ಹಿಂದೂ ಧರ್ಮದ ಸಂಪೂರ್ಣ ನಿರ್ಮೂಲನೆಯೇ ವಿರೋಧ ಪಕ್ಷದ ಅಜೆಂಡಾ : ಬಿಜೆಪಿ ವಾಗ್ದಾಳಿ
ದೆಹಲಿ : ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಇತ್ತೀಚೆಗೆ ಸನಾತನ ಧರ್ಮದ ಬಗ್ಗೆ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ದೊಡ್ಡ ವಿವಾದವನ್ನು ಹುಟ್ಟುಹಾಕಿದೆ. ಇದಕ್ಕೆ ಪ್ರತ್ಯುತ್ತರ ನೀಡಿರುವ ಬಿಜೆಪಿಯು, ವಿರೋಧ ಪಕ್ಷದ ಮೈತ್ರಿಯ ಪ್ರಾಥಮಿಕ ಉದ್ದೇಶವೇ ಹಿಂದೂ ಧರ್ಮವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದಾಗಿದೆ ಎಂದು ಹೇಳಿದೆ. ಉದಯನಿಧಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್‌ಗೆ ಒತ್ತಾಯಿಸಿದೆ. ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ, ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ, ಉದಯನಿಧಿ ವಿರುದ್ಧ ವಾಗ್ದಾಳಿ ನಡೆಸಿದರು ಮತ್ತು ವಿವಾದಾತ್ಮಕ ಹೇಳಿಕೆಯು ಗಮನಾರ್ಹ ಪರಿಣಾಮಗಳನ್ನು ಬೀರಿದೆ ಎಂದು ಹೇಳಿದ್ದಾರೆ. ಈ ಕಾಮೆಂಟ್‌ಗಳು ಪ್ರತಿಪಕ್ಷಗಳ ಒಕ್ಕೂಟದ ನೈಜ ಸ್ವರೂಪವನ್ನು ಅನಾವರಣಗೊಳಿಸಿವೆ ಎಂದು ತ್ರಿವೇದಿ ಹೇಳಿದರು.
ಅಮಿತ್ ಶಾ ಕೂಡ ಹೇಳಿಕೆಯನ್ನು ವಿರೋಧಿಸಿದ್ದು, ಸನಾತನ ಧರ್ಮ ಎಂಬುದು ಜನರ ಮನಸ್ಸು, ಹೃದಯದಲ್ಲಿದೆ ಅದನ್ನು ಯಾರಿಂದಲೂ ನಿರ್ಮೂಲನೆ ಮಾಡಲಾಗದು. ಪ್ರತಿಪಕ್ಷಗಳು ಮತಬ್ಯಾಂಕ್, ರಾಜಕೀಯ ಉದ್ದೇಶಗಳಿಗಾಗಿ ಇಲ್ಲಸಲ್ಲದ ಹೇಳಿಕೆಯನ್ನು ನೀಡುತ್ತಿವೆ ಎಂದಿದ್ದಾರೆ. ಇಂಡಿಯಾ ಒಕ್ಕೂಟವನ್ನು ದುರಹಂಕಾರದ ಮೈತ್ರಿ ಎಂದು ಉಲ್ಲೇಖಿಸಿರುವ ಅಮಿತ್ ಶಾ, ಪ್ರತಿಪಕ್ಷಗಳು ಸನಾತನ ಧರ್ಮವನ್ನು ಟೀಕಿಸಿದಷ್ಟೂ ಅವರ ವಿಶ್ವಾಸಾರ್ಹತೆ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.