ಕಾರ್ಕಳ : ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಹಾಗೂ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಗ್ಯಾಸ್ಟ್ರೊ ಎಂಟಿರೋಲಜಿ ಮತ್ತು ಹೆಪಟಾಲಜಿ ವಿಭಾಗದ ಸಹಯೋಗದಲ್ಲಿ ವಿಶ್ವ ಹೆಪಟೈಟಿಸ್ ದಿನದ ಅಂಗವಾಗಿ ಕಾರ್ಕಳದ ಡಾ.ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆಯಲ್ಲಿ ಆ. 2 ರಿಂದ 5 ವರೆಗೆ ಹೆಪಟೈಟಿಸ್ ಜಾಗೃತಿ ಕಾರ್ಯಕ್ರಮ ಮತ್ತು ಹೆಪಟೈಟಿಸ್ ಉಚಿತ ತಪಾಸಣಾ ಶಿಬಿರ ನಡೆಯಲಿದೆ.
ಆ. 2 ರಂದು ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ಉಪ ವೈದ್ಯಕೀಯ ಅಧೀಕ್ಷಕ ಹಾಗೂ ಗಾಸ್ಟ್ರೋ ಎಂಟಿರೋಲಜಿ ವಿಭಾಗ ಮುಖ್ಯಸ್ಥ ಡಾ. ಶಿರನ್ ಶೆಟ್ಟಿ, ಹೆಪಟೈಟಿಸ್ ಕಾಯಿಲೆಯ ರೋಗಲಕ್ಷಣಗಳ ಕುರಿತು ಮಾಹಿತಿ ನೀಡಿ, ಕಾಯಿಲೆ ಇಲ್ಲದವರು ಲಸಿಕೆ ಹಾಕಿಸಿ ಕಾಯಿಲೆ ಬರದಂತೆ ತಡೆಯಲು ಸಾಧ್ಯ. ಕಾಯಿಲೆ ಇದ್ದಲ್ಲಿ ಸಕಾಲದಲ್ಲಿ ಚಿಕಿತ್ಸೆ ಪಡೆಯುವ ಮೂಲಕ ಸಂಪೂರ್ಣವಾಗಿ ಗುಣಪಡಿಸಿಕೊಳ್ಳಬಹುದು ಎಂದರು.
ರೋಟರಿ ಸಂಸ್ಥೆಯ ಮಾಜಿ ರಾಜ್ಯಪಾಲ ಡಾ. ಭರತೇಶ್ ಮಾತನಾಡಿ, ದೇಹದಲ್ಲಿ ಜೀರ್ಣಕ್ರಿಯೆ ಸರಾಗವಾಗಿ ನಡೆಯಬೇಕಾದರೆ ಯಕೃತ್ ಆರೋಗ್ಯಕರವಾಗಿ ಕಾರ್ಯನಿರ್ವಹಿಸುವುದು ಅವಶ್ಯ. ಈ ನಿಟ್ಟಿನಲ್ಲಿ ಸೂಕ್ತ ಆಹಾರ ಸೇವನೆ, ನಿಯಮಿತ ವ್ಯಾಯ್ಯಾಮ, ನಿಯಮಿತ ಆರೋಗ್ಯ ತಪಾಸಣೆ ಸೇರಿದಂತೆ ಮೊದಲಾದ ಆರೋಗ್ಯ ಸಲಹೆ ನೀಡಿದರು.
ಡಾ.ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಕೀರ್ತಿನಾಥ್ ಬಳ್ಳಾಲ್ ಮಾತನಾಡಿ, ಆ. 2 ರಿಂದ 5 ರವರೆಗೆ ಬೆಳಿಗ್ಗೆ 9.30ರಿಂದ ಸಂಜೆ 4.30 ರವರೆಗೆ ಹೆಪಟೈಟಿಸ್ ಉಚಿತ ತಪಾಸಣಾ ಶಿಬಿರ ನಡೆಸುವುದಾಗಿ ತಿಳಿಸಿದರು.

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿಯ ಅಧ್ಯಕ್ಷ ಸುರೇಶ್ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅನುಷಾ ಪ್ರಭು ಕಾರ್ಯಕ್ರಮ ನಿರೂಪಿಸಿ, ಆಶ್ಲೋನ್ ವಂದಿಸಿದರು.
























