ಅವಹೇಳನ ಮಾಡುವವರು ಕ್ಷೇತ್ರಕ್ಕೆ ಬರುವುದು ಬೇಡ ಎಂಬ ನಿರ್ಣಯ
ಧರ್ಮಸ್ಥಳ : ಹತ್ಯೆಗೀಡಾದ ಸೌಜನ್ಯಾಳಿಗೆ ನ್ಯಾಯ ಕೊಡಿಸಲು ನಡೆಯುತ್ತಿರುವ ಹೋರಾಟದಲ್ಲಿ ಧರ್ಮಸ್ಥಳ ಕ್ಷೇತ್ರ ಮತ್ತು ಖಾವಂದರಾದ ಡಾ| ಡಿ.ವೀರೇಂದ್ರ ಹೆಗ್ಗಡೆಯವರನ್ನು ಅವಹೇಳನ ಮಾಡುತ್ತಿರುವವರ ವಿರುದ್ಧ ಧರ್ಮಸ್ಥಳದ ಗ್ರಾಮಸ್ಥರು ತಿರುಗಿ ಬಿದ್ದಿದ್ದಾರೆ.
ಗುರುವಾರ ಧರ್ಮಸ್ಥಳದಲ್ಲಿ ಸುದ್ದಿಗೋಷ್ಠಿ ನಡೆಸಿದ ಬಳಿಕ ಧರ್ಮಸ್ಥಳವನ್ನು ಅವಹೇಳನ ಮಾಡುವವರು ಕ್ಷೇತ್ರಕ್ಕೆ ಬರುವುದೇ ಬೇಡ ಎಂಬ ನಿರ್ಣಯ ಕೈಗೊಳ್ಳಲಾಗಿದ್ದು, ಧರ್ಮಸ್ಥಳ ಪೊಲೀಸ್ ಠಾಣೆ ಮತ್ತು ಗ್ರಾಮ ಪಂಚಾಯತ್ಗೆ ಈ ಕುರಿತು ಮನವಿ ಸಲ್ಲಿಸಲಾಗಿದೆ.
ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಅವರ ಬೆಂಬಲಿಗರು ಧರ್ಮಸ್ಥಳಕ್ಕೆ ಗುಂಪಾಗಿ ಬಂದು ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆ ತರಲು ಸಂಚು ರೂಪಿಸಿದ್ದಾರೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸಂಘಟಿತರಾಗಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ರೌಡಿಶೀಟರ್ ಆಗಿರುವ ತಿಮರೋಡಿ ಹೋರಾಟದ ನೆಪದಲ್ಲಿ ಧರ್ಮಸ್ಥಳವನ್ನು ಗುರಿ ಮಾಡಿಕೊಂಡು ಸಾರ್ವಜನಿಕ ಸಭೆ, ಪತ್ರಿಕಾಗೋಷ್ಠಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ವಿಚಾರಗಳನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಹೋರಾಟದ ಹೆಸರಿನಲ್ಲಿ ಧರ್ಮಸ್ಥಳ ಮತ್ತು ಸಮಾಜದ ಸಾಮರಸ್ಯ ಮತ್ತು ಶಾಂತಿ ಕದಡುತ್ತಿರುವುದು ಖೇದಕರ. ಕ್ಷೇತ್ರವನ್ನು ಅವಹೇಳನ ಮಾಡುವವರಿಗೆ ಇಲ್ಲಿಗೆ ಬರುವ ಯಾವ ಹಕ್ಕು ಇಲ್ಲ, ಇದು ನಂಬಿಕೆಯುಳ್ಳವರ ಕ್ಷೇತ್ರ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶ್ರೀನಿವಾಸ ರಾವ್ ಧರ್ಮಸ್ಥಳ, ಸಂದೀಪ್ ರೈ, ಛಾಯಾ, ಶಾಂಭವಿ ರೈ, ವಕೀಲ ಕೇಶವ ಬೆಳಾಲು, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಭಾಕರ ರಾವ್, ದಿವಾಕರ ರಾವ್, ವಾಹನ ಚಾಲಕ-ಮಾಲಕರ ಸಂಘದ ಅಧ್ಯಕ್ಷ ವಿಠಲ ಶೆಟ್ಟಿ ಮತ್ತಿತರರು ಹೋರಾಟದ ನೆಪದಲ್ಲಿ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಿಡಿ ಕಾರಿದ್ದಾರೆ.
ಇಡೀ ದೇಶದ ನಂಬಿಕೆ ಮತ್ತು ಶ್ರದ್ಧಾಭಕ್ತಿಯ ಕೇಂದ್ರವಾಗಿರುವ ಧರ್ಮಸ್ಥಳವನ್ನು ಜನ ಸತ್ಯ, ಧರ್ಮ ಮತ್ತು ನ್ಯಾಯದ ನೆಲೆವೀಡು ಎಂದು ನಂಬಿದ್ದಾರೆ. ಇಂಥ ಕ್ಷೇತ್ರದ ಪಾವಿತ್ರ್ಯ ಕಾಪಾಡಲು ಯಾವುದೇ ತ್ಯಾಗ, ಬಲಿದಾನ ಮತ್ತು ಹೋರಾಟಕ್ಕೆ ಸಿದ್ದ ಎಂದು ಗ್ರಾಮಸ್ಥರು ಸಂಕಲ್ಪ ಮಾಡಿದ್ದಾರೆ.































































