ಕಾರ್ಕಳದಲ್ಲಿ ಶಿಕ್ಷಕರ ದಿನಾಚರಣೆ

ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ತರ – ಅನಂತಶಂಕರ

ಕಾರ್ಕಳ : ಶಿಕ್ಷಕರು ಪಠ್ಯ ಶಿಕ್ಷಣದೊಂದಿಗೆ ಸಂಸ್ಕಾರ ಮತ್ತು ಜೀವನ ಮೌಲ್ಯಾಧಾರಿತ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಾರೆ. ತನ್ಮೂಲಕ ಉತ್ತಮ ಸಮಾಜ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸುತ್ತಾರೆ ಎಂದು ಕಾರ್ಕಳ ತಹಶೀಲ್ದಾರ್‌ ಅನಂತಶಂಕರ ಬಿ. ಅಭಿಪ್ರಾಯಪಟ್ಟರು.
ಅವರು ಕಾರ್ಕಳ ಮತ್ತು ಹೆಬ್ರಿ ತಾಲೂಕು ಶಿಕ್ಷಕರ ದಿನಾಚರಣಾ ಸಮಿತಿ ವತಿಯಿಂದ ಸೆ. 5 ರಂದು ದಾನಶಾಲಾ ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೊಡುಗೆ ಅನನ್ಯ
ಪ್ರಾಸ್ತವಿಕ ಮಾತುಗಳನ್ನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಭಾಸ್ಕರ್‌ ಟಿ., ಸರ್ವಪಳ್ಳಿ ರಾಧಾಕೃಷ್ಣನ್‌ ಅವರು ತತ್ವಜ್ಞಾನಿಯಾಗಿ, ದಾರ್ಶನಿಕರಾಗಿ, ಸಮಾಜ ಸುಧಾರಕರಾಗಿ, ಶಿಕ್ಷಕರಾಗಿ ನೀಡಿದ ಕೊಡುಗೆ ಅನನ್ಯ. ರಾಷ್ಟ್ರಪತಿ ಹುದ್ದೆ ಅಲಂಕರಿಸಿರುವ ಅವರು ಭಾರತೀಯ ಶಿಕ್ಷಣ ಕ್ಷೇತ್ರಕ್ಕೆ ಅರ್ಥವತ್ತಾದ ಚೌಕಟ್ಟು ನೀಡುವ ಮೂಲಕ ದೇಶದ ಅಭಿವೃದ್ಧಿಗಾಗಿ ಜೀವನ ಮುಡುಪಾಗಿಟ್ಟವರು. ಅವರ ಆದರ್ಶ ಜೀವನವೇ ಶಿಕ್ಷಕರಿಗೆ ಸ್ಫೂರ್ತಿದಾಯಕ ಎಂದರು.

ಶ್ರೇಷ್ಠ ವೃತ್ತಿ
ಡಿವೈಎಸ್ಪಿ ಅರವಿಂದ ಕಲಗುಜ್ಜಿ ಮಾತನಾಡಿ, ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾದ ವೃತ್ತಿ. ಶಿಕ್ಷಕರು ವಿದ್ಯಾರ್ಥಿಗಳಿಗೆ ಬದುಕು ಕಲಿಸುವುದರೊಂದಿಗೆ ವಿದ್ಯಾರ್ಥಿಗಳ ಸಾರ್ಥಕ ಬದುಕಿನಲ್ಲಿ ತಮ್ಮ ಖುಷಿಯನ್ನು ಕಾಣುತ್ತಾರೆ ಎಂದರು.

ಶಿಕ್ಷಕರ ಪಾತ್ರ ಹಿರಿದಾದುದು
ಅಧ್ಯಕ್ಷತೆ ವಹಿಸಿ ಮಾತನಾಡಿದ ತಾ. ಪಂ. ಕಾರ್ಯನಿರ್ವಾಹಣಾಧಿಕಾರಿ ಗುರುದತ್ತ್‌ ಎಂ. ಎನ್.‌, ವಿಜ್ಞಾನ, ತಂತ್ರಜ್ಞಾನ, ಕ್ರೀಡೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಭಾರತ ಪ್ರಗತಿ ಕಾಣುತ್ತಿದೆ. ಇದರ ಹಿಂದೆ ಶಿಕ್ಷಕರ ಪಾತ್ರ ಹಿರಿದಾದುದು ಎಂದರು.

ಸನ್ಮಾನ – ಬಹುಮಾನ ವಿತರಣೆ
ಕಾರ್ಯಕ್ರಮದಲ್ಲಿ ಕಾರ್ಕಳ ಮತ್ತು ಹೆಬ್ರಿ ತಾಲೂಕಿನ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ಸಾಧಕ ಶಿಕ್ಷಕರನ್ನು ಗೌರವಿಸಲಾಯಿತು ಮತ್ತು ಶಿಕ್ಷಕ ದಿನಾಚರಣೆಯ ಪ್ರಯುಕ್ತ ನಡೆಸಿದ ತಾಲೂಕು ಮಟ್ಟದ ಶಿಕ್ಷಕರ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಪುರಸಭಾ ಮುಖ್ಯಾಧಿಕಾರಿ ರೂಪಾ ಶೆಟ್ಟಿ, ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷ್‌ ಕುಮಾರ್‌ ಶೆಟ್ಟಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ರಮಾನಂದ ಶೆಟ್ಟಿ, ಕರ್ನಾಟಕ ರಾಜ್ಯ ನೌಕರರ ಸಂಘದ ಅಧ್ಯಕ್ಷ ಬಾಲಕೃಷ್ಣ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ರವಿಚಂದ್ರ ಕಾರಂತ, ಹೆಬ್ರಿ ತಾಲೂಕು ಕರ್ನಾಟಕ ರಾಜ್ಯ ನೌಕರರ ಸಂಘದ ಅಧ್ಯಕ್ಷ ಹರೀಶ್‌ ಪೂಜಾರಿ, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮಹೇಶ್‌ ಶೆಟ್ಟಿ, ಹೆಬ್ರಿ ತಾಲೂಕು ಕಸಾಪದ ಅಧ್ಯಕ್ಷ ಶ್ರೀನಿವಾಸ್‌ ಭಂಡಾರಿ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಪಾಂಡುರಂಗ ಆಚಾರ್‌ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕರಾದ ಪ್ರಕಾಶ್ ಪೂಜಾರಿ ಮತ್ತು ಪ್ರಮಿಳಾ ಕಾರ್ಯಕ್ರಮ ನಿರೂಪಿಸಿದರು. ಸಂತೋಷ್‌ ಕುಮಾರ್‌ ವಂದಿಸಿದರು.error: Content is protected !!
Scroll to Top