ಅವರು ‘The doors are open’ ಎಂದು ಹೇಳಿದ್ದು ಯಾರಿಗೆ?

ಮಹಾನ್‌ ಉದ್ಯಮಿಯ ಮಾನವೀಯ ಮುಖ

ಭಾರತದ ಉದ್ಯಮರಂಗದ ಉನ್ನತಿಯಲ್ಲಿ ಧೀರೂಭಾಯಿ ಅಂಬಾನಿ ಅವರ ಕೊಡುಗೆಯು ಭಾರಿ ದೊಡ್ಡದು. ರಿಲಯನ್ಸ್ ಕಂಪನಿಯ ಮೂಲಕ ಆರಂಭವಾದ ಅವರ ರೋಚಕವಾದ ಯಶೋಗಾಥೆ ಮುಂದೆ ತ್ರಿವಿಕ್ರಮ ರೂಪದಲ್ಲಿ ಬೆಳೆದು ಅವರು ಬಹು ದೊಡ್ಡದಾದ ಉದ್ಯಮಗಳ ಸಾಮ್ರಾಜ್ಯವನ್ನು ಕಟ್ಟಿದ್ದರು.

ಉದ್ಯೋಗಿಗಳ ಜತೆ ಮಧುರ ಸಂಬಂಧ

ಅವರು ತನ್ನ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ನೌಕರರ ಜೊತೆ ಹೊಂದಿದ್ದ ಮಧುರ ಸಂಬಂಧಗಳ ಬಗ್ಗೆ ನೂರಾರು ನಿದರ್ಶನಗಳು ದೊರೆಯುತ್ತವೆ. ಅವರು ತನ್ನ ಕಂಪನಿಗಳ ಎಲ್ಲ ಹಿರಿಯ, ಕಿರಿಯ ನೌಕರರನ್ನು ಅವರ ಪೂರ್ಣವಾದ ಹೆಸರಿನಿಂದ ಕರೆಯುತ್ತಿದ್ದರು. ಒಬ್ಬ ಪಿಯೋನ್ ಅಥವಾ ಜವಾನನನ್ನು ಕೂಡ ಬಹುವಚನದಿಂದಲೆ ಕರೆಯುತ್ತಿದ್ದರು. ಯಾರನ್ನೂ ನೌಕರ ಎಂದು ಕರೆಯದೆ ನನ್ನ ‘ಯಶಸ್ಸಿನ ಪಾಲುದಾರರು’ (Success Partners) ಎಂದೇ ಕರೆಯುತ್ತಿದ್ದರು!

ಒಮ್ಮೆ ಅವರ PA ರಾಜೀನಾಮೆ ಕೊಟ್ಟು ಹೊರನಡೆದರು

ಒಮ್ಮೆ ಅವರ ಜತೆ ದೀರ್ಘ ಅವಧಿಗೆ ಕೆಲಸ ಮಾಡುತ್ತಿದ್ದ ಅವರ ಆಪ್ತ ಸಹಾಯಕರು (PA) ಯಾವುದೋ ಒಂದು ವಿಷಯಕ್ಕೆ ಧೀರೂಭಾಯಿ ಅವರ ಜತೆ ಗರಂ ಆದರು. ಮನಸ್ತಾಪ ಭಾರಿ ದೊಡ್ಡದಾಯಿತು. ಅವರು ರಾಜೀನಾಮೆ ಕೊಟ್ಟು ಅವರ ಊರಿಗೆ ಹೋದರು. ಅವರನ್ನು ತಡೆಯುವ ಬಹಳ ಪ್ರಯತ್ನವನ್ನು ಧೀರೂಭಾಯಿ ಮಾಡಿದರು. ಆದರೆ ಆ ಆಪ್ತ ಸಹಾಯಕರು ಕೇಳದೆ ಹೊರಗೆ ನಡೆದೇ ಬಿಟ್ಟರು.
ಅವರು ತನ್ನ ಕುಟುಂಬದ ಜತೆಗೆ ಅವರ ಊರಿಗೆ ಹೋಗಿ ಬೇರೆ ಬೇರೆ ಬ್ಯುಸಿನೆಸ್‌ಗಳನ್ನು ಮಾಡಿದರು. ಗಂಡ ಹೆಂಡತಿ ಸೇರಿ ಒಂದು ಕೈಗಾರಿಕೆಯನ್ನು ಕೂಡ ಆರಂಭ ಮಾಡಿದರು. ಆದರೆ ದುರದೃಷ್ಟ ಅವರಿಗಿಂತ ಮುಂದೆ ಇತ್ತು. ಎಲ್ಲ ಬಿಸಿನೆಸ್‌ಗಳು ಕೈಕೊಟ್ಟವು. ಬ್ಯಾಂಕ್ ಸಾಲ ಕೈ ಮೀರಿತು. ಸಾಲಗಾರರ ಉಪಟಳ ಹೆಚ್ಚಾಯಿತು. ಎಲ್ಲ ಉದ್ಯಮ ನಷ್ಟವಾಗಿ ಆ ದಂಪತಿ ಅಕ್ಷರಶಃ ಬೀದಿಗೆ ಬಂದರು. ಬದುಕುವ ಎಲ್ಲ ದಾರಿಗಳೂ ಮುಚ್ಚಿಹೋಗಿದ್ದವು.

PA ಕುಟುಂಬ ಆತ್ಮಹತ್ಯೆಗೆ ಸಿದ್ಧತೆ ಮಾಡಿತು

ಕೊನೆಯದಾಗಿ ಆ ದಂಪತಿ ತಮ್ಮ ಮಕ್ಕಳ ಜತೆ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಮಾಡುತ್ತಾರೆ. ಮಾನಸಿಕವಾಗಿ ಸಾಯಲು ಸಿದ್ಧತೆ ನಡೆಸುತ್ತಾರೆ. ತನ್ನ ಮಕ್ಕಳನ್ನು ಕೂಡ ಸಾಯಿಸುವ ಯೋಚನೆ ಮಾಡುತ್ತಾರೆ. ಅವರಿಗೆ ಬೇರೆ ಯಾವ ದಾರಿ ಕೂಡ ಉಳಿದಿರಲಿಲ್ಲ.

ಸ್ವತಃ ಧೀರೂಭಾಯಿ ಕಾಲ್ ಮಾಡಿ ಹೇಳಿದ್ದೇನು?

ಅದೊಂದು ದಿನ ಸಂಜೆ ಅವರ ಮನೆಯ ನಂಬರಿಗೆ ಒಂದು ಲ್ಯಾಂಡ್ ಫೋನ್ ಕಾಲ್ ಬಂತು. ಆ ಕಡೆಯಿಂದ ಸ್ವತಃ ಧೀರೂಭಾಯಿ ಅಂಬಾನಿ ಮಾತಾಡುತ್ತಿದ್ದರು. ಅವರು ಹೇಳಿದ್ದು ಒಂದೇ ವಾಕ್ಯ, ‘ ಮೈ ಡಿಯರ್ ಫ್ರೆಂಡ್, ದಯವಿಟ್ಟು ಭರವಸೆ ಕಳೆದುಕೊಳ್ಳಬೇಡಿ. The doors are open. You can come back!’
ಆಶ್ಚರ್ಯ ಎಂದರೆ ಧೀರೂಭಾಯಿ ಅವರ ಸಹಾಯ ಕೇಳಿ ಆ ದಂಪತಿ ಎಂದೂ ಕಾಲ್ ಮಾಡಿರಲೇ ಇಲ್ಲ. ತಮ್ಮ ಕಷ್ಟಗಳನ್ನು ಹೇಳಿಕೊಂಡಿರಲಿಲ್ಲ. ಆದರೂ ಆ ಆಪ್ತ ಸಹಾಯಕರು ರಾಜೀನಾಮೆ ಕೊಟ್ಟು ಊರಿಗೆ ಹೋದ ಕ್ಷಣದಿಂದ ಅವರನ್ನು ಧೀರೂಭಾಯಿ ದೂರದಿಂದಲೇ ಗಮನಿಸುತ್ತಿದ್ದರು.
ಈ ಭರವಸೆಯ ಮಾತುಗಳು ಆ ಕುಟುಂಬದ ಕಣ್ಣುಗಳನ್ನು ಒದ್ದೆ ಮಾಡಿದ್ದವು. ಅವರು ಮತ್ತೆ ಧೀರೂಭಾಯಿ ಅವರ ಆಫೀಸಿಗೆ ಹೋಗಿ ಕ್ಷಮೆ ಕೇಳಿದರು ಮತ್ತು ಅವರ ಕೊನೆಯ ಉಸಿರಿನವರೆಗೂ ಅವರ ಆಪ್ತ ಸಹಾಯಕರಾಗಿಯೇ ಮುಂದುವರಿದರು.
ಧೀರೂಭಾಯಿ ಅಂಬಾನಿ ಐಕಾನ್ ಆದದ್ದು ಸುಮ್ಮನೆ ಅಲ್ಲ!





































































































































error: Content is protected !!
Scroll to Top