ಸ್ಥಳೀಯಾಡಳಿತಗಳ ಅಭಿವೃದ್ಧಿಯಿಂದ ಮಾದರಿ ಕಾರ್ಕಳಕ್ಕೆ ಮುನ್ನುಡಿ – ಸುನೀಲ್ ಕುಮಾರ್
ಕಾರ್ಕಳ : ಅಭಿವೃದ್ಧಿ ಅಂದಾಗ ರಸ್ತೆ, ಕಟ್ಟಡ, ಸೇತುವೆ ಮಾತ್ರವಲ್ಲ ಅದಕ್ಕಿಂತ ಹೊರತಾಗಿ ಅನೇಕ ಕಾರ್ಯಗಳು ಆಡಳಿತ ವ್ಯವಸ್ಥೆಯಿಂದ ಆಗುತ್ತಿದೆ. ಆದರೆ ಅದು ಗೋಚರಿಸುವುದಿಲ್ಲ ಎಂದು ಮಾಜಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು. ಅವರು ಶುಕ್ರವಾರ ಕುಕ್ಕುಂದೂರು ಗ್ರಾ. ಪಂ. ನಲ್ಲಿ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲೇ ಪ್ರಥಮ
ತ್ಯಾಜ್ಯ ವಿಲೇವಾರಿ ಸ್ಥಳೀಯ ಮಟ್ಟದಿಂದ ಕೇಂದ್ರದವರೆಗಿನ ಬಹುದೊಡ್ಡ ಸವಾಲು. ಈ ನಿಟ್ಟಿನಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಕಾರ್ಕಳದಲ್ಲಿ ಕೈಗೊಂಡ ಹೊಸ ಪ್ರಯೋಗವೇ ನಿಟ್ಟೆಯಲ್ಲಿ ಪ್ರಾರಂಭಗೊಂಡ ಎಂಆರ್ಎಫ್ ಘಟಕ. ಇನ್ನು ಮಲತ್ಯಾಜ್ಯ ನಿರ್ವಹಣೆಗಾಗಿ ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ಕರ್ನಾಟಕದ ಮೊದಲ ಘಟಕವನ್ನು ಆರಂಭಗೊಳಿಸಲಾಗಿತ್ತು, ಇದೀಗ ಗ್ರಾಮೀಣ ಭಾಗದಲ್ಲಿ ಪ್ರಥಮ ಎಂಬಂತೆ ಕುಕ್ಕುಂದೂರು ಗ್ರಾ. ಪಂ. ವ್ಯಾಪ್ತಿಯಲ್ಲಿ ಅಯ್ಯಪ್ಪನಗರದಲ್ಲಿ ಮಲತ್ಯಾಜ್ಯ ಘಟಕ ನಿರ್ಮಾಣಗೊಂಡಿದೆ ಎಂದು ಸುನಿಲ್ ಕುಮಾರ್ ತಿಳಿಸಿದರು.

ಮಾದರಿ ಕಾರ್ಕಳಕ್ಕೆ ಮುನ್ನುಡಿ
ಓದುವ ಆಸಕ್ತಿ ಹೆಚ್ಚಿಸುವ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತೇಜಿಸುವ ನಿಟ್ಟಿನಲ್ಲಿ ವಿಶಾಲವಾದ ಸಭಾಂಗಣದಲ್ಲಿ ಡಿಜಿಟಲ್ ಗ್ರಂಥಾಲಯ ನಿರ್ಮಾಣ, ನರೇಗಾ ಯೋಜನೆಯಡಿಯಲ್ಲಿ ಮಾದರಿ ಶಟಲ್ ಬ್ಯಾಡ್ಮಿಂಟನ್ ಕೋರ್ಟ್ ನಿರ್ಮಾಣ, ಉದ್ಯಾನವನ ನಿರ್ಮಾಣ ಹೀಗೆ ಗ್ರಾಮದ ಸರ್ವಾಂಗೀಣ ಪ್ರಗತಿಗೆ ಪೂರಕವಾದ ಕಾರ್ಯಗಳನ್ನು ಕುಕ್ಕುಂದೂರು ಪಂಚಾಯತ್ ಕೈಗೊಂಡಿದೆ. ಇದೇ ರೀತಿ ತಾಲೂಕಿನ ಸ್ಥಳೀಯಾಡಳಿತಗಳು ಇಂತಹ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಾಗ ಮಾದರಿ ಕಾರ್ಕಳದ ಕನಸಿಗೆ ಮುನ್ನುಡಿಯಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾ. ಪಂ. ಅಧ್ಯಕ್ಷೆ ಶಶಿಮಣಿ ಸಂಪತ್ ಮಾತನಾಡಿ, ಸ್ವರ್ಣ ಕಾರ್ಕಳ ಸ್ವಚ್ಚ ಕಾರ್ಕಳ ಪರಿಕಲ್ಪನೆಗೆ ಪೂರಕವಾಗಿ ಕುಕ್ಕುಂದೂರು ಗ್ರಾಮ ಪಂಚಾಯತ್ ಅಭಿವೃದ್ಧಿಗೊಳ್ಳುತ್ತಿದೆ. ಶಟಲ್ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ, ಎನ್ಎಲ್ಆರ್ಎಂ ಶೆಡ್, ಗ್ರಂಥಾಲಯ, ಎಫ್ಎಸ್ಎಂ ಘಟಕ, ಉದ್ಯಾನವನ, ಕಾಲು ಸಂಕ ನಿರ್ಮಾಣ, ಹೀಗೆ ಗ್ರಾಮದ ಜನತೆಯ ಆರೋಗ್ಯ, ಶೈಕ್ಷಣಿಕ, ಕೃಷಿ ಸೇರಿದಂತೆ ಸಾಮುದಾಯಿಕ ಅಭಿವೃದ್ಧಿಗೆ ಬೇಕಾದ ಕಾರ್ಯ ಚಟುವಟಿಕೆಗಳನ್ನು ಕುಕ್ಕುಂದೂರು ಪಂಚಾಯತ್ ಮಾಡಿಕೊಂಡು ಬಂದಿದೆ. ಕ್ಷೇತ್ರದ ಶಾಸಕರಾದ ವಿ. ಸುನಿಲ್ ಕುಮಾರ್ ಅವರ ಮಾರ್ಗದರ್ಶನ ಮತ್ತು ಸರಕಾರದ ಅನುದಾನದ ಮೂಲಕ ಜನತೆಗೆ ಸವಲತ್ತುಗಳನ್ನು ತಲುಪಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.
ಸವಲತ್ತು ವಿತರಣೆ
ಹಕ್ಕುಪತ್ರ, ವೈದಕೀಯ ನೆರವು, ವಿಶೇಷ ಚೇತನ, ಪ. ಜಾತಿ ಮತ್ತು ಪ. ಪಂಗಡವರಿಗೆ ಸಹಾಯಧನ ಸೇರಿದಂತೆ ಸರಕಾರದ ವಿವಿಧ ಸವಲತ್ತುಗಳನ್ನು ಗ್ರಾಮದ ಅರ್ಹ ಫಲಾನುಭವಿಗಳಿಗೆ ಈ ಸಂದರ್ಭ ವಿತರಿಸಲಾಯಿತು.
ಸನ್ಮಾನ
ಕೆನರಾ ಬ್ಯಾಂಕ್ ಸಿಎಸ್ಆರ್ ನಿಧಿಯಿಂದ ಪಂಚಾಯತ್ಗೆ 2 ಲ. ರೂ. ದೇಣಿಗೆ ನೀಡಿದ್ದು, ಬ್ಯಾಂಕ್ನ ಮ್ಯಾನೇಜರ್ ಮೋಹನ್ ಕುಮಾರ್ ಅವರನ್ನು ಹಾಗೂ ಗುತ್ತಿಗೆದಾರ ಚಂದ್ರಶೇಖರ್ ಶೆಟ್ಟಿ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.
ಪಂಚಾಯತ್ ಉಪಾಧ್ಯಕ್ಷ ಅನಿಲ್ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರದೀಪ್ ಶೆಟ್ಟಿ ಸ್ವಾಗತಿಸಿದರು. ಸಂತೋಷ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ರವಿ ಕುಮಾರ್ ಶೆಟ್ಟಿ ವಂದಿಸಿದರು.


































































