ್ಷ ಮಹಾವೀರ್ ಹೆಗ್ಡೆ ಮತ್ತು ಪ್ರಧಾನ ಕಾರ್ಯದರ್ಶಿ ನವೀನ್ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವ್ಯಾಪಾರ – ವಹಿವಾಟಿಗೆ ಹೊಡೆತ
ಕರಾವಳಿ ಜಿಲ್ಲೆಗಳಲ್ಲಿ ಕಲ್ಲು, ಮರಳು, ಮಣ್ಣು, ಕೆಂಪುಕಲ್ಲು ಸಾಗಾಟಕ್ಕೆ ನಿರ್ಬಂಧ ಹೇರಿದ ಪರಿಣಾಮ ಕಟ್ಟಡ ನಿರ್ಮಾಣ ಕಾಮಗಾರಿ ಸೇರಿದಂತೆ ಎಲ್ಲವೂ ಸ್ಥಗಿತಗೊಂಡಿದೆ. ಬಹುತೇಕ ಕಟ್ಟಡ ಕಾರ್ಮಿಕರ ಕುಟುಂಬಗಳು ಇದನ್ನೇ ನಂಬಿ ಜೀವನ ನಡೆಸುತ್ತಿದ್ದು, ಪ್ರಸ್ತುತ ಕಾಮಗಾರಿಗಳು ಏಕಾಏಕಿ ನಿಂತಿರುವುದರಿಂದ ಸಾವಿರಾರು ಕಾರ್ಮಿಕರು ಕೆಲಸವಿಲ್ಲದೆ ಊಟಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕಟ್ಟಡ ನಿರ್ಮಾಣ ಸಾಮಗ್ರಿಗಳು ಮತ್ತು ಕಾಮಗಾರಿಗಳು ಆರ್ಥಿಕ ಚಟುವಟಿಕೆಗಳ ಕೊಂಡಿಯಾಗಿದ್ದು, ಇದೀಗ ನಿರ್ಮಾಣ ಕಾಮಗಾರಿ ವಲಯವೇ ಸ್ಥಗಿತಗೊಂಡಿದೆ. ಇದರಿಂದ ಹೋಟೆಲ್ ಉದ್ಯಮ, ದಿನಸಿ ವ್ಯಾಪಾರ ಜತೆಗೆ ದೈನಂದಿನ ಮಾರುಕಟ್ಟೆಯ ವ್ಯವಹಾರಕ್ಕೂ ತೀವ್ರ ಹೊಡೆತ ಬಿದ್ದಿದೆ ಎಂದು ಅವರು ಹೇಳಿದ್ದಾರೆ.
ಹೋರಾಟದ ಎಚ್ಚರಿಕೆ
ಕಳೆದ ಹತ್ತಾರು ವರ್ಷಗಳಿಂದ ಮಾಡುತ್ತಿರುವ ವ್ಯವಹಾರ ಏಕಾಏಕಿ ಸ್ಥಗಿತಗೊಳಿಸಿದರೆ ಜನ ಬೀದಿ ಪಾಲಾಗಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಇವುಗಳನ್ನು ಕಾನೂನುಬದ್ಧಗೊಳಿಸುವುದಕ್ಕೂ ಕಾಲಾವಕಾಶ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸರಕಾರ ಕಾಲಾವಕಾಶ ಕೊಟ್ಟು ತಪ್ಪಿದಲ್ಲಿ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಕೂಲಿಕಾರ್ಮಿಕರು ಬೀದಿಗಿಳಿದು ಹೋರಾಟ ನಡೆಸುತ್ತಾರೆ ಎಂದ ಅವರು ಸರಕು ಸಾಗಾಟ ವಾಹನಗಳ ಮೇಲಿನ ತೆರಿಗೆಯನ್ನು ದುಪ್ಪಟ್ಟು ಮಾಡುವ ಮೂಲಕ ಬಡ ವಾಹನ ಮಾಲಕರ ಬದುಕಿನ ಮೇಲೂ ಸರಕಾರ ಬರೆ ಎಳೆದಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ ಜನರ ಬದುಕಿಗೆ ತೊಂದರೆಯಾಗುವ ಯಾವುದೇ ಕ್ರಮವನ್ನು ಕೈಗೊಂಡಿರಲಿಲ್ಲ. ಆದರೆ ಕಾಂಗ್ರೆಸ್ ಸರಕಾರ ಅಧಿಕಾರದ ಆಸೆಯಿಂದ ಜನರ ಹಗಲು ದರೋಡೆಗೆ ಇಳಿದಿದ್ದು, ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸದಿದ್ದರೆ ಲಾರಿ, ಟೆಂಪೋ ಮಾಲಕರೊಂದಿಗೆ ಸೇರಿ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.














































































