ದೇವಾಲಯ ಕೆಡವಿ ಮಸೀದಿ ನಿರ್ಮಿಸಲಾಗಿದೆಯೆ ಎಂದು ತೀರ್ಮಾನಿಸಲು ಸರ್ವೆ
ಹೊಸದಿಲ್ಲಿ : ವಾರಾಣಸಿಯ ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆಗೆ ಅಲಹಾಬಾದ್ ಹೈಕೋರ್ಟ್ ಅನುಮತಿ ನೀಡಿದೆ. ಹೈಕೋರ್ಟ್ ಜುಲೈ 27ರಂದು ಎರಡೂ ಕಡೆಯ ವಿಚಾರಣೆಯ ನಂತರ ತೀರ್ಪನ್ನು ಕಾಯ್ದಿರಿಸಿತ್ತು. ಇದೀಗ ತೀರ್ಪು ಹೊರಬಂದಿದ್ದು, ವೈಜ್ಞಾನಿಕ ಸಮೀಕ್ಷೆಗೆ ಕೋರ್ಟ್ ಸಮ್ಮತಿ ನೀಡಿದೆ.
ಹೈಕೋರ್ಟ್ ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದು ಸರ್ವೆ ನಡೆಸಲು ಪುರಾತತ್ವ ಇಲಾಖೆಗೆ ಅನುಮತಿ ನೀಡಿ ತೀರ್ಪು ನೀಡಿದೆ. ಸರ್ವೆಗೆ ತಡೆ ನೀಡುವಂತೆ ಕೋರಿದ್ದ ಮಸೀದಿ ಮಂಡಳಿ ಅರ್ಜಿ ವಜಾಗೊಳಿಸಿದೆ. ಹಲವು ಷರತ್ತು ವಿಧಿಸಿ ಸರ್ವೆ ನಡೆಸಲು ಅನುಮತಿ ನೀಡಲಾಗಿದೆ.
ಜ್ಞಾನವಾಪಿ ಮಸೀದಿ ಸಂಕೀರ್ಣದ ಎಎಸ್ಐ ಸಮೀಕ್ಷೆಯನ್ನು ಪ್ರಾರಂಭಿಸಲಾಗುವುದು ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ ಎಂದು ಜ್ಞಾನವಾಪಿ ಸರ್ವೆ ಪ್ರಕರಣದಲ್ಲಿ ಹಿಂದೂ ಪರವಾಗಿ ವಿಷ್ಣು ಶಂಕರ್ ಜೈನ್ ಸುದ್ದಿಗಾರರಿಗೆ ತಿಳಿಸಿದರು.
ಜು. 21ರಂದು ವಾರಾಣಸಿಯ ನ್ಯಾಯಾಲಯ ಹಿಂದೂ ದೇವಾಲಯವನ್ನು ನೆಲಸಮಗೊಳಿಸಿ ಬಳಿಕ ಹೆಗ್ಗುರುತಾಗಿರುವ ಮಸೀದಿಯನ್ನು ನಿರ್ಮಿಸಲಾಗಿದೆಯೇ ಎಂದು ನಿರ್ಧರಿಸುವ ಏಕೈಕ ಮಾರ್ಗ ಸಮೀಕ್ಷೆ ಎಂದು ನಾಲ್ವರು ಮಹಿಳೆಯರ ಅರ್ಜಿಯ ಆಧಾರದ ಮೇಲೆ ಆದೇಶ ನೀಡಿತ್ತು. ಈ ಮಸೀದಿ ಕಾಶಿ ವಿಶ್ವನಾಥ ದೇವಾಲಯದ ಪಕ್ಕದಲ್ಲಿಯೇ ಇದೆ.









































