ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುತ್ತದೆಯೇ ಸರಕಾರ?
ಹೊಸದಿಲ್ಲಿ: ಕೇಂದ್ರ ಸರಕಾರ ಈ ತಿಂಗಳ 18ರಿಂದ 22ರವರೆಗೆ ದಿಢೀರನೆ ಸಂಸತ್ತಿನ ವಿಶೇಷ ಅಧಿವೇಶನ ಕರೆದಿರುವುದು ಅನೇಕ ಊಹಾಪೋಹಗಳಿಗೆ ಕಾರಣವಾಗಿದೆ. ಒಂದೆಡೆ ಗಣೇಶ ಹಬ್ಬದ ನಡುವೆ ಅಧಿವೇಶನ ಕರೆದಿದ್ದಕ್ಕಾಗಿ ಪ್ರತಿಪಕ್ಷಗಳು ಕಿಡಿಕಾರುತ್ತಿವೆ. ಇನ್ನೊಂದೆಡೆ ಏನನ್ನು ಚರ್ಚಿಸಲು ಅಧಿವೇಶನ ಕರೆಯಲಾಗಿದೆ ಎಂಬ ಮಾಹಿತಿ ನೀಡದಿರುವುದರಿಂದ ಅಧಿವೇಶನದ ಬಗ್ಗೆ ಕುತೂಹಲ ಮೂಡಿದೆ.
ಸಾಮಾನ್ಯವಾಗಿ ಮಹತ್ತರ ವಿಚಾರಗಳಿದ್ದರೆ ಮಾತ್ರ ವಿಶೇಷ ಅಧಿವೇಶನ ಕರೆಯಲಾಗುತ್ತಿದೆ. ಇದೀಗ ಸೆ.18ರಿಂದ ನಡೆಯುವ ವಿಶೇಷ ಅಧಿವೇಶನದಲ್ಲಿ ಅಂಥ ಮಹತ್ತರ ವಿಚಾರ ಏನಿರಬಹುದು ಎಂಬ ಕುತೂಹಲ ಜನರಲ್ಲಿ ಮೂಡಿದೆ. ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಮಾಡಲು ವಿಶೇಷ ಅಧಿವೇಶನ ಕರೆಯಲಾಗಿದೆ ಎಂಬ ಸುದ್ದಿಯೊಂದು ವ್ಯಾಪಕವಾಗಿ ಚರ್ಚೆಯಲ್ಲಿದೆ.
ವಿಶೇಷ ಅಧಿವೇಶನ ನಡೆಯಲಿರುವ ಕುರಿತು ತಿಳಿಸಿರುವ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಯಾವ ಕಾರಣಕ್ಕೆ ಅಧಿವೇಶನ ನಡೆಯಲಿದೆ ಎಂಬುದನ್ನು ಮಾತ್ರ ಬಹಿರಂಗಪಡಿಸಿಲ್ಲ. ಐದು ಕಲಾಪಗಳುಳ್ಳ ವಿಶೇಷ ಅಧಿವೇಶನವನ್ನು ಸೆಪ್ಟೆಂಬರ್ 18ರಿಂದ 22 ರವರೆಗೆ ನಡೆಸಲಾಗುವುದು. ಈ ಅಮೃತ ಕಾಲದ ನಡುವೆ ಸಂಸತ್ತಿನಲ್ಲಿ ಅರ್ಥಪೂರ್ಣ ಚರ್ಚೆಗಾಗಿ ಕಾಯುತ್ತಿದ್ದೇನೆ ಎಂದಷ್ಟೇ ಟ್ವೀಟ್ ಮಾಡಿದ್ದಾರೆ. ಆದರೆ, ಸಂಸತ್ತಿನ ವಿಶೇಷ ಅಧಿವೇಶನದ ಕಾರ್ಯಸೂಚಿಯನ್ನು ಬಹಿರಂಗಪಡಿಸಿಲ್ಲ.
ಸೆ.19ರಿಂದ ಹತ್ತು ದಿನಗಳ ಗಣೇಶ ಹಬ್ಬ ಶುರುವಾಗಲಿದ್ದು, ಇದೇ ಸಮಯದಲ್ಲಿ ವಿಶೇಷ ಅಧಿವೇಶನ ನಡೆಸುವ ನಿರ್ಧಾರಕ್ಕೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಈ ಕುರಿತು ಮಾತನಾಡಿರುವ ಶಿವಸೇನೆಯ ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ, ಭಾರತದ ಪ್ರಮುಖ ಹಬ್ಬವಾದ ಗಣೇಶ ಚತುರ್ಥಿಯ ಸಮಯದಲ್ಲಿ ಅಧಿವೇಶನವನ್ನು ಕರೆಯಲಾಗಿರುವುದು ದುರದೃಷ್ಟಕರ. ಈ ವಿಶೇಷ ಸಭೆಯ ಕರೆ ಹಿಂದೂ ಭಾವನೆಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.
ಆಡಳಿತಾರೂಢ ಬಿಜೆಪಿ ವಿರುದ್ಧ ಒಗ್ಗಟ್ಟಿನಿಂದ ಹೋರಾಡಲು ಮೂರನೇ ಸುತ್ತಿನ ಸಮಾಲೋಚನೆಗಾಗಿ ವಿರೋಧ ಪಕ್ಷಗಳ ಒಕ್ಕೂಟವಾದ ‘ಇಂಡಿಯಾ’ ಸಭೆ ನಡೆಸಲು ಮುಂಬೈನಲ್ಲಿ ಸೇರಿರುವ ನಡುವೆಯೇ ಕೇಂದ್ರ ಸರ್ಕಾರದಿಂದ ಸಂಸತ್ ವಿಶೇಷ ಅಧಿವೇಶನದ ಘೋಷಣೆ ಹೊರಬಿದ್ದಿದೆ.






























































