ಚಾಂಪಿಯನ್ ಪಟ್ಟಕ್ಕೆ ನೀರಜ್- ಅರ್ಷದ್ ನಡುವೆ ಪೈಪೋಟಿ
ಬುಡಾಪೆಸ್ಟ್ : ಹಂಗೇರಿಯ ರಾಜಧಾನಿ ಬುಡಾಪೆಸ್ಟ್‌ನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಮತ್ತು ಪಾಕಿಸ್ಥಾನ ನಡುವಿನ ಅಂತಿಮ ಹಣಾಹಣಿಗೆ ವೇದಿಕೆ ಸಜ್ಜಾಗಿದೆ. ಭಾನುವಾರ ಒಲಿಂಪಿಕ್ ಚಾಂಪಿಯನ್ ಮತ್ತು ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಮತ್ತು ಪಾಕಿಸ್ಥಾನದ ಜಾವೆಲಿನ್ ಸ್ಟಾರ್ ಅರ್ಷದ್ ನದೀಮ್ ವಿಶ್ವ ಚಾಂಪಿಯನ್ ಪಟ್ಟಕ್ಕೇರುವ ಸಲುವಾಗಿ ಮುಖಾಮುಖಿಯಾಗಲಿದ್ದಾರೆ. ಭಾರತದ ನೀರಜ್ ಅವರಲ್ಲದೆ, ಡಿ.ಪಿ ಮನು (81.31) ಮತ್ತು ಕಿಶೋರ್ ಜೆನಾ (80.55) ಕೂಡ ಫೈನಲ್‌ನಲ್ಲಿ ಶಕ್ತಿ ಪ್ರದರ್ಶಿಸಲಿದ್ದಾರೆ. ಮೊದಲ ಬಾರಿಗೆ ಭಾರತದ ಮೂವರು ಅಥ್ಲೀಟ್‌ಗಳು ಫೈನಲ್‌ನಲ್ಲಿ ಭಾಗವಹಿಸುತ್ತಿರುವುದು ಸ್ಪರ್ಧೆಯ ರೋಚಕತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಪುರುಷರ ಜಾವೆಲಿನ್ ಎಸೆತದ ಅರ್ಹತಾ ಸುತ್ತಿನ ಪಂದ್ಯವು ಶುಕ್ರವಾರ ನಡೆಯಿತು. ಇದರಲ್ಲಿ ಭಾರತದ ಮೂವರು ಮತ್ತು ಪಾಕಿಸ್ಥಾನದ ಅರ್ಷದ್ ನದೀಮ್ ಭಾಗವಹಿಸಿದ್ದರು. ಹಾಲಿ ವಿಶ್ವ ಚಾಂಪಿಯನ್ ಆಂಡರ್ಸನ್ ಪೀಟರ್ಸ್ ಮತ್ತು ಜೆಕ್ ಗಣರಾಜ್ಯದ ಜಾಕೋಬ್ ವಾಡ್ಲೆಚ್ ಅವರಂತಹ ಸ್ಟಾರ್ ಜಾವೆಲಿನ್ ಎಸೆತಗಾರರೂ ಸಹ ಇದರಲ್ಲಿ ಭಾಗವಹಿಸಿದ್ದರು.
ವಾಸ್ತವವಾಗಿ ಈ ಚಾಂಪಿಯನ್ಶಿಪ್ನ ಜಾವೆಲಿನ್ ವಿಭಾಗದಲ್ಲಿ ಫೈನಲ್‌ಗೆ ಅರ್ಹತೆ ಪಡೆಯಲು 83 ಮೀಟರ್ ದೂರ ಜಾವೆಲಿನ್ ಎಸೆಯಬೇಕಿತ್ತು. ನಿರೀಕ್ಷೆಗೆ ತಕ್ಕಂತ ಪ್ರದರ್ಶನ ನೀಡಿದ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದ ನೀರಜ್ ಮೊದಲ ಎಸೆತದಿಂದಲೇ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆದರು. ಒಲಿಂಪಿಕ್ ಚಾಂಪಿಯನ್‌ನ ಈ ಥ್ರೋ ನೇರವಾಗಿ 88.77 ಮೀಟರ್ ದೂರ ಕ್ರಮಿಸಿತು. ಇದು ನೀರಜ್ ಅವರ ಈ ಸೀಸನ್ ಅತ್ಯುತ್ತಮ ಥ್ರೋ ಕೂಡ ಆಗಿದ್ದು, ಇದಾದ ನಂತರ ನೀರಜ್ ಯಾವುದೇ ಥ್ರೋಗಳನ್ನು ಮಾಡದೆ ನೇರವಾಗಿ ಫೈನಲ್‌ಗೆ ಟಿಕೆಟ್ ಖಚಿತಪಡಿಸಿಕೊಂಡರು.















































































