ಕಾರ್ಕಳ : ಮಿಯ್ಯಾರು ಗ್ರಾಮದ ಬೋರ್ಕಟ್ಟೆಯ ಕೊಂಕಣರಬೆಟ್ಟು ಹೌಸ್ ನಿವಾಸಿ ಜಗದೀಶ್ ಪೂಜಾರಿ (40) ಎಂಬವರನ್ನು ಹಣಕಾಸಿನ ತಗಾದೆ ಹಿನ್ನೆಲೆಯಲ್ಲಿ ಅಪಹರಿಸಿ ಹಲ್ಲೆ ಮಾಡಿದ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರೆಂಜಾಳ ಗ್ರಾಮದ ಪ್ರಕಾಶ್ ಮೆಂಡೋನ್ಸಾ ಎಂಬವರಿಗೆ 12 ವರ್ಷದ ಹಿಂದೆ ಜಗದೀಶ್ ಪೂಜಾರಿ 1.50 ಲಕ್ಷ ರೂ. ಸಾಲ ನೀಡಿದ್ದರು. ಇದರ ಭದ್ರತೆಗಾಗಿ ಜಗದೀಶ್ ಪೂಜಾರಿ ಖಾಲಿ ಚೆಕ್ ಪಡೆದುಕೊಂಡಿದ್ದರು. ಮೆಂಡೊನ್ಸ ಹಣ ಕೊಡದ ಹಿನ್ನೆಲೆಯಲ್ಲಿ ಜಗದೀಶ್ ಪೂಜಾರಿ ಚೆಕ್‌ಬೌನ್ಸ್ ಕೇಸು ದಾಖಲಿಸಿದ್ದರು. ಮೆಂಡೋನ್ಸ 1 ಲಕ್ಷ ರೂ. ನೀಡಿ ಕೇಸು ಹಿಂದೆಗೆದುಕೊಳ್ಳಲು ಹೇಳಿದ್ದರು. ಉಳಿದ 50 ಸಾವಿರ ರೂ. ಕೊಟ್ಟ ಬಳಿಕ ಕೇಸು ಹಿಂಪಡೆಯುವುದಾಗಿ ಜಗದೀಶ್ ಪೂಜಾರಿ ತಿಳಿಸಿದ್ದರು.
ಕಳೆದ ಆ. 29ರಂದು ಜಗದೀಶ್ ಪೂಜಾರಿಯವರು ಸಂಜೆ 5 ಗಂಟೆಗೆ ಇರ್ವತ್ತೂರು ಗ್ರಾಮದ ಹಾಲಿನ ಡೈರಿಗೆ ಹಾಲು ಕೊಡಲು ಹೋದ ವೇಳೆ ಅಶೋಕ್ ಕೋಟ್ಯಾನ್, ಸಾಣೂರು ಜಗದೀಶ್ ಪೂಜಾರಿ ಎಂಬವರು ಅಡ್ಡಗಟ್ಟಿ ನೀನು ಯಾಕೆ ನಮ್ಮ ಫೋನ್ ರಿಸೀವ್ ಮಾಡುವುದಿಲ್ಲ ಎಂದು ದಬಾಯಿಸಿ ಹಲ್ಲೆ ಮಾಡಿದ್ದಾರೆ. ಬಳಿಕ ಜಗದೀಶ್ ಪೂಜಾರಿಯವರನ್ನು ವಾಹನದಲ್ಲಿ ಅಶೋಕ್ ಕೋಟ್ಯಾನ್ ಮನೆಗೆ ಕರೆದುಕೊಂಡು ಹೋಗಿ ಅಲ್ಲಿ ಹಲ್ಲೆ ಮಾಡಿ ಪ್ರಕಾಶ್ ಮೆಂಡೋನ್ಸನ ವಿರುದ್ಧ ಹಾಕಿರುವ ಕೇಸು ವಾಪಸು ತೆಗೆದುಕೊಳ್ಳಬೇಕು. ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಕೊಂದು ಹಾಕುತ್ತೇವೆ ಎಂದು ಬೆದರಿಸಿ ಬಳಿಕ ಅದೇ ವಾಹನದಲ್ಲಿ ವಾಪಸು ಕರೆತಂದು ಸಾಣೂರು ಗರಡಿಯ ಬಳಿ ಬಿಟ್ಟು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.