ಕಗ್ಗದ ಸಂದೇಶ-ಸಾಧನೆಯೆಂಬ ಮೇರು ಪರ್ವತ ಏರಲು ಇವೆ ಹಲವು ದಾರಿ…

ಮೇರು ಪರ್ವತಕಿಹವು ನೂರೆಂಟು ಶಿಖರಗಳು|
ದಾರಿ ನೂರಿರಬಹುದು, ನಿಲುವ ಕಡೆ ನೂರು||
ಸಾರು ನೀಂ ಯಾತ್ರಿಕರಿಗೆಲ್ಲ ಕೆಳೆಯಾಗಿರುತೆ|
ಮೇರು ಸಂಸ್ಕ್ರತಿಯೆ ಬಲ – ಮಂಕುತಿಮ್ಮ

ಬದುಕೆಂಬ ಮೇರು ಪರ್ವತಕ್ಕೆ ನೂರೆಂಟು ಶಿಖರಗಳಿವೆ. ಈ ಶಿಖರಗಳನ್ನು ತಲುಪಲು ಮಾರ್ಗಗಳು ಕೂಡ ನೂರಾರು ಇರಬಹುದು. ಈ ಪ್ರಯಾಣದ ದಾರಿಯಲ್ಲಿ ನಿಲ್ದಾಣಗಳು ನೂರಾರು ಇವೆ. ಯಾತ್ರಿಕನಾಗಿರುವ ನೀನು ಇತರ ಸಹ ಪ್ರಯಾಣಿಕರೊಂದಿಗೆ ಸ್ನೇಹದೊಂದಿಗೆ ನಡೆ. ಸಂಸ್ಕಾರದ ಸನ್ನಡತೆಯೊಂದಿಗೆ ಪರಸ್ಪರ ನೆರವಾಗುತ್ತಾ ಸಾಗಿದಾಗಲೇ ಬಲ ಎನ್ನುವ ಬದುಕಿನ ಪಯಣದ ಸಾರ್ಥಕತೆಯನ್ನು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಸುಂದರವಾಗಿ ಚಿತ್ರಿಸಿದ್ದಾರೆ.
‌‌ ʼಯಾತ್ರಿಕರು ನಾವು ದಿವ್ಯ ಕ್ಷೇತ್ರವೀ ಲೋಕ’ ಎಂಬಂತೆ ಎಲ್ಲರೂ ಈ ಯಾತ್ರಿಕರಾಗಿ ಈ ಭುವಿಗೆ ಬಂದವರು. ಯಾತ್ರೆಯಲ್ಲಿ ಸಹ ಪ್ರಯಾಣಿಕರೊಂದಿಗೆ ಗೆಳೆತನ ಹೊಂದಿ ಪರಸ್ಪರ ಸಹಕರಿಸುತ್ತಾ ಸಾಗಿದಾಗಲೇ ಯಾತ್ರೆ ಸುಗಮವಾಗುವುದು. ಮೇರು ಪರ್ವತವೆಂದರೆ ಉನ್ನತವಾದ ಸ್ಥಾನ ಎಂದರ್ಥ. ಈ ಶ್ರೇಷ್ಠವಾದ ಗಮ್ಯವನ್ನು ತಲುಪುವ ದಾರಿಗಳು ಹಲವು ಇದ್ದರೂ ನಮಗೆ ಸರಿಹೊಂದುವ ಯೋಗ್ಯ ದಾರಿಯನ್ನು ಕಂಡುಕೊಳ್ಳಬೇಕು. ಸಮುದ್ರದಿಂದ ಆವಿಯಾದ ನೀರು ಮತ್ತೆ ಮಳೆಯ ರೂಪದಲ್ಲಿ ಬಂದು ನದಿಯಾಗಿ ಹರಿಯುವಾಗ ತನ್ನ ಇಕ್ಕೆಲಗಳಲ್ಲಿನ ಹಸಿರಿನ ಸಿರಿಗೆ ಆಸರೆಯಾಗುತ್ತಾ ಹರಿದು ಸಮುದ್ರವನ್ನು ಸೇರುವಂತೆ ಮಾನವನು ಕೂಡ ತನ್ನ ಉನ್ನತವಾದ ಗುರಿಯತ್ತಾ ಸಾಗುವಾಗ ನೆರೆಯವರಿಗೆ ನೆರವಿನ ನೆರಳಾಗಬೇಕು.ತನ್ನ ಸುತ್ತಣ ಸಮಾಜದೊಂದಿಗೆ ಪ್ರೀತಿಯ ಬಾಂಧವ್ಯವನ್ನು ಹೊಂದಿದಾಗಲೇ ಬದುಕಿನ ಪಯಣ ಹಗುರಾಗುವುದು.

ಪನ್ನೀರ ಕಂಪಾಗು ಆಯಾಸ ಬೇಸರಿಕೆಗೆ|
ನೀ ಮರಳಿ ದನಿಯಾಗು ಕಾತರತೆ ನೆಲೆಗೆ|
ಜೀವ ಅಂಬಿಗನಾಗು ಭವನದಿಯ ದಾಟಲಿಕೆ|
ನೀ ಲೊಕ ಸಖನಾಗು-ಮುದ್ದುರಾಮ||

 ಎಂಬ ಕವಿ ಕೆ. ಶಿವಪ್ಪನವರ ನುಡಿಯಂತೆ ಪನ್ನಿರಿನಂತೆ  ಕಂಪನ್ನು ಬೀರಿ ಆಯಾಸ ಮತ್ತು ಬೇಸರಿಕೆಯನ್ನು ಕಳೆಯಬೇಕು. ಜೀವನದ ನದಿಯನ್ನು ದಾಟಲು ಅಂಬಿಗನಾಗಬೇಕು. ಎಲ್ಲರೊಂದಿಗಿದ್ದು, ಎಲ್ಲರಿಂದ ಕಲಿತು; ನಿತ್ಯ ಸತ್ವವನ್ನು ಹೀರಿ; ನಂಟಿನ ಗಂಟನ್ನು ಬಿಡಿಸಿಕೊಂಡು ಸಾಗಬೇಕು. ಸಂಸ್ಕಾರಯುತವಾದ ಸನ್ನಡತೆಯ ಸನ್ಮಾರ್ಗದಲ್ಲಿ ಉನ್ನತವಾದ  ಗುರಿಯೆಡೆಗೆ ದೃಢತೆಯಿಂದ ಮುನ್ನಡೆದಾಗಲೇ ಜೀವನ ಸಾರ್ಥಕವಾಗುವುದಲ್ಲವೆ?






























































































































































error: Content is protected !!
Scroll to Top