ಬೆಂಗಳೂರು : ನನ್ನನ್ನು ಮಂತ್ರಿ ಮಾಡದಿದ್ದಕ್ಕೆ ರಾಜ್ಯದ ಮುಖ್ಯಮಂತ್ರಿಗಳಿಗೆ ಧನ್ಯವಾದ ಹೇಳುತ್ತೇನೆ ಎಂದು ಎಂಎಲ್‌ಸಿ ಬಿ. ಕೆ. ಹರಿಪ್ರಸಾದ್ ವ್ಯಂಗ್ಯವಾಗಿ ಸಿದ್ಧರಾಮಯ್ಯ ಅವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೆ. 9 ರಂದು ನಡೆದ ಈಡಿಗ, ಬಿಲ್ಲವ, ನಾಮಧಾರಿ, ದೀವರು ಮತ್ತು ಅತಿ ಹಿಂದುಳಿದ ವರ್ಗಗಳ ವಿಶೇಷ ಸಭೆಯಲ್ಲಿ ಮಾತನಾಡಿದರು.
ಮಂತ್ರಿಯಾಗುತ್ತೇನೆ ಎಂಬ ಭ್ರಮೆ ಬೇಡ
ನನ್ನನ್ನು ಸಚಿವರನ್ನಾಗಿ ಮಾಡದ ಅವರಿಗೆ ಧನ್ಯವಾದ ಹೇಳುತ್ತೇನೆ. ನಾನು ಮಂತ್ರಿ ಆಗಿದ್ದರೆ ಸಮುದಾಯದ ಜನರ ಜೊತೆಗೆ ಇರಲು ಸಾಧ್ಯವಾಗುತ್ತಿರಲ್ಲಿ. ಈ ಸರಕಾರದಲ್ಲಿ ನಾನು ಮಂತ್ರಿಯಾಗುತ್ತೇನೆ, ಮುಖ್ಯಮಂತ್ರಿಯಾಗುತ್ತೇನೆ ಎಂಬ ಭ್ರಮೆ ಬೇಡ. ಅವರು ದಲಿತ ನಾಯಕರನ್ನು ಕಡೆಗಣಿಸಿದ್ದಾರೆ. ದಲಿತರನ್ನು ಸಿಎಂ ಮಾಡುವುದನ್ನು ಮರೆತು ಅವರನ್ನು ಕೆಳಗಿಳಿಸಲಾಗಿದೆ. ಕರ್ನಾಟಕದಲ್ಲಿ ಡಾ. ಜಿ. ಪರಮೇಶ್ವರ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ. ಈ ಹಿಂದೆ ಉಪಮುಖ್ಯಮಂತ್ರಿಯಾಗಿದ್ದ ಅವರು, ಸಿಎಂ ಆಗುವ ಎಲ್ಲಾ ಗುಣಗಳನ್ನು ಹೊಂದಿದ್ದರು, ಆದರೆ ಅವರನ್ನು ಕೆಳಗಿಳಿಸಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ಈಡಿಗರು ಭಿಕ್ಷೆ ಬೇಡುವವರಲ್ಲ : ಪ್ರಣವಾನಂದ ಸ್ವಾಮೀಜಿ
ಅತಿ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಎಲ್ಲಿ ಅವಕಾಶ ಕೊಟ್ಟಿದ್ದೀರಿ ? ವಿಧಾನ ಸಭೆಯಲ್ಲಿ ಪ್ರವೇಶ ಮಾಡುವುದಕ್ಕೆ ಸಣ್ಣ ಸಣ್ಣ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಅವಕಾಶ ಕೊಟ್ಟಿದ್ದೀರಾ ? ಎಂದು ಪ್ರಶ್ನಿಸಿರುವ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಪೀಠಾಧಿಪತಿ ಪ್ರಣವಾನಂದ ಸ್ವಾಮೀಜಿ ಈಡಿಗ, ಬಿಲ್ಲವ, ನಾಮಧಾರಿ ಸಮುದಾಯ ಭಿಕ್ಷೆ ಬೇಡುವ ಸಮುದಾಯ ಅಲ್ಲ. ಅಂಥ ಸಮುದಾಯಗಳ ನಾಯಕರನ್ನೇ ಷಡ್ಯಂತ್ರದಿಂದ ದೂರ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೆ ದೇವರಾಜ ಅರಸು ಅವರ ಸಂಪುಟದಲ್ಲಿ ಬಂಗಾರಪ್ಪ ಅವರನ್ನು ಸೇರ್ಪಡೆ ಮಾಡಿಕೊಳ್ಳಬಾರದು ಅಂತ ಪತ್ರ ದೆಹಲಿಯಿಂದ ಬಂದಿತ್ತು. ನಾವು ಈಡಿಗ ಸಮುದಾಯದ ನಾಯಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಈಗ ಇಲ್ಲಿಂದಲೇ ಪತ್ರ ಹೋಗುತ್ತದೆ. ಮಂಗಳೂರು ಉಡುಪಿ ಕಾರವಾರ ಶಿವಮೊಗ್ಗ ನಾಲ್ಕು ಜಿಲ್ಲೆಯಲ್ಲಿ ನಾವೇ ನಿರ್ಣಾಯಕ ಸಮುದಾಯ ಎಂಬುದನ್ನು ಮರೆಯಬೇಡಿ ಎಂದು ಎಚ್ಚರಿಕೆ ಕೊಟ್ಟರು.