ಠಾಣೆಗೆ ಕರೆದೊಯ್ಯುತ್ತಿದ್ದಾಗ ಪೊಲೀಸ್ ವಾಹನದಲ್ಲಿ ಅಸ್ವಸ್ಥ
ಉಡುಪಿ : ಪೊಲೀಸರು ಬಂಧಿಸಲು ಬಂದಾಗ ಆರೋಪಿ ಕೀಟನಾಶಕ ಸೇವಿಸಿ ಅಸ್ವಸ್ಥನಾದ ಘಟನೆ ಉಡುಪಿಯಲ್ಲಿ ಸಂಭವಿಸಿದೆ.
ಉಡುಪಿಯ ಶಿವಳ್ಳಿಯಲ್ಲಿರುವ ಬಾರೊಂದರಲ್ಲಿ ವೈಟರ್ ಆಗಿರುವ ಮುಲ್ಕಿ ಸಮೀಪದ ಮುಚ್ಚೂರು ಗ್ರಾಮದ ಕರುಣಾಕರ ಶೆಟ್ಟಿ (44) ಕೀಟನಾಶಕ ಸೇವಿಸಿರುವ ಆರೋಪಿ. ಕ್ರಿಮಿನಲ್ ಪ್ರಕರಣದಲ್ಲಿ ನ್ಯಾಯಾಲಯದ ವಾರಂಟ್ ಪ್ರಕಾರ ಬಜಪೆ ಪೊಲೀಸರು ಅವನನ್ನು ಬಂಧಿಸಲು ಬಾರ್‌ಗೆ ಹೋಗಿದ್ದರು. ಈ ಸಂದರ್ಭ ಆರೋಪಿ ಬಟ್ಟೆ ಬದಲಾಯಿಸಿ ಬರುತ್ತೇನೆ ಎಂದು ಹೇಳಿ ಮಹಡಿಯಲ್ಲಿರುವ ವಿಶ್ರಾಂತಿ ಕೊಠಡಿಗೆ ಹೋಗಿ ಯಾವುದೋ ಕೀಟನಾಶಕ ಸೇವಿಸಿದ್ದಾನೆ.
ಪೊಲೀಸ್ ವಾಹನದಲ್ಲಿ ಪ್ರಯಾಣಿಸುವಾಗ ಮಾರ್ಗ ಮಧ್ಯೆ ಕರುಣಾಕರ ಶೆಟ್ಟಿ ಅಸ್ವಸ್ಥಗೊಂಡಿದ್ದು, ಕೂಡಲೇ ಅವನನ್ನು ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರಕ್ಕೊಯದು ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದಾರೆ.















































































