ಸನಾತನ ಧರ್ಮ ನಿರ್ಮೂಲನೆಯಾಗಬೇಕೆಂದು ನಿರಂತರ ಹೇಳುತ್ತೇನೆ : ಉದಯನಿಧಿ ಸ್ಟಾಲಿನ್‌

ವಿವಾದಾತ್ಮಕ ಹೇಳಿಕೆ ಸಮರ್ಥಿಸಿಕೊಂಡ ಡಿಎಂಕೆ ಸಚಿವ

ಚೆನ್ನೈ: ಸನಾತನ ಧರ್ಮದ ನಿರ್ಮೂಲನೆಯಾಗಬೇಕೆಂಬ ಹೇಳಿಕೆಗೆ ನಾನು ಈಗಲೂ ಬದ್ಧ ಎಂದು ತಮಿಳುನಾಡು ಸಚಿವ ಮತ್ತು ಡಿಎಂಕೆ ಯುವ ಘಟಕದ ಕಾರ್ಯದರ್ಶಿ ಉದಯನಿಧಿ ಸ್ಟಾಲಿನ್ ನೀಡಿದ್ದಾರೆ. ಈ ಕುರಿತು ವಿವಾದ ತೀವ್ರಗೊಂಡ ಬಳಿಕ ಪ್ರತಿಕ್ರಿಯಿಸಿದ ಉದಯನಿಧಿ, ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ನಿರಂತರವಾಗಿ ಹೇಳುತ್ತೇನೆ ಎಂದರು.
ದ್ರಾವಿಡ ವಿಚಾರಧಾರೆ ಬದಲಾವಣೆಗೆ ಒಗ್ಗಿಕೊಳ್ಳುತ್ತದೆ. ದ್ರಾವಿಡ ಪರಿಕಲ್ಪನೆ ಎಲ್ಲರನ್ನು ಸಮಾನವಾಗಿ ಕಾಣುತ್ತದೆ. ಆದರೆ ಸನಾತನ ಧರ್ಮ ಶಾಶ್ವತ ಪರಿಕಲ್ಪನೆ ಹೊಂದಿದ್ದು ಬದಲಾವಣೆಯನ್ನು ಒಪ್ಪುವುದಿಲ್ಲ. ನಾನು ಸನಾತನ ಧರ್ಮದ ನಿರ್ಮೂಲನೆಗೆ ಕರೆಕೊಟ್ಟಿದ್ದೇನೆಯೇ ಹೊರತು ಜನರ ನರಮೇಧಕ್ಕಲ್ಲ ಎಂದರು. ದ್ರಾವಿಡಂ ನಿರ್ಮೂಲನೆಯಾಗಬೇಕು ಎಂದು ಕೆಲವರು ಹೇಳುತ್ತಿದ್ದಾರೆ. ಇದರರ್ಥ ಡಿಎಂಕೆ ಕಾರ್ಯಕರ್ತರನ್ನು ಕೊಲ್ಲಬೇಕೆ ಎಂದು ಉದಯನಿಧಿ ಪ್ರಶ್ನಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ‘ಕಾಂಗ್ರೆಸ್ ಮುಕ್ತ ಭಾರತ’ಕ್ಕೆ ಕರೆ ನೀಡುತ್ತಾರೆ. ಆದರೆ ಇದರರ್ಥ ಎಲ್ಲಾ ಕಾಂಗ್ರೆಸ್ ನಾಯಕರನ್ನು ಕೊಲ್ಲಬೇಕು ಎಂದಲ್ಲ. ಬಿಜೆಪಿಗೆ ಸತ್ಯಗಳನ್ನು ತಿರುಚಿ ಸುಳ್ಳು ಹೇಳುವುದೇ ಅಭ್ಯಾಸ. ಬಿಜೆಪಿ ವಿಪಕ್ಷಗಳ ಮೈತ್ರಿ ಕಂಡು ದಂಗಾಗಿದೆ. ಇದೇ ಕಾರಣಕ್ಕೆ ಜನರ ಮನಸ್ಸನ್ನು ಬೇರೆಡೆ ತಿರುಗಿಸಲು ಸುಳ್ಳು ಕಥೆ ಕಟ್ಟುತ್ತಿದೆ. ಆದರೆ ನಾನು ಇಂತಹ ಗೊಡ್ಡು ಬೆದರಿಕೆಗೆ ಜಗ್ಗುವುದಿಲ್ಲ ಎಂದಿದ್ದಾರೆ.

error: Content is protected !!
Scroll to Top