ಹಸಿರೇ ಉಸಿರು ಪರಿಸರ ಪ್ರೇಮಿ ಸಂಘಟನೆಗೆ ತುಂಬಿತು 4 ವರ್ಷ

ಸ್ವಚ್ಛತಾ ಸೇನಾನಿಗಳ ಕಾರ್ಯಕ್ಕೆ ಸ್ಥಳೀಯರ ಹರುಷ

ಸ್ವಚ್ಛ ಮತ್ತು ಆರೋಗ್ಯಕರ ಸಮಾಜ ರಾಷ್ಟ್ರದ ಪ್ರಗತಿಗೆ ಪೂರಕ. ಸ್ವಚ್ಛತೆಗೆ ವೇದಗಳ ಕಾಲದಲ್ಲೂ ವಿಶೇಷ ಒತ್ತು ನೀಡಲಾಗಿದ್ದು, ಸ್ವಚ್ಛ ಪರಿಸರದಲ್ಲಿ ಭಗವಂತ ನೆಲೆಸಿರುತ್ತಾನೆ ಎಂಬ ನಂಬಿಕೆ ಇದೆ. ಸ್ವಚ್ಛ ಪರಿಸರ ಮನಸ್ಸಿಗೆ ನೆಮ್ಮದಿಯನ್ನು ನೀಡುವುದು. ತಮ್ಮ ತಮ್ಮ ಊರನ್ನು ಸ್ವಚ್ಛವಾಗಿರಿಸುವ ಜವಾಬ್ದಾರಿ ಪ್ರತಿಯೊಬ್ಬ ವ್ಯಕ್ತಿಯ ಮೇಲಿದೆ.

ಸ್ವಚ್ಛ ಭಾರತ ಅಭಿಯಾನ
ಸ್ವಚ್ಛತೆ ಬಗೆಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸುವ ಸಲುವಾಗಿ ಕೇಂದ್ರ ಸರಕಾರ ಗಾಂಧೀಜಿ ಅವರ 145ನೇ ಜಯಂತಿಯಂದು ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿತು. ಪ್ರಧಾನಿ ನರೇಂದ್ರ ಮೋದಿ ಅವರು ಈ ಅಭಿಯಾನಕ್ಕೆ ಚಾಲನೆ ನೀಡಿದರು. ದೇಶಾದ್ಯಂತ ಈ ಅಭಿಯಾನಕ್ಕೆ ಭಾರಿ ಬೆಂಬಲ, ಸಂಘ ಸಂಸ್ಥೆಗಳಿಂದಲೂ ಭಾರಿ ಸ್ಪಂದನೆ ದೊರೆಯಿತು. ಇದೇ ಸಂದರ್ಭ ದುರ್ಗ ಗ್ರಾಮದ ತೆಳ್ಳಾರಿನಲ್ಲಿ ಸಮಾನ ಮನಸ್ಕರ ತಂಡವೊಂದು ಸದ್ದಿಲ್ಲದೆ ಸ್ವ‍ಚ್ಛತಾ ಕೈಂಕರ್ಯದಲ್ಲಿ ತೊಡಗಿಸಿಕೊಂಡಿತು.

ಪರಿಸರ ಪ್ರೇಮಿ ಸಂಘಟನೆ
9/9/2019 ರಂದು ಸ್ವಚ್ಛತೆ ಹಾಗೂ ಪ್ರಕೃತಿಯ ಆರಾಧನೆ, ರಕ್ಷಣೆಯ ಸದುದ್ದೇಶದಿಂದ ಹಸಿರೇ ಉಸಿರು ಎಂಬ ಹೆಸರಿನಲ್ಲಿ ಸಂಘಟನೆಯೊಂದು ಸ್ಥಾಪನೆಯಾಯಿತು. ವಾರದಲ್ಲಿ ಒಂದು ದಿನ ಕನಿಷ್ಠ ಒಂದು ಗಂಟೆಯಾದರೂ ಸ್ವಚ್ಛತೆಗೆ ಮೀಸಲು ಇಡಬೇಕು ಎನ್ನುವ ಇರಾದೆಯೊಂದಿಗೆ 10 ಮಂದಿಯೊಂದಿಗೆ ಕಾರ್ಯಾರಂಭ ಮಾಡಿದ ತಂಡ ಇಂದು 60ಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ. ಸ್ವಚ್ಛತೆಯ ಪಣತೊಟ್ಟು ಪ್ರತಿ ಆದಿತ್ಯವಾರ ಬೆಳಿಗ್ಗಿನ ಒಂದು ಗಂಟೆ ಸಮಯವನ್ನು ಸಾರ್ವಜನಿಕ ಸ್ಥಳಗಳಲ್ಲಿ ಕಳೆಯುವ ಈ ತಂಡ ನಿರಂತರ 171 ವಾರಗಳಲ್ಲಿ ಸ್ವಯಂ ಸ್ಫೂರ್ತಿಯಿಂದ, ನಿಸ್ವಾರ್ಥ ಮನೋಭಾವದಿಂದ ಸೇವೆ ಸಲ್ಲಿಸಿದೆ. ಈ ಸಂಘಟನೆ ಸ್ಥಾಪನೆಯಾಗಿ ಇಂದಿಗೆ 4 ವರ್ಷ ಪೂರ್ಣಗೊಳ್ಳುತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಈ ತಂಡ ಸಲ್ಲಿಸಿದ ಸೇವೆ, ಪಡೆದ ಮೆಚ್ಚುಗೆ ಅನನ್ಯ.

ಸಾಮಾಜಿಕ ಕೈಂಕರ್ಯ
ತೆಳ್ಳಾರು ಪರಿಸರ, ಊರ ದೈವ ದೇವಸ್ಥಾನಗಳ ಆವರಣ, ಶಾಲಾ ವಠಾರ, ಗ್ರಾಮ ಪಂಚಾಯತ್ ಪರಿಸರ, ಆರೋಗ್ಯ ಕೇಂದ್ರ, ನದಿ ತಟ ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ಈ ತಂಡ ನಿರಂತರವಾಗಿ ಸ್ವಚ್ಛತಾ ಕಾರ್ಯ ನಡೆಸಿಕೊಂಡು ಬಂದಿದೆ. ಪರಿಸರದ ರಕ್ಷಣೆಗಾಗಿ ಗಿಡನಾಟಿ, ಶಾಲ ವನ ನಿರ್ಮಾಣ, ಗಿಡಗಳ ವಿತರಣೆ, ಆರೋಗ್ಯ ಹಾಗೂ ನೈರ್ಮಲ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಜಾಗೃತಿ ಕಾರ್ಯಕ್ರಮಗಳ‌ ಆಯೋಜನೆ ಹಾಗೂ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣಾ ಶಿಬಿರ ಮೊದಲಾದ ಸಮಾಜಮುಖಿ ಕಾರ್ಯಕ್ರಮಗಳನ್ನು ಈ ತಂಡ ಯಶಸ್ವಿಯಾಗಿ ನಿರ್ವಹಿಸಿಕೊಂಡು ಬಂದಿದೆ. ರಸ್ತೆ ಬದಿಯಲ್ಲಿ ಡಸ್ಟ್ ಬಿನ್ ಅಳವಡಿಕೆ, ನೈರ್ಮಲ್ಯಕ್ಕೆ ಸಂಬಂಧಿಸಿ ಸರಕಾರ ನಡೆಸುವ ಯೋಜನೆಗಳಲ್ಲಿ ಸಹಭಾಗಿತ್ವ, ರಾಜ್ಯ ಮಟ್ಟದಲ್ಲಿ ಸುದ್ದಿಯಾದ ಕಾರ್ಕಳದ ಎರಡು ಯಶಸ್ವಿ ಕಾರ್ಯಕ್ರಮಗಳಾದ ಕಾರ್ಕಳ ಉತ್ಸವ ಹಾಗೂ ಪರಶುರಾಮ ಥೀಂ ಪಾರ್ಕ್ ನ ಸಮಾರಂಭದ ಸ್ವಚ್ಚತೆಯಲ್ಲೂ ಈ ತಂಡ ಸಕ್ರಿಯವಾಗಿ ಭಾಗವಹಿಸಿದೆ.

ಸದೃಢ ಸಂಘಟನೆ
ತಂಡದ ಸದಸ್ಯರ ಸಂಬಂಧ ಸದೃಢಗೊಳಿಸುವ ನಿಟ್ಟಿನಲ್ಲಿ ಸ್ವಚ್ಚತೆ -ಚಾರಣ-ಯಾನ ಎಂಬ ಯೋಜನೆಯೂ ಜಾರಿಯಲ್ಲಿದೆ. ತಂಡದ ಸದಸ್ಯರು ಪ್ರವಾಸಿ ತಾಣಗಳಿಗೆ ತೆರಳಿ ಅಲ್ಲಿಯೂ ಸ್ವಚ್ಛತಾ ಕಾರ್ಯವನ್ನು ಕೈಗೊಂಡಿದೆ. ಕುಂದಾದ್ರಿ, ಕೂಡ್ಲು ಫಾಲ್ಸ್, ಕೊಣಾಜೆ ಕಲ್ಲು, ಮಾಳ ಫಾಲ್ಸ್ ಹಾಗೂ ಇನ್ನಿತರ ಪ್ರೇಕ್ಷಣೀಯ ತಾಣಗಳಿಗೆ ಪ್ರವಾಸ ಏರ್ಪಡಿಸಿ ಅಲ್ಲಿ ಕೂಡಾ ಸ್ವಚ್ಚತೆಯನ್ನು ನಡೆಸಲಾಗುತ್ತಿದೆ.

ಹಸಿರೇ ಉಸಿರು ತಂಡ ಮಾಡಿರುವ ಸಾಧನೆಗಳನ್ನು ಗುರುತಿಸಿ ಊರ – ಪರವೂರ ಹಲವಾರು ಸಂಘ ಸಂಸ್ಥೆಗಳು ತಂಡವನ್ನು ಗೌರವಿಸಿದೆ. 2021 ರಲ್ಲಿ ನದಿ ತಟದಿಂದ ಅತಿ ಹೆಚ್ಚು ತ್ಯಾಜ್ಯ ಸಂಗ್ರಹಿಸಿದ ತಂಡವೆಂದು ಸ್ವರ್ಣಾರಾಧನೆ ತಂಡದಿಂದ ಪ್ರಶಸ್ತಿಗೆ ಭಾಜನವಾಗಿದೆ. ಸ್ವಚ್ಛತೆ, ಪರಿಸರದ ಸಂರಕ್ಷಣೆಯ ಜೊತೆಗೆ ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿರುವ ಹಸಿರೇ ಉಸಿರು ತಂಡದ ಸ್ವಚ್ಛತಾ ಸೇನಾನಿಗಳ ಕಾರ್ಯ ನಿರಂತರವಾಗಿ ನಡೆಯಲಿ.

✒️ಅರುಣ್‌ ಮಾಂಜ ತೆಳ್ಳಾರುerror: Content is protected !!
Scroll to Top