ಯಾವುದೇ ಒಂದು ಸಾಮೂಹಿಕ ಕುಟುಂಬ ವಾಸದ ಮನೆಯಲ್ಲಿ ಹಿಂಸೆ ಅಥವಾ ಶೋಷಣೆಗೆ ಒಳಗಾಗುವ ಮಹಿಳೆಯರಿಗೆ ಮತ್ತು ಸಂವಿಧಾನದ ಪ್ರಕಾರ ಅವರು ಹೊಂದಿರುವ ವಿವಿಧ ರೀತಿಯ ಹಕ್ಕುಗಳಿಗೆ ಪರಿಣಾಮಕಾರಿಯಾಗಿ ಮತ್ತು ಕಾನೂನಿನ ನಿಯಮಾನುಸಾರವಾಗಿ ರಕ್ಷಣೆಯನ್ನು ನೀಡುವ ಸಲುವಾಗಿ ಗೃಹ ಸಂಬಂಧ ಹಿಂಸೆಯಿಂದ ಮಹಿಳೆಯರ ರಕ್ಷಣೆ ಅಧಿನಿಯಮ, 2005 ಎಂಬ ಕಾನೂನನ್ನು ಕೇಂದ್ರ ಸರಕಾರವು ಸೆ. 13 2005 ರಂದು ಜಾರಿಗೆ ತಂದಿರುತ್ತದೆ.
ಸಾಮೂಹಿಕ ಕುಟುಂಬದ ವಾಸದ ಮನೆ ಎಂದರೆ ಹಿಂಸೆ ಅಥವಾ ಶೋಷಣೆಗೆ ಒಳಗಾಗುವ ಬಾಧಿತ ಮಹಿಳೆ ತಾನು ಒಂಟಿಯಾಗಿ ಅಥವಾ ತನ್ನ ಗಂಡ ಅಥವಾ ಆತನ ಸಂಬಂಧಿಕರು ಒಟ್ಟಾಗಿ ವಾಸಿಸುತ್ತಿದ್ದ ಮನೆಯಾಗಿರುತ್ತದೆ. ಇದಕ್ಕೆ ಶೇರ್ಡ್ ಹೌಸ್ ಹೋಲ್ಡ್ ಎನ್ನುತ್ತಾರೆ. ಸದರಿ ಮನೆಯಲ್ಲಿ ವಾಸಿಸುವ ಮಹಿಳೆಯು ತಾನು ಯಾವುದೇ ರೀತಿಯ ಹಕ್ಕನ್ನು ಹೊಂದಿರಲೇಬೇಕೆಂದಿರುವುದಿಲ್ಲ. ಒಟ್ಟಾರೆ ಆಕೆಯು ತಾನು ವಾಸ ಮಾಡುವ ಮನೆಗೆ ಸಂಬಂಧಪಟ್ಟ ಕುಟುಂಬದ ಸದಸ್ಯಳಾಗಿರಬೇಕು, ಮತ್ತು ಯಾವುದೇ ನಿರ್ದಿಷ್ಟ ಕಾಲದಲ್ಲಿ ಹಿಂಸೆ ಅಥವಾ ಶೋಷಣೆಗೆ ಕಾರಣಕರ್ತರಾದವರೊಂದಿಗೆ ಒಟ್ಟಿಗೆ ವಾಸ ಮಾಡುತ್ತಿರಬೇಕು.
ಮೇಲ್ಕಾಣಿಸಿದ ಕಾನೂನಿನ ಪ್ರಕಾರ ಸಾಮೂಹಿಕ ಕುಟುಂಬದ ವಾಸದ ಮನೆಯಲ್ಲಿ ತನ್ನೊಂದಿಗೆ ವಾಸ ಮಾಡುತ್ತಿರುವ ಕುಟುಂಬದ ಇತರ ಸದಸ್ಯರು ಮಾನಸಿಕ ಅಥವಾ ದೈಹಿಕ ಹಿಂಸೆ ಅಥವಾ ಕಿರುಕುಳವನ್ನು ನೀಡಿದ ಸಂದರ್ಭದಲ್ಲಿ ಬಾಧಿತ ಮಹಿಳೆಯು ತಾನು ವಾಸ ಅಥವಾ ನೌಕರಿ ಮಾಡುವ ಪ್ರದೇಶದ ಪೋಲಿಸ್ ಅಧಿಕಾರಿಗಳಿಗೆ ಅಥವಾ ಸರಕಾರದ ಶಿಶು ಮತ್ತು ಮಹಿಳಾ ಕಲ್ಯಾಣ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ (ಸಿ.ಡಿ.ಪಿ.ಓ.) ನ್ಯಾಯಾಂಗ ಮ್ಯಾಜಿಸ್ಟ್ರೇಟರಿಗೆ ಅಥವಾ ಸರಕಾರದಿಂದ ಮಾನ್ಯತೆ ಪಡೆದಿರುವ ಯಾವುದೇ ಸಂಘ ಅಥವಾ ಸೇವಾ ಸಂಸ್ಥೆಗಳಿಗೆ ದೂರನ್ನು ಸಲ್ಲಿಸಿ ಸೂಕ್ತ ರಕ್ಷಣೆಯನ್ನು ಪಡೆಯಬಹುದಾಗಿದೆ. ಇಂತಹ ಸಂಧರ್ಭದಲ್ಲಿ ದೂರನ್ನು ಪಡೆಯುವ ಯಾವುದೇ ಪೊಲೀಸ್ ಅಧಿಕಾರಿ ಅಥವಾ ರಕ್ಷಣಾಧಿಕಾರಿಯು ದೂರಿನಲ್ಲಿ ಉಲ್ಲೇಖಿಸಿರುವ ಘಟನೆಯ ಕುರಿತು ಸೂಕ್ತ ವರದಿಯನ್ನು ಸಂಬಂಧಪಟ್ಟ ನ್ಯಾಯಾಂಗ ಮ್ಯಾಜಿಸ್ಟ್ರೇಟರಿಗೆ ಸಲ್ಲಿಸಬೇಕಾಗುತ್ತದೆ ಮತ್ತು ಇಂತಹ ವರದಿಯ ಆಧಾರದಲ್ಲಿ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ತಪ್ಪಿತಸ್ಥರ ವಿರುದ್ದ ಸೂಕ್ತ ಕಾನೂನು ಕ್ರಮವನ್ನು ಜರುಗಿಸಿ ಅವರಿಗೆ ಶಿಕ್ಷೆಯನ್ನು ನೀಡಬೇಕಾಗುತ್ತದೆ ಮಾತ್ರವಲ್ಲದೆ ಘಟನೆಯಿಂದ ನೊಂದ ಬಾಧಿತ ಮಹಿಳೆಗೆ ಮೇಲ್ಕಾಣಿಸಿದ ಕಾನೂನಿನ ಪ್ರಕಾರ ನೀಡಲ್ಪಡಬಹುದಾದ ವಿವಿಧ ಪರಿಹಾರಗಳನ್ನು ತಪ್ಪಿತಸ್ಥರು ಅಂದರೆ ಎದ್ರಿದಾರರಿಂದ ಕೊಡಿಸುವ ಬಗ್ಗೆ ಸೂಕ್ತ ಆದೇಶವನ್ನು ಮಾಡಿ ಜಾರಿಗೊಳಿಸಬಹುದಾಗಿದೆ.

ಈ ರೀತಿಯಾಗಿ ಮಾಡುವ ಕೋರ್ಟ್ ಆದೇಶವನ್ನು ಪರಿಪಾಲಿಸುವಲ್ಲಿ ವಿಫಲರಾಗುವ ವ್ಯಕ್ತಿಗಳಿಗೆ ತಕ್ಕ ಶಿಕ್ಷೆಯನ್ನು ನೀಡುವ ಮತ್ತು ಅವರ ಆಸ್ತಿಯನ್ನು ಮುಟ್ಟುಗೋಲು ಹಾಕುವ ಕಾನೂನು ಬದ್ಧ ಅಧಿಕಾರವನ್ನು ಸಹ ನ್ಯಾಯಾಲಯವು ಹೊಂದಿರುತ್ತದೆ. ಮೇಲ್ಕಾಣಿಸಿದ ಅಧಿನಿಯಮದ ಪ್ರಕಾರ ಸಾಮೂಹಿಕ ಕುಟುಂಬದಲ್ಲಿ ವಾಸವಾಗಿರುವ ಮಹಿಳೆಗೆ ವಾಸವಾಗಿರುವ ಕುಟುಂಬದ ಇತರ ಸದಸ್ಯರುಗಳು ಉದ್ದೇಶಪೂರ್ವಕವಾಗಿ ಸೂಕ್ತ ಆಶ್ರಯವನ್ನು ನಿರಾಕರಿಸಿದ್ದಲ್ಲಿ, ಅವಳಿಗೆ ವೈದ್ಯಕೀಯ ಸೌಲಭ್ಯಗಳನ್ನು ನಿರಾಕರಿಸಿದ್ದಲ್ಲಿ, ಆಕೆಯ ದೈನಂದಿನ ಜೀವನಕ್ಕೆ ಅವಶ್ಯಕವಾಗಿರುವ ವಿವಿಧ ಅವಶ್ಯಕತೆಗಳನ್ನು ಪೂರೈಸದಿದ್ದಲ್ಲಿ, ಅವಮಾನಿಸಿ ಆಕೆಗೆ ಮಾನಸಿಕ ಒತ್ತಡವನ್ನು ಉಂಟುಮಾಡಿದ್ದಲ್ಲಿ, ಅವಳ ವಿರುದ್ಧ ಯಾವುದೇ ರೀತಿಯ ಶಿಕ್ಷಾರ್ಹ ಅಪರಾಧವನ್ನು ನಡೆಸಿದಲ್ಲಿ ನೊಂದ ಮಹಿಳೆಯು ನೇರವಾಗಿ ಅಥವಾ ಮೇಲೆ ಹೇಳಿದ ರಕ್ಷಣಾಧಿಕಾರಿಯವರ ಮುಖಾಂತರ ನ್ಯಾಯಾಂಗ ಮ್ಯಾಜಿಸ್ಟ್ರೇಟ್ರಿಗೆ ದೂರನ್ನು ಸಲ್ಲಿಸಿ ತಾನು ಸಾಮೂಹಿಕ ಕುಟುಂಬ ವಾಸದ ಮನೆಯಲ್ಲಿ ವಾಸಿಸುವ ಹಕ್ಕು, ತನಗೆ ಅಗತ್ಯವಿರುವ ರಕ್ಷಣೆ ಕುರಿತು ಆದೇಶ, ತಾನು ವಾಸಿಸುವ ಸಾಮೂಹಿಕ ಕುಟುಂಬ ವಾಸದ ಮನೆಯನ್ನು ಮಾರಾಟ ಮಾಡದಂತೆ, ತನಗೆ ಅವಶ್ಯಕವಿರುವ ವಾಸದ ಮನೆಯನ್ನು ಒದಗಿಸುವಂತೆ, ಇತ್ಯಾದಿ ವಾಸದ ಆದೇಶವನ್ನು, ಗೃಹ ಸಂಬಂಧ ಹಿಂಸೆಯ ಪರಿಣಾಮವಾಗಿ ಉಂಟಾಗಿರುವ ನಷ್ಟದ ಕುರಿತು ಸೂಕ್ತ ಹಣಕಾಸಿನ ಪರಿಹಾರವನ್ನು, ವ್ಯೆದ್ಯಕೀಯ ವೆಚ್ಚವನ್ನು, ಗಳಿಕೆಗಳ ನಷ್ಟವನ್ನು, ಜೀವನಾಂಶ ಮತ್ತಿತರ ಹಣಕಾಸಿನ ಪರಿಹಾರಗಳನ್ನು ಪಡೆಯುವ ಬಗ್ಗೆ ಸೂಕ್ತ ಆದೇಶವನ್ನು ನ್ಯಾಯಾಲಯದಿಂದ ಪಡೆಯಬಹುದಾಗಿದೆ.












































