ತಾಲೂಕು ಪಂಚಾಯತ್‌ನಲ್ಲಿ 169ನೇ ನಾರಾಯಣ ಗುರುಗಳ ಜಯಂತಿ

ಅರ್ಹತೆಗಳು ಮುಂದುವರಿಯಬೇಕೆ ಹೊರತು ಜಾತಿ ವ್ಯವಸ್ಥೆಯಲ್ಲ – ಸುನಿಲ್‌ ಕುಮಾರ್

ಕಾರ್ಕಳ : ಸಮಾಜದಲ್ಲಿ ಜಾತಿ, ಬಣ್ಣ, ಧರ್ಮದ ಆಧಾರದಲ್ಲಿ ಮೇಲು- ಕೀಳು ಎಂಬ ತಾರತಮ್ಯ ರಾರಾಜಿಸುತ್ತಿದ್ದ ಸಂದರ್ಭ ಯಾವುದೇ ಕ್ರಾಂತಿಕಾರಿ ಹೋರಾಟ ನಡೆಸದೆ ಶಿಕ್ಷಣ, ಆಧ್ಯಾತ್ಮಿಕ ತತ್ವಗಳಂತಹ ಸುಧಾರಣಾ ಮಾರ್ಗದ ಮೂಲಕ ನಾರಾಯಣ ಗುರುಗಳು ಸಮಾಜದ ಅವ್ಯವಸ್ಥೆಯನ್ನು ದೂರ ಮಾಡಲು ಪ್ರಯತ್ನಿಸಿದರು ಎಂದು ಶಾಸಕ ವಿ. ಸುನಿಲ್‌ ಕುಮಾರ್‌ ಅಭಿಪ್ರಾಯಪಟ್ಟರು.

ಅವರು ಆ. 31 ರಂದು ತಾಲೂಕು ಪಂಚಾಯತ್‌ನಲ್ಲಿ ನಡೆದ ನಾರಾಯಣ ಗುರುಗಳ 169ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಯಾವ ಸಾಮಾಜಿಕ, ಧಾರ್ಮಿಕ ವ್ಯವಸ್ಥೆಯಿಂದ ಸಮಾಜದ ಒಂದು ವರ್ಗ ವಂಚಿತವಾಗಿದೆಯೋ, ಅವರಿಗೆ ಅಂತಹ ವ್ಯವಸ್ಥೆಯನ್ನು ನಾನು ಕಲ್ಪಿಸುತ್ತೇನೆ ಎಂದ ನಾರಾಯಣ ಗುರುಗಳು ಅದರಂತೆ ಅವರು ಶೋಷಿತರಿಗಾಗಿ ದೇವಸ್ಥಾನ ನಿರ್ಮಾಣ, ಶಿಕ್ಷಣ ನೀಡುವ ಸಮಾಜವನ್ನು ದುರ್ಬಲಗೊಳಿಸುವ ಜಾತಿ ವ್ಯವಸ್ಥೆಯನ್ನು ದೂರಗೊಳಿಸುವ ಪ್ರಯತ್ನ ಮಾಡಿದ್ದಾರೆ. ಇಂತಹ ಸುಧಾರಣಾವಾದಿಗಳ ಸಂದೇಶ ಪ್ರಸ್ತುತ ಸಮಾಜ ಶಾಂತಿಗೆ ಪ್ರೇರಣೆ. ಗುರುಗಳ ಆಶಯದಂತೆ ಜಾತಿ ವ್ಯವಸ್ಥೆಯ ಬದಲು ವ್ಯಕ್ತಿಯ ಅರ್ಹತೆಗಳು ಅವಕಾಶಕ್ಕೆ ದಾರಿಯಾಗಲಿ ಎಂದರು.

ನಾರಾಯಣ ಗುರುಗಳಿಂದ ಮನುಕುಲಕ್ಕೆ ಕಾಯಕಲ್ಪ – ಡಿ. ಆರ್‌. ರಾಜು
ಕಾರ್ಕಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಡಿ. ಆರ್‌. ರಾಜು ಮಾತನಾಡಿ, ನಾರಾಯಣ ಗುರುಗಳು ಸಮಾಜವನ್ನು ಮೇಲ್ಪಂಕ್ತಿಗೆ ಕೊಂಡೊಯ್ದ ಶ್ರೇಷ್ಠ ಸುಧಾರಕ. ಅವರಿಂದ ಅಜ್ಞಾನದ ಅಂಧಕಾರದಲ್ಲಿದ್ದ ಮನುಕುಲಕ್ಕೆ ಕಾಯಕಲ್ಪ ದೊರೆತಿದೆ. ಗುರುಗಳು ಕೈಗೊಂಡ ಸಮಾಜ ಸುಧಾರಣಾ ಕಾರ್ಯಗಳು ಕೇರಳಕ್ಕೆ ಮಾತ್ರ ಸೀಮಿತವಾಗದೆ, ವಿಶ್ವದೆಲ್ಲೆಡೆ ಪಸರುವ ಮೂಲಕ ಮಾನವ ಧರ್ಮವನ್ನು ಲೋಕಕ್ಕೆ ಸಾರಿದೆ ಎಂದರು.

ನಾರಾಯಣ ಗುರುಗಳ ಕುರಿತು ಉಪನ್ಯಾಸ ನೀಡಿದ ಶಿರಡಿ ಸಾಯಿ ಕಾಲೇಜಿನ ಪಿಆರ್‌ಒ ಆಶೀಶ್‌ ಶೆಟ್ಟಿ, ದೇವರು ಮತ್ತು ಧರ್ಮದ ಹೆಸರಿನಲ್ಲಿ ಅಧರ್ಮ ನಡೆಯುತ್ತಿದ್ದ ಸಂದರ್ಭ ಅದನ್ನು ಮೌನ ಕ್ರಾಂತಿಯ ಮೂಲಕ ವಿರೋಧಿಸಿದವರು ನಾರಾಯಣ ಗುರುಗಳು. ವಿಶ್ವ ಮಾನವ ಧರ್ಮ ಬೋಧನೆಯ ಮೂಲಕ ಲೋಕ ಶಾಂತಿ ಬಯಸಿದ ನಾರಾಯಣ ಗುರುಗಳ ಜೀವನ ಸಮಾಜಕ್ಕೆ ಮಾದರಿ ಎಂದರು.

ಪುರಸಭಾ ಮುಖ್ಯಾಧಿಕಾರಿ ರೂಪಾ ಶೆಟ್ಟಿ, ಡಿವೈಎಸ್‌ಪಿ ಅರವಿಂದ ಕಲಗುಜ್ಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಹಶೀಲ್ದಾರ್‌ ಅನಂತಶಂಕರ ಬಿ. ಸ್ವಾಗತಿಸಿದರು. ಅಜೆಕಾರು ಹೋಬಳಿ ಕಂದಾಯ ನೀರಿಕ್ಷಕ ರಿಯಾಜ್‌ ಮಹಮ್ಮದ್‌ ಕಾರ್ಯಕ್ರಮ ನಿರೂಪಸಿದರು. ತಾ. ಪಂ. ಕಾರ್ಯನಿರ್ವಹಣಾಧಿಕಾರಿ ಗುರುದತ್ತ್‌ ಎಂ.ಎನ್‌. ವಂದಿಸಿದರು.











































error: Content is protected !!
Scroll to Top