ಸಾಧನೆಯ ಹಾದಿಯಲ್ಲಿ ಯಶಸ್ಸಿನ ಗೆಲುವಿದೆ – ಮಿತ್ರಪ್ರಭಾ ಹೆಗ್ಡೆ
ಕಾರ್ಕಳ : ನಾವು ಮಾಡಿದಂತಹ ಒಳ್ಳೆಯ ಕೆಲಸಗಳು ಸಾಧನೆಗೆ ಮುನ್ನುಡಿಯಾಗುತ್ತದೆ. ಈ ಸಾಧನೆಯಲ್ಲಿ ಜೀವನದ ಸಾರ್ಥಕತೆ ಅಡಗಿದೆ. ನಮ್ಮ ವ್ಯಕ್ತಿತ್ವ ರೂಪಿಸುವಲ್ಲಿ ತಂದೆ-ತಾಯಿ, ಗುರುಗಳು ಹಾಗೂ ಹಿರಿಯರ ಪಾತ್ರ ಮಹತ್ತರವಾದುದು. ಅವರಿಗೆ ವಿಧೇಯರಾಗಿದ್ದಾಗ ಮಾತ್ರ ನಮ್ಮ ವ್ಯಕ್ತಿತ್ವ ಘನತೆಯನ್ನು ಕಾಯ್ದುಕೊಳ್ಳುತ್ತದೆ ಎಂದು ನಿವೃತ್ತ ಪ್ರಾಂಶುಪಾಲೆ ಮಿತ್ರಪ್ರಭಾ ಹೆಗ್ಡೆ ಅಭಿಪ್ರಾಯಪಟ್ಟರು.
ಅವರು ಇತ್ತೀಚೆಗೆ ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯಲ್ಲಿ ಜರುಗಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಜೀವನದಲ್ಲಿ ಸಾಧನೆಯ ಹಾದಿ ಹೇಗಿರಬೇಕು ಎಂಬ ವಿಚಾರದ ಕುರಿತು ಮಾತನಾಡಿ, ಸಾಧಕರ ಬದುಕಿನ ಹಾದಿಯ ಯಶೋಗಾಥೆಗಳು ಪ್ರೇರಣಾದಾಯಕ. ಸಾಧನೆಯ ಹಾದಿಯಲಿ ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಈ ಅವಕಾಶಗಳೇ ಯಶಸ್ಸಿನ ಗೆಲುವಿಗೆ ತಳಹದಿ. ಸಾಧನೆಯ ಹಾದಿಯಲ್ಲಿ ಅನುಭವಿಸುವ ಗೆಲುವು ನಮ್ಮಲ್ಲಿ ಆತ್ಮವಿಶ್ವಾಸ ಮೂಡಿಸಿದರೆ, ಸೋಲು ನಮ್ಮ ತಪ್ಪನ್ನು ಸರಿಮಾಡಿಸಿಕೊಂಡು ಮುನ್ನೆಡಯಲು ಮಾರ್ಗದರ್ಶನ ನೀಡುತ್ತದೆ ಎಂದರು.

ಈ ಸಂದರ್ಭ ಸಂಸ್ಥೆಯ ಮುಖ್ಯ ಶಿಕ್ಷಕಿ ವೃಂದಾ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕ ಗಣೇಶ್ ಜಾಲ್ಸೂರು ಕಾರ್ಯಕ್ರಮ ನಿರ್ವಹಿಸಿದರು.






































































