ಕಂಚಿನಡ್ಕದಲ್ಲಿ ಟೋಲ್‌ಗೇಟ್ ನಿರ್ಮಾಣಕ್ಕೆ ಟೆಂಡರ್ ಆಹ್ವಾನ
ಕಾರ್ಕಳ : ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿಗೆ ಟೋಲ್ ಗುಮ್ಮ ಮತ್ತೆ ಬಂದಿದೆ. ಪಡುಬಿಡ್ರಿ ಸಮೀಪ ಕಂಚಿನಡ್ಕದಲ್ಲಿ ಟೋಲ್‌ಗೇಟ್ ಪ್ರಾರಂಭಿಸಲು ಮತ್ತೊಮ್ಮೆ ಟೆಂಡರು ಕರೆಯಲಾಗಿದ್ದು, ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರ ಜೇಬಿಗೆ ಈ ಸಲ ಕತ್ತರಿ ಬೀಳುವುದು ಖಾತರಿ ಎನ್ನಲಾಗುತ್ತಿದೆ. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (ಕೆಆರ್‌ಡಿಸಿಎಲ್) ಟೋಲ್‌ಗೇಟ್ ನಿರ್ಮಾಣಕ್ಕೆ ಟೆಂಡರ್ ಆಹ್ವಾನಿಸಿದೆ. ಈ ಹಿಂದೆ ಬೆಳ್ಮಣ್‌ನಲ್ಲಿ ಟೋಲ್‌ಗೇಟ್ ಸ್ಥಾಪಿಸುವ ಪ್ರಸ್ತಾಪ ಇಟ್ಟಾಗ ಉಗ್ರ ಹೋರಾಟ ನಡೆಸಲಾಗಿತ್ತು. ಅಲ್ಲದೆ ಟೆಂಡರ್ ಆಹ್ವಾನಕ್ಕೂ ನಿರೀಕ್ಷಿತ ಪ್ರತಿಕ್ರಿಯೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಂಚಿನಡ್ಕವನ್ನು ಅಂತಿಮಗೊಳಿಸಿ ಹೊಸದಾಗಿ ಟೆಂಡರ್ ಆಹ್ವಾನಿಸಲಾಗಿದೆ.
ಬೆಳ್ಮಣ್‌ನಲ್ಲಿ ಟೋಲ್‌ಗೇಟ್ ಸ್ಥಾಪಿಸಿದರೆ ವಾಹನಗಳು ಮುದರಂಗಡಿ ಮೂಲಕ ಸಂಚರಿಸುವ ಆಯ್ಕೆ ಇದೆ. ಹೀಗಾದರೆ ಸಾಕಷ್ಟು ಟೋಲ್ ಸಂಗ್ರವಾಗಲಿಕ್ಕಿಲ್ಲ ಎಂಬ ಕಾರಣಕ್ಕೆ ಕಂಚಿನಡ್ಕದಲ್ಲೇ ಸ್ಥಾಪಿಸಲು ನಿರ್ಧರಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೆಜಮಾಡಿಯಲ್ಲಿ ಟೋಲ್‌ಗೇಟ್ ಇದೆ. ಕಂಚಿನಡ್ಕದಲ್ಲಿ ಟೋಲ್‌ಗೇಟ್ ಆದರೆ ಮಾರ್ಗ ಬೇರೆ ಆದರೂ ಬರೀ 6 ಕಿ. ಮೀ. ಅಂತರದಲ್ಲಿ ಎರಡು ಟೋಲ್‌ಗೇಟ್ ಇದ್ದಂತಾಗುತ್ತದೆ. ಕಾರ್ಕಳ ಕಡೆಯಿಂದ ಮಂಗಳೂರಿಗೆ ಹೋಗುವವರು 6 ಕಿ. ಮೀ. ಅಂತರದಲ್ಲಿ ಎರಡು ಸಲ ಟೋಲ್ ಪಾವತಿಸಬೇಕಾಗುತ್ತದೆ. ಇದು ಜನರಲ್ಲಿ ಅಸಮಾಧಾನವುಂಟು ಮಾಡಿದ್ದು, ಹೋರಾಟಕ್ಕೆ ತಯಾರಿ ನಡೆಯುತ್ತಿದೆ. ಇಂದು ಟೆಂಡರು ಸಲ್ಲಿಕೆಗೆ ಕೊನೇ ದಿನವಾಗಿದ್ದು, ಆ. 7ರಂದು ಟೆಂಡರ್ ಪರಿಶೀಲನೆ ನಡೆಯಲಿದೆ.






































































