ಕೀರ್ತನೆಗಳಲ್ಲಿ ವೇದ ಪುರಾಣಗಳ ಸಾರ : ಗಿಲ್ಲಾಳಿ ಪದ್ಮನಾಭ ಆಚಾರ್ಯ

ಭಕ್ತಿ ಪುಷ್ಪ ಮಾಲಿಕಾ ಪುಸ್ತಕ ಬಿಡುಗಡೆ ಸಮಾರಂಭ

ಹೆಬ್ರಿ: ಭಗವಂತನ ಮಹಿಮೆ ಅಪಾರವಾದುದು. ವೇದಗಳು, ಪುರಾಣಗಳು ಮತ್ತು ಶಾಸ್ತ್ರಗಳ ಸಾರವನ್ನು ಜನಸಾಮಾನ್ಯರಿಗೆ ಅರ್ಥವಾಗುವ ಕನ್ನಡ ಭಾಷೆಯಲ್ಲಿ ಕೀರ್ತನೆಗಳನ್ನು ರಚಿಸುವ ಮೂಲಕ ದಾಸ ಶ್ರೇಷ್ಠರು ನಮಗೆ ಜೀವನದ ಅನುಭವವನ್ನು ತಿಳಿಸಿದ್ದಾರೆ. ಅಂತಹ ಕೀರ್ತನೆಗಳನ್ನು ರಚಿಸುವ ಮೂಲಕ ದೇವರ ಸೇವೆಯಲ್ಲಿ ಪಾಲ್ಗೊಂಡು ಶೋಭಾ ಕಲ್ಕೂರ್ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಹೆಬ್ರಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ಅರ್ಚಕ, ವಿದ್ವಾಂಸ ಗಿಲ್ಲಾಳಿ ಪದ್ಮನಾಭ ಆಚಾರ್ಯ ತಿಳಿಸಿದರು.
ಹೆಬ್ರಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ವಠಾರದಲ್ಲಿ ನಡೆದ ಶೋಭಾ ಆರ್. ಕಲ್ಕೂರ್ ಮುದ್ರಾಡಿ ಅವರು ರಚಿಸಿದ ಭಕ್ತಿ ಪುಷ್ಪ ಮಾಲಿಕಾ ಎಂಬ ದೇವರ ನಾಮಗಳ ಕೀರ್ತನೆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಮುದ್ರಾಡಿ ಉಪ್ಪಳ ರಾಜೇಂದ್ರ ಕಲ್ಕೂರ್ ಪುಸ್ತಕ ಬಿಡುಗಡೆಗೊಳಿಸಿ ಭಗವಂತನ ನಾಮಸ್ಮರಣೆಗೆ ಅನುಕೂಲವಾಗುವ ಈ ಕೀರ್ತನೆ ಪುಸ್ತಕವನ್ನು ಎಲ್ಲರೂ ಉಪಯೋಗಿಸಿಕೊಳ್ಳುವಂತೆ ವಿನಂತಿಸಿದರು.
ಹೆಬ್ರಿ ವಲಯ ಬ್ರಾಹ್ಮಣ ಸಂಘದ ಅಧ್ಯಕ್ಷ ರಾಮಕೃಷ್ಣ ಆಚಾರ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಉತ್ತಮ ಯೋಚನೆ, ಉತ್ತಮ ಯೋಜನೆಗಳನ್ನು ಇಟ್ಟುಕೊಂಡು ಕಾರ್ಯದಲ್ಲಿ ತೊಡಗಿದಾಗ ಉತ್ತಮ ಸಾಧನೆ ಮಾಡಲು ಸಾಧ್ಯ. ಆ ನಿಟ್ಟಿನಲ್ಲಿ ಶೋಭಾ ಕಲ್ಕೂರ್ ಅವರು ಸುಮಾರು 600 ಕೀರ್ತನೆಗಳನ್ನು ರಚಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದರು.
ಹೆಬ್ರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀನಿವಾಸ ಭಂಡಾರಿ ಮಾತನಾಡಿ ಹೆಬ್ರಿ ತಾಲೂಕಿನಲ್ಲಿ ಅನೇಕ ಪ್ರತಿಭಾನ್ವಿತರು ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವುದು ನಮಗೆ ಹೆಮ್ಮೆಯಾಗಿದೆ. ಸ್ಥಳೀಯ ಲೇಖಕರ ಪುಸ್ತಕಗಳನ್ನು ಎಲ್ಲರೂ ಖರೀದಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸೋಣ ಎಂದು ತಿಳಿಸಿ ಶುಭ ಹಾರೈಸಿದರು.
ಕೃತಿಯ ಸಂಕಲನಕಾರ, ವಿಮರ್ಶಕ ಗುರುರಾಜ್ ರಾವ್ ಸುಳ್ಯ ಕೀರ್ತನೆಯ ಮಹತ್ವವನ್ನು ತಿಳಿಸಿದರು. ಉಪ್ಪಳ ಶಾಲೆಯ ಮುಖ್ಯಶಿಕ್ಷಕ ಶ್ರೀನಿವಾಸ ಭಟ್ ಶುಭ ಕೋರಿದರು. ಕೃತಿ ರಚನಕಾರರಾದ ಶೋಭಾ ಆರ್. ಕಲ್ಕೂರ್,ಭಗವಂತನ ಪ್ರೇರಣೆಯಿಂದ ರಚಿಸಿದ ಕೀರ್ತನೆಗಳನ್ನು ಎಲ್ಲರೂ ಹಾಡುವ ಮೂಲಕ ದೇವರಿಗೆ ಸಮರ್ಪಿಸುವಂತೆ ಕೋರಿದರು. ಪುರುಷೋತ್ತಮ್ ರಾವ್, ಸರ್ವೋತ್ತಮ ರಾವ್, ಕ. ಸಾ. ಪ. ಪದಾಧಿಕಾರಿಗಳು ಉಪಸ್ಥಿತರಿದ್ದರು. ಹೆಬ್ರಿ ತಾಲೂಕು ವಿಪ್ರ ಮಹಿಳಾ ವೇದಿಕೆಯ ಗೌರವ ಸಲಹೆಗಾರರಾಗಿರುವ ವೈದ್ಯೆ ಡಾ. ಭಾರ್ಗವಿ ಆರ್. ಐತಾಳ್ ಪ್ರಾಸ್ತಾವಿಕ ನುಡಿಗಳನ್ನು ತಿಳಿಸಿದರು. ಕೃತಿಯ ಸಂಕಲನಕಾರ ಗುರುರಾಜ್ ರಾವ್ ಸುಳ್ಯ ಅವರನ್ನು ಗೌರವಿಸಲಾಯಿತು. ಸುಗುಣ ಬಡಕಿಲ್ಲಾಯ ಸ್ವಾಗತಿಸಿದರು. ಮುದ್ರಾಡಿ ಪ್ರೌಢಶಾಲೆಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

error: Content is protected !!
Scroll to Top