ನಮ್ಮ ನೆಲದ ಸಂಸ್ಕೃತಿ ಸಂಸ್ಕಾರ ಶ್ರೇಷ್ಠವಾದುದು – ಶ್ಯಾಮಲಾ ಕುಂದರ್
ಕಾರ್ಕಳ : ನಮ್ಮ ನೆಲದ ಸಂಸ್ಕೃತಿ ಹಾಗೂ ಸಂಸ್ಕಾರ ಶ್ರೇಷ್ಠವಾದುದು. ಹೀಗಾಗಿ ವಿದೇಶಿಯರೂ ನಮ್ಮ ಸಂಸ್ಕೃತಿಗೆ ಮಾರುಹೋಗಿದ್ದಾರೆ. ಇದು ನಮಗೆಲ್ಲರಿಗೂ ಹೆಮ್ಮೆಯ ವಿಚಾರವೆಂದು ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್ ಹೇಳಿದರು.
ಅವರು ಸೆ. 5ರಂದು ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ತಾಲೂಕಿನ ಐವರು ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದರು. ಇಂದು ಮಹಿಳೆ ಪುರುಷರಿಗೆ ಸಮಾನವಾಗಿ ಬೆಳೆದಿದ್ದಾರೆ. ಮಹಿಳೆಯ ಏಳಿಗೆಯಲ್ಲಿ ಪುರುಷ ಸಮಾಜದ ಪ್ರೋತ್ಸಾಹ ಅಲ್ಲಗಳೆಯುವಂತಿಲ್ಲ ಎಂದು ಶ್ಯಾಮಲಾ ಅಭಿಪ್ರಾಯಪಟ್ಟರು.
ಮೊಬೈಲ್ ಕೆಡುತ್ತಿರುವ ಸಂಬಂಧ
ಇಂದು ಯಾಂತ್ರಿಕ ಬದುಕು, ಮೊಬೈಲ್‌ನಂತಹ ಉಪಕರಣಗಳಿಂದಾಗಿ ಸಂಬಂಧಗಳು ದೂರವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಶ್ಯಾಮಲಾ ಅವರು ವಿದ್ಯಾರ್ಥಿಗಳು ಗುರುಹಿರಿಯರನ್ನು ಗೌರವದಿಂದ ಕಾಣಬೇಕು. ನೈತಿಕ ಶಿಕ್ಷಣ, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕೆಂದರು.
ಶ್ಲಾಘನೀಯ
ಗುಣಮಟ್ಟದ ಶಿಕ್ಷಣದೊಂದಿಗೆ ಮೌಲ್ಯಯುತ ಶಿಕ್ಷಣವನ್ನು ನೀಡುವ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯ. ಡಾ. ಸುಧಾಕರ ಶೆಟ್ಟಿ ಅವರ ಕಾರ್ಯ ಅಭಿನಂದನೀಯವೆಂದು ಶ್ಯಾಮಲಾ ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಅಧಿಕಾರ ಶಾಶ್ವತವಲ್ಲ
ಪ್ರಾಸ್ತವಿಕ ಮಾತುಗಳನ್ನಾಡಿದ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ, ಅಧಿಕಾರ, ಅಂತಸ್ತು, ಹಣವೆಲ್ಲ ಶಾಶ್ವತವಲ್ಲ. ಮನುಷ್ಯತ್ವವನ್ನು ಇಟ್ಟುಕ್ಕೊಳ್ಳದವನ ಬದುಕು ವ್ಯರ್ಥ. ನಾವು ನೀಡುವ ಉಪಕಾರ ಸ್ಮರಣೆಯೇ ಸಮಾಜಮುಖಿ ಕಾರ್ಯವಾಗುವುದು ಎಂದರು.
ಸನ್ಮಾನ
ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಹಾಗೂ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವತಿಯಿಂದ ನಿವೃತ್ತ ಮುಖ್ಯಶಿಕ್ಷಕರಾದ ಹಿರ್ಗಾನ ಬಿ.ಎಂ. ಅನುದಾನಿತ ಹಿ.ಪ್ರಾ. ಶಾಲೆಯ ಎಂ. ರತ್ನಾಕರ್ ರಾವ್, ದುರ್ಗಾ ತೆಳ್ಳಾರಿನ ಸ.ಹಿ.ಪ್ರಾ. ಶಾಲೆಯ ವಸಂತ್ ಎಂ. ಎಲಿಯಾಳ, ಸ.ಹಿ.ಪ್ರಾ. ಶಾಲೆಯ ಸತೀಶ್ ರಾವ್ ಹಾಗೂ ಜೋಡುರಸ್ತೆಯ ಶ್ರೀ ದುರ್ಗಾ ಅನುದಾನಿತ ಹಿ.ಪ್ರಾ. ಶಾಲೆಯ ಸಹಶಿಕ್ಷಕ ಹರೀಶ್ ನಾಯ್ಕ್, ದುರ್ಗಾ ತೆಳ್ಳಾರಿನ ಸ.ಪ್ರೌ. ಶಾಲೆಯ ದೈಹಿಕ ಶಿಕ್ಷಕ ಎಚ್.ಕೆ. ಗಣಪಯ್ಯ ಅವರನ್ನು ಗೌರವಿಸಲಾಯಿತು. ಕ್ರೀಡಾ, ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಸಂಸ್ಥೆಯ ಪಿ.ಆರ್.ಒ ಜ್ಯೋತಿ ಪದ್ಮನಾಭ ಭಂಡಿ ಸ್ವಾಗತಿಸಿ, ಆಂಗ್ಲಭಾಷಾ ಉಪನ್ಯಾಸಕಿ ಸಂಗೀತ ಕುಲಾಲ್ ನಿರೂಪಿಸಿ, ವಂದಿಸಿದರು.